ತಿರುವನಂತಪುರಂ: ಈ ಹಿಂದೆ ದೇಗುಲದ ಗರ್ಭಗುಡಿಗೆ ಸ್ತ್ರೀಯರ ಪ್ರವೇಶದ ವಿಚಾರವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಇದೀಗ ದೇವಸ್ಥಾನದ ಚಿನ್ನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಮತ್ತೆ ಸುದ್ದಿಯಲ್ಲಿದೆ.
ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ವಿಚಾರವಾಗಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ ಎಂಬುವವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಇದೇ ಸಂಗತಿ ಕೇರಳದಲ್ಲಿ ಭಾರೀ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಏನಿದು ವಿವಾದ?:
1998ರಲ್ಲಿ ಉದ್ಯಮಿ ವಿಜಯ್ ಮಲ್ಯ ದೇವಾಲಯದ ಗರ್ಭಗುಡಿ ಮತ್ತು ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನಕ್ಕಾಗಿ 30.3 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರ ದಾನ ಮಾಡಿದ್ದರು. ಬೆಂಗಳೂರಿನ ಉಣ್ಣಿಕೃಷ್ಣನ್ ಪೊಟ್ಟಿ 2019ರಲ್ಲಿ ವಿಗ್ರಹಗಳ ಚಿನ್ನದ ಕವಚಗಳನ್ನು ಮರುಲೇಪನಕ್ಕಾಗಿ ಚೆನ್ನೈಗೆ ಕೊಂಡೊಯ್ದಿದ್ದರು, ಆದರೆ 39 ದಿನಗಳ ಬಳಿಕ ಅದನ್ನು ಹಿಂದಿರುಗಿಸುವಾಗ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿದೆ. ಕವಚವನ್ನು ಕೊಂಡೊಯ್ಯುವಾಗ ಸರಿಯಾದ ದಾಖಲೆಗಳನ್ನು ನಿರ್ವಹಿಸಿಲ್ಲ. ದೇವಾಲಯದ ಅಧಿಕಾರಿಗಳಿಲ್ಲದೆ ಇವನ್ನು ಕೊಂಡೊಯ್ಯಲಾಗಿತ್ತು. ಶಬರಿಮಲೆ ವಿಶೇಷ ಕಮಿಷನರ್ ಅಥವಾ ಕೇರಳ ಹೈಕೋರ್ಟ್‌ನಿಂದ ಮೊದಲೇ ಅನುಮತಿ ಪಡೆದಿರಲಿಲ್ಲ. ಇತ್ತೀಚೆಗೆ ಕವಚಗಳನ್ನು ಪುನಃ ದುರಸ್ತಿಗಾಗಿ ಕಳುಹಿಸಿದಾಗಲೂ ಕೋರ್ಟ್‌ಗೆ ಮಾಹಿತಿ ನೀಡಿರಲಿಲ್ಲ ಎಂಬುದು ಆರೋಪ.
ಹೈಕೋರ್ಟ್‌ನಿಂದ ತನಿಖೆಗೆ ಆದೇಶ:
ಚಿನ್ನದ ವಿಚಾರದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ನಿರ್ಲಕ್ಷ್ಯ ಖಂಡಿಸಿ, ದೇವಾಲಯದ ಎಲ್ಲ ಆಸ್ತಿಗಳ (ಚಿನ್ನ, ಇತರ ವಸ್ತುಗಳು) ಸಂಪೂರ್ಣ ತನಿಖೆಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ಈ ನಡುವೆ, 1998ರಿಂದ 2025ರ ಅವಧಿಯಲ್ಲಿ ನಡೆದ ಚಿನ್ನದ ಲೇಪನದ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಟಿಡಿಬಿ ಮುಂದಾಗಿದೆ.
ರಾಜಕೀಯ ಜಟಾಪಟಿ:
ಇದೀಗ ಪ್ರಕರಣ ರಾಜಕೀಯ ಸಂಘರ್ಷಕ್ಕೂ ನಾಂದಿ ಹಾಡಿದೆ. ವಿರೋಧ ಪಕ್ಷ ಕಾಂಗ್ರೆಸ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದು, ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮತ್ತು ಧಾರ್ಮಿಕ ಸಚಿವ ವಿ.ಎನ್. ವಾಸವನ್ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಬಿಜೆಪಿ ನಾಯಕ ವಿ. ಮುರಳೀಧರನ್ ಸರ್ಕಾರ ಗರ್ಭಗುಡಿಯನ್ನೇ ಮಾರಾಟ ಮಾಡಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ.
-ಬೆಂಗಳೂರಿನ ಉಣ್ಣಿಕೃಷ್ಣನ್ ಪೊಟ್ಟಿ ಮೇಲೆ ಆರೋಪ
-ಕೇರಳ ಹೈಕೋರ್ಟ್‌ನಿಂದ ಸಮಗ್ರ ತನಿಖೆಗೆ ಆದೇಶ
-ರಾಜಕೀಯ ಜಟಾಪಟಿಗೂ ನಾಂದಿ ಹಾಡಿದ ಪ್ರಕರಣ-