ನವದೆಹಲಿ: ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರಲು ಕೆಲವೇ ದಿನ ಬಾಕಿ ಉಳಿದಿರುವಂತೆಯೇ ಕೇಂದ್ರ ಸರ್ಕಾರವು 2019ರಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಜಾರಿಗೊಳಿಸಿದೆ.
ಈ ಕುರಿತ ಅಧಿಸೂಚನೆಯನ್ನು ಅದು ಸೋಮವಾರ ರಾತ್ರಿ ಪ್ರಕಟಿಸಿದೆ.ಇದರಿಂದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿ.31ಕ್ಕಿಂತ ಮುಂಚೆ ಭಾರತಕ್ಕೆ ಬಂದು ನೆಲೆಸಿದ ಹಿಂದೂಯೇತರರಿಗೆ ಸುಲಭವಾಗಿ ಭಾರತದ ಪೌರತ್ವ ಲಭಿಸಲಿದೆ.
ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಸೂಚಿ ಆಗಿತ್ತು ಎಂಬುದು ಇಲ್ಲಿ ಗಮನಾರ್ಹ.ಆದರೆ ಕಾಂಗ್ರೆಸ್, ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಆದಿಯಾಗಿ ವಿಪಕ್ಷಗಳು ಇದನ್ನು ಚುನಾವಣಾ ಗಿಮಿಕ್ ಎಂದು ಟೀಕಿಸಿವೆ.
ಕೇರಳದಲ್ಲಿ ಇದನ್ನು ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದು, ‘ಮೋದಿ ಸರ್ಕಾರ ನುಡಿದಂತೆ ನಡೆದಿದೆ. 3 ಅಕ್ಕ-ಪಕ್ಕದ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಭಾರತದ ಪೌರತ್ವ ಲಭಿಸಲಿದೆ’ ಎಂದಿದ್ದಾರೆ.
ಏನಿದು ಸಿಎಎ?
ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಲಸಿಗರಿಗೆ ಪೌರತ್ವ ನೀಡುವುದೇ ಸಿಎಎ.
ಆ ದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ನೆರವು ನೀಡುವ ಉದ್ದೇಶದಿಂದ ತಂದಿರುವ ಕಾಯ್ದೆ ಇದು.2014ರ ಡಿ.31ರಂದು ಅಥವಾ ಅದಕ್ಕೂ ಮುನ್ನ ಈ ದೇಶಗಳಿಂದ ಭಾರತಕ್ಕೆ ಬಂದ ಈ ಧರ್ಮದವರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ.
ಪೌರತ್ವ ಪಡೆಯಲು ಈ ದೇಶಗಳಿಂದ ಬಂದ ಈ ನಿರ್ದಿಷ್ಟ ಧರ್ಮದವರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಆನ್‌ಲೈನ್ ವಿಳಾಸವನ್ನು ಕೇಂದ್ರ ಸರ್ಕಾರ ಪ್ರಕಟಿಸಲಿದೆ.
ಪೌರತ್ವ ಪಡೆಯಲು ಇಚ್ಛಿಸುವವರು ಯಾವುದೇ ದಾಖಲೆ ಸಲ್ಲಿಸಬೇಕಿಲ್ಲ. ಕೇವಲ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಈ ಮುನ್ನ 1955ರ ಪೌರತ್ವ ಕಾಯ್ದೆಯಡಿ ದೇಶದ ಆಯ್ದ 31 ಜಿಲ್ಲೆಗಳಲ್ಲಿ ಇವರಿಗೆ ಪೌರತ್ವ ನೀಡಲಾಗುತ್ತಿತ್ತು. ಆದರೆ ಪೌರತ್ವ ಪಡೆಯಲು ಇವರು ಕನಿಷ್ಠ 11 ವರ್ಷ ಭಾರತದಲ್ಲಿ ಇರಬೇಕು ಎಂಬ ನಿಯಮ ಇತ್ತು.
ಈಗ ಈ ನಿಯಮ ಸಡಿಲಿಸಿ 2014, ಡಿ.31ಕ್ಕಿಂತ ಮುನ್ನ 5 ವರ್ಷ ಭಾರತದಲ್ಲಿ ನೆಲೆಸಿದ್ದರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.ಆದರೆ ಈಶಾನ್ಯದ ಬುಡಕಟ್ಟು ಪ್ರದೇಶಗಳಿಗೆ, ಆ ಪ್ರದೇಶಗಳ ಪರಂಪರೆ ಕಾಪಾಡುವ ಉದ್ದೇಶದಿಂದ ಅಲ್ಲಿ ಈ ಕಾಯ್ದೆ ಅನ್ವಯಿಸದು.
4 ವರ್ಷದ ಹಿಂದೆ ಹೋರಾಟ- 100 ಸಾವು: ಸಿಎಎ ವಿರೋಧಿಸಿ 4 ವರ್ಷ ಹಿಂದೆ ದಿಲ್ಲಿ ಶಾಹೀನ್ ಬಾಗ್‌ನಲ್ಲಿ ಧರಣಿ, ಬಂಗಾಳ ಮತ್ತು ಅಸ್ಸಾಂನ ಗುವಾಹಟಿಯಲ್ಲಿ ಸರಣಿ ಪ್ರತಿಭಟನೆ ನಡೆದಿದ್ದವು.
ಆಗ ವಿವಿಧೆಡೆ ಸಂಭವಿಸಿದ ಹಿಂಸಾಚಾರದಲ್ಲಿ 100 ಜನರು ಸಾವನ್ನಪ್ಪಿದ್ದರು. ಸಂಸತ್ತಿನಲ್ಲಿ ಅಂಗೀಕಾರಗೊಂಡು 5 ವರ್ಷಗಳ ನಂತರವೂ, ನಿಯಮಗಳು ಮತ್ತು ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು ಬಾಕಿ ಇದ್ದ ಕಾರಣ ಇದು ಜಾರಿಗೆ ಬಂದಿರಲಿಲ್ಲ.
ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇನ್ನೊಬ್ಬ ಕೇಂದ್ರ ಸಚಿವ ಶಂತನು ಠಾಕೂರ್ ಅವರು, 2019ರಲ್ಲೇ ಸಂಸತ್ತು ಅಂಗೀಕರಿಸಿದ್ದ ಸಿಎಎ ಕಾಯ್ದೆಯನ್ನು ಚುನಾವಣೆಗೂ ಮುನ್ನ ಜಾರಿಗೆ ತರಲಾಗುವುದು ಎಂದಿದ್ದರು. ಅದು ಈಗ ಜಾರಿಗೆ ಬಂದಂತಾಗಿದೆ.