ಪಿಟಿಐ ನವದೆಹಲಿ
ಇತ್ತೀಚೆಗೆ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ನಾಗರಿಕ ವಿಮಾನಯಾನ ಬ್ಯೂರೋ (ಬಿಸಿಎಎಸ್) ಬುಧವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ‘ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನ ಗುಪ್ತನಾಮ ಅಥವಾ ಅನಾಮಧೇಯತೆಯ ಸ್ವರೂಪ, ವಿಮಾನಗಳಲ್ಲಿನ ವಿಐಪಿಗಳ ಉಪಸ್ಥಿತಿ ಹಾಗೂ ದೇಶ/ವಿದೇಶಗಳ ಪರಿಸ್ಥಿತಿ, ಬೆದರಿಕೆಯ ಸ್ವರೂಪ...- ಇವನ್ನು ಗಮನಿಸಿ ಭದ್ರತಾ ಏಜೆನ್ಸಿಗಳ ತೀರ್ಮಾನ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿದೆ.ಕಳೆದ 2 ವಾರದಲ್ಲಿ 510 ಬಾಂಬ್ ಬೆದರಿಕೆ ಕರೆಗಳು ಸೋಷಿಯಲ್ ಮೀಡಿಯಾಗಳ ಮೂಲಕ ಹಾಗೂ ಫೋನ್ ಕರೆಗಳ ಮೂಲಕ ವಿಮಾನಗಳಿಗೆ ಬಂದಿವೆ. ಎಲ್ಲ ಬೆದರಿಕೆಗಳೂ ಹುಸಿ ಎಂದು ಸಾಬೀತಾಗಿವೆ ಈ ರೀತಿಯ ಹುಸಿ ಬೆದರಿಕೆಗಳಿಂದ ಕೋಟ್ಯಂತರ ರು. ನಷ್ಟ ಆಗಿತ್ತು ಹಾಗೂ ಜನರ ಅಮೂಲ್ಯ ಸಮಯ ವ್ಯರ್ಥ ಆಗಿದೆ.
ಹೀಗಾಗಿ ಇಂಥ ಅನಾನುಕೂಲತೆ ತಪ್ಪಿಸಲು ಹೊಸ ಪ್ರೋಟೋಕಾಲ್ ಪ್ರಕಾರ, ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಗೆ (ಬಿ-ಟ್ಯಾಕ್) ಕೆಲವು ನಿರ್ದೇಶನ ನೀಡಲಾಗಿದೆ.ಹೊಸ ಮಾರ್ಗಸೂಚಿ ಏನು?
ಬಿ-ಟ್ಯಾಕ್ ಸಮಿತಿಯು ಬೆದರಿಕೆ ಹಾಕುವ ವ್ಯಕ್ತಿ ಅಥವಾ ಸಂಘಟನೆಯ ಗುರುತನ್ನು ದೃಢೀಕರಿಸಲು ಯತ್ನಿಸುತ್ತದೆ. ವ್ಯಕ್ತಿಯು ಭಯೋತ್ಪಾದಕ ಅಥವಾ ನಿಷೇಧಿತ ಸಂಘಟನೆಗೆ ಸೇರಿದವರು ಎಂದು ನೋಡಲು ಗುರುತು ದೃಢೀಕರಣಗಳನ್ನು ಪರಿಶೀಲಿಸುತ್ತದೆ.ಬೆದರಿಕೆ ಹಾಕಲಾದ ಸಾಮಾಜಿಕ ಮಾಧ್ಯಮ ಖಾತೆಯು ಅನಾಮಧೇಯ ಅಥವಾ ಹುಸಿನಾಮವಾಗಿದೆಯೇ ಮತ್ತು ಅದೇ ಹ್ಯಾಂಡಲ್ ಅನ್ನು ಅನೇಕ ಬೆದರಿಕೆಗಳನ್ನು ನೀಡಲು ಬಳಸಲಾಗಿದೆಯೇ ಎಂದು ತಿಳಿಯಲು ಯತ್ನಿಸುತ್ತದೆ.
ಬೆದರಿಕೆಯು ನಿರ್ದಿಷ್ಟ ವಿಮಾನ ಸಂಖ್ಯೆ ಹೊಂದಿದೆಯೇ ಅಥವಾ ವಿಮಾನ ಸಂಖ್ಯೆ ಇಲ್ಲದೇ ಯಾದೃಚ್ಛಿಕವಾಗಿ ಯಾವುದೋ ವಿಮಾನಕ್ಕೆ ಹಾಕಲಾಗಿದೆಯೇ ಎಂಬುದನ್ನು ವಿಶ್ಲೇಷಿಸಲಾಗುತ್ತದೆ.ಬೆದರಿಕೆ ಉದ್ದೇಶ ಏನು ಎಂದು ತಿಳಿಯಲು ಬೆದರಿಕೆಯ ದೇಶದ/ವಿಶ್ವದ ಪ್ರಸಕ್ತ ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ತಿಳಿಯುತ್ತದೆ. ಅಂದರೆ ಬೆದರಿಕೆಯು ಈಗಿನ ಪರಿಸ್ಥಿತಿಗೆ ಸಂಬಂಧಿಸಿದ್ದೇ ಎಂದು ತಿಳಿಯುತ್ತದೆ.
ಬೆದರಿಕೆಗೆ ಒಳಗಾದ ವಿಮಾನದಲ್ಲಿ ವಿಐಪಿ ಅಥವಾ ವಿವಿಐಪಿ ಇದ್ದಾರಾ ಎಂಬುದನ್ನು ಬಿ-ಟ್ಯಾಕ್ ತಿಳಿಯಲಿದೆ.ಈ ಮೇಲ್ಕಾಣಿಸಿದ ಮಾನದಂಡಗಳಿಗೆ ಅನುಗುಣವಾಗಿ ಬೆದರಿಕೆ ಇದ್ದರೆ ಅವನ್ನು ಗಂಭೀರ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ ಅಂಥವನ್ನು ಗಂಭೀರ ಬೆದರಿಕೆ ಅಲ್ಲ ಎಂದು ಪರಿಗಣಿಸಿ ವಿಮಾನ ಹಾರಾಟಕ್ಕೆ ಅನುಮತಿಸಲಾಗುತ್ತದೆ.