ಭೋಪಾಲ್: ಭೋಪಾಲ್ ಸೇರಿದಂತೆ ಮಧ್ಯಪ್ರದೇಶದಲ್ಲಿ ಇರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15,000 ಕೋಟಿ ರು. ಮೌಲ್ಯದ ಪೂರ್ವಜರ ಆಸ್ತಿಗಳು ಶತ್ರು ಆಸ್ತಿ ಕಾಯ್ದೆಯನ್ವಯ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ.
ಈ ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯ ಮಧ್ಯಪ್ರದೇಶ ಹೈಕೋರ್ಟಲ್ಲಿ ನಡೆದಿತ್ತು. ಕಳೆದ ವರ್ಷ ಡಿ.14ರಂದು ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕ ಪೀಠವು ಜಪ್ತಿಗೆ ಇದ್ದ ತಡೆಯಾಜ್ಞೆ ತೆರವು ಮಾಡಿ, ’30 ದಿನಗಳಲ್ಲಿ ಮೇಲ್ಮನವಿ ಪ್ರಾಧಿಕಾರದ ಮುಂದೆ ನಿಮ್ಮ ಅಭಿಪ್ರಾಯ ಸಲ್ಲಿಸಿ ಎಂದು ಪಟೌಡಿ ಕುಟುಂಬಕ್ಕೆ ಸೂಚಿಸಿತ್ತು. ಆದರೆ ಈವರೆಗೂ ಪಟೌಡಿ ಕುಟುಂಬ ಪ್ರತಿಕ್ರಿಯೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಆದೇಶಿಸಿದರೆ ಈ ಎಲ್ಲ ಆಸ್ತಿಗಳು ಸರ್ಕಾರದ ಪಾಲಾಗುವ ಸಾಧ್ಯತೆ ಇದೆ.
1947ರಲ್ಲಿ ಭಾರತ-ಪಾಕ್ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಬಂದ ಭಾರತೀಯ ವ್ಯಕ್ತಿಗಳ ಒಡೆತನದ ಆಸ್ತಿಯನ್ನು ಕೇಂದ್ರ ಸರ್ಕಾರವು ಕ್ಲೇಮ್ ಮಾಡಬಹುದು. ಇದಕ್ಕೆ ಶತ್ರು ಆಸ್ತಿ ಕಾಯ್ದೆ ಎನ್ನುತ್ತಾರೆ.
ಏನಿದು ಆಸ್ತಿ ಕೇಸು?:1947ರಲ್ಲಿ, ಭೋಪಾಲ್ ರಾಜಪ್ರಭುತ್ವದ ರಾಜ್ಯವಾಗಿತ್ತು ಮತ್ತು ಅದರ ಕೊನೆಯ ನವಾಬ್ ಹಮೀದುಲ್ಲಾ ಖಾನ್ ಅವರು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ತಾಯಿಯ ಅಜ್ಜ. ನವಾಬ್ ಹಮೀದುಲ್ಲಾ ಖಾನ್ ಅವರಿಗೆ 3 ಹೆಣ್ಣು ಮಕ್ಕಳಿದ್ದರು, ಅವರಲ್ಲಿ ಹಿರಿಯವಳಾದ ಅಬಿದಾ ಸುಲ್ತಾನ್ 1950 ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
ಅವರ ಎರಡನೇ ಮಗಳು, ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡರು ಮತ್ತು ಸೈಫ್ ಅಲಿ ಖಾನ್ ಅವರ ಅಜ್ಜ ನವಾಬ್ ಇಫ್ತಿಕಾರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು. 2019ರಲ್ಲಿ ನ್ಯಾಯಾಲಯವು ಸಾಜಿದಾ ಸುಲ್ತಾನ್ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಿತು ಮತ್ತು ಆಕೆಯ ಮೊಮ್ಮಗ ಸೈಫ್ ಅಲಿ ಖಾನ್ ಅವರು ಆಸ್ತಿಯ ಪಾಲನ್ನು ಪಡೆದರು.ಆದರೆ, ದೊಡ್ಡಮಗಳು ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ವಲಸೆ ಹೋದ ಪರಿಣಾಮವಾಗಿ ಕೇಂದ್ರ ಸರ್ಕಾರವು ಆಸ್ತಿಗಳನ್ನು ಶತ್ರು ಆಸ್ತಿ ಎಂದು ಹೇಳಿಕೊಂಡಿತ್ತು. ಇದನ್ನು ಪ್ರಶ್ನಿಸಿ ಪಟೌಡಿ ಕುಟುಂಬ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿತ್ತು.
ಈ ಆಸ್ತಿ ಯಾವುವು?ಪಟೌಡಿ ಕುಟುಂಬವು ಭೋಪಾಲ್ ಮತ್ತು ರೈಸೆನ್‌ನಲ್ಲಿ ತಮ್ಮ ಭೂಮಿಯನ್ನು ಕ್ಲೈಮ್ ಮಾಡುತ್ತಿದೆ, ಇದರಲ್ಲಿ ಕೊಹೆಫಿಜಾ ಅವರ ಫ್ಲಾಗ್ ಹೌಸ್, ಅರಮನೆ, ಕೋಠಿ ಮತ್ತು ರೈಸನ್‌ನ ಚಿಕ್ಲೋಡ್‌ನಲ್ಲಿರುವ ಅರಣ್ಯ, ನೂರ್-ಎ-ಸಾಬಾ, ಫ್ಲಾಗ್ ಹೌಸ್, ದಾರ್-ಉಸ್-ಸಲಾಮ್, ಫೋರ್ ಕ್ವಾರ್ಟರ್ಸ್, ನ್ಯೂ ಕ್ವಾರ್ಟರ್ಸ್, ಫರ್ಸ್ ಖಾನಾ, ಕೊಹೆಫಿಜಾ, ಅಹಮದಾಬಾದ್ ಪ್ಯಾಲೇಸ್ ಸೇರಿದಂತೆ ಹಲವು ಆಸ್ತಿಗಳು ತಮಗೇ ಸೇರಿವೆ ಎಂದು ಪಟೌಡಿ ಕುಟುಂಬ ಹೇಳಿಕೊಳ್ಳುತ್ತಿದೆ.