ಡೇರ್ ಅಲ್ ಬಲಾ (ಗಾಜಾ ಪಟ್ಟಿ): ಯುದ್ಧ ಆರಂಭವಾದ 15 ತಿಂಗಳ ನಂತರ ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಭಾನುವಾರ ಜಾರಿಯಾಗಿದೆ. ಆದರೆ ಅಂದುಕೊಂಡಂತೆ ನಿಗದಿತ ಸಮಯವಾದ ಬೆಳಗ್ಗೆ 8.30ಕ್ಕೆ ಜಾರಿಗೆ ಬರದೇ 3 ತಾಸು ವಿಳಂಬವಾಗಿ ಮಧ್ಯಾಹ್ನ 11.30ಕ್ಕೆ ಆರಂಭವಾಗಿದೆ.
ಕದನವಿರಾಮ ಒಪ್ಪಂದದ ಪ್ರಕಾರ ಹಮಾಸ್ ಉಗ್ರರು, ಬಿಡುಗಡೆ ಮಾಡಲಿರುವ ಇಸ್ರೇಲಿ ಒತ್ತೆಯಾಳುಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಕದನವಿರಾಮ ಜಾರಿ ವೇಳೆಯಾದ ಬೆಳಗ್ಗೆ 8.30 ಆದರೂ ಮಾಡಲಿಲ್ಲ. ಹೀಗಾಗಿ, ’ಪಟ್ಟಿ ಬಿಡುಗಡೆ ಆಗುವವರೆಗೂ ಕದನವಿರಾಮ ಜಾರಿ ಮಾಡಲ್ಲ’ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು 8.30ರ ಸುಮಾರಿಗೆ ಘೋಷಿಸಿದರು. ಹೀಗಾಗಿ ಈ ವೇಳೆ ಗಾಜಾ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 8 ಮಂದಿ ಹತರಾದರು.
ಬಳಿಕ 3 ತಾಸಿನ ವಿಳಂಬದ ನಂತರ ಹಮಾಸ್ ಉಗ್ರರು 3 ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದರು. ಹೀಗಾಗಿ 3 ತಾಸು ವಿಳಂಬದ ನಂತರ ಕದನವಿರಾಮ ಜಾರಿಯಾಯಿತು. ರಾತ್ರಿ ವೇಳೆಗೆ ರೆಡ್‌ಕ್ರಾಸ್ ಮಧ್ಯಸ್ಥಿಕೆಯಲ್ಲಿ 3 ಒತ್ತೆಯಾಳುಗಳನ್ನು ಹಮಾಸ್, ಇಸ್ರೇಲ್‌ಗೆ ಹಸ್ತಾಂತರಿಸಿತು.
ಇದು 42 ದಿನಗಳ ಕದನ ವಿರಾಮ ಆಗಿದ್ದು, ಸಮಯದಲ್ಲಿ, ಹಮಾಸ್ ಉಗ್ರಗಾಮಿಗಳು 33 ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಲಿದ್ದಾರೆ ಮತ್ತು ಇಸ್ರೇಲ್ ನೂರಾರು ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡುತ್ತದೆ. ಒತ್ತೆಯಾಳುಗಳ ಬಿಡುಗಡೆ ಭರವಸೆ ಈಡೇರಿಕೆಯ ಪ್ರಮಾಣ ಆಧರಿಸಿ ಕಾಯಂ ಕದನವಿರಾಮದ ಬಗ್ಗೆ ಚರ್ಚೆಗಳು ನಡೆಯಲಿವೆ.
47 ಸಾವಿರ ಜನ ಬಲಿ:
ಇಸ್ರೇಲ್-ಹಮಾಸ್ ನಡುವೆ 2023ರ ಆ.7ರಂದು ಸಂಘರ್ಷ ಆರಂಭವಾಗಿತ್ತು. ಹಮಾಸ್ ಮೊದಲು ನಡೆಸಿದ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗಳು ಸಾವನ್ನಪ್ಪಿದ್ದರು. 251 ಜನರನ್ನು ಹಮಾಸ್ ಉಗ್ರರು ಅಪಹರಿಸಿ ಒತ್ತೆಯಾಳು ಮಾಡಿಕೊಂಡಿದ್ದರು. ಇದರಿಂದ ಕ್ರುದ್ಧಗೊಂಡ ಇಸ್ರೇಲ್, ಪ್ರತಿದಾಳಿ ನಡೆಸಿ ಗಾಜಾದಲ್ಲಿನ 46,899 ಜನರನ್ನು ಈವರೆಗೆ ಸಾಯಿಸಿದೆ.