ಲಡಾಖ್‌ ಹೋರಾಟಗಾರ ಸೋನಂ ವಿದೇಶಿ ದೇಣಿಗೆ ಪರವಾನಗಿ ರದ್ದು!

KannadaprabhaNewsNetwork |  
Published : Sep 26, 2025, 01:00 AM IST
ಲಡಾಖ್ | Kannada Prabha

ಸಾರಾಂಶ

ಲಡಾಖ್‌ನಲ್ಲಿ ಜೆನ್‌ ಝೀ ಹಿಂಸಾಚಾರಕ್ಕೆ ಪ್ರೇರಣೆ ನೀಡಿದರು ಎಂಬ ಆಪಾದನೆಗೆ ತುತ್ತಾಗಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ನೇತೃತ್ವದ ಶಿಕ್ಷಣ ಸಂಸ್ಥೆಗೆ ನೀಡಿದ್ದ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.  

  ನವದೆಹಲಿ : ಲಡಾಖ್‌ನಲ್ಲಿ ಜೆನ್‌ ಝೀ ಹಿಂಸಾಚಾರಕ್ಕೆ ಪ್ರೇರಣೆ ನೀಡಿದರು ಎಂಬ ಆಪಾದನೆಗೆ ತುತ್ತಾಗಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ನೇತೃತ್ವದ ಶಿಕ್ಷಣ ಸಂಸ್ಥೆಗೆ ನೀಡಿದ್ದ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಲಡಾಖ್‌ನಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಹಿಂಸಾರೂಪ ಪಡೆದ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಎರಡು ತಿಂಗಳ ಹಿಂದಷ್ಟೇ ಇದೇ ಸಂಸ್ಥೆಗೆ ನೀಡಿದ್ದ ಭೂಮಿಯನ್ನು ನಿಯಮ ಉಲ್ಲಂಘನೆ ಕಾರಣ ನೀಡಿ ಸರ್ಕಾರ ರದ್ದುಪಡಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಕ್ರಮ:

ಸ್ವೀಡನ್‌ನಿಂದ ವಾಂಗ್ಚುಕ್‌ ಅವರ ‘ಲಡಾಖ್‌ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ’ (ಎಸ್‌ಇಸಿಎಂಒಎಲ್‌) ಸಂಸ್ಥೆ ಖಾತೆಗೆ ಬಂದ ಹಣದ ವ್ಯವಹಾರದಲ್ಲಿ ಅಸ್ಪಷ್ಟತೆ ಕಂಡುಬಂದಿದೆ ಮತ್ತು ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ತಕ್ಷಣದಿಂದ ಅವರ ಪರವಾನಗಿ ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಸೋನಂ 35 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದಕ್ಕೆ ಸ್ಥಳೀಯರು ಬೆಂಬಲ ನೀಡಿದ್ದರು. ಈ ಸಂಬಂಧ ಬುಧವಾರ ಕರೆ ಕೊಡಲಾಗಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 4 ಜನರು ಸಾವನ್ನಪ್ಪಿ 60 ಜನರು ಗಾಯಗೊಂಡಿದ್ದರು. ಸೋನಂ ಹೋರಾಟ ಆರಂಭಿಸಿದ ಬೆನ್ನಲ್ಲೇ, ವಿದೇಶಿ ದೇಣಿಗೆ ಸ್ವೀಕರಿಸಲು ಅಗತ್ಯವಾದ ಅನುಮತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಸಿಬಿಐ ತನಿಖೆ ಆರಂಭಿಸಿತ್ತು. ಈಗ ಆರೋಪ ದೃಢವಾಗಿರುವ ಹಿನ್ನೆಲೆ ಪರವಾನಗಿ ರದ್ದುಪಡಿಸಲಾಗಿದೆ.

ಪಾಕ್‌ ಭೇಟಿ:

ಈ ನಡುವೆ ವಾಂಗ್ಚುಕ್‌ ಕೆಲ ಸಮಯದ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅದಾದ ಬೆನ್ನಲ್ಲೇ ರಾಜ್ಯಸ್ಥಾನದ ಹೋರಾಟ ತೀವ್ರಗೊಂಡಿತ್ತು. ಹೀಗಾಗಿ ಈ ಆಯಾಮದಲ್ಲೂ ಅವರ ವಿರುದ್ಧ ಸಿಬಿಐ ಗಮನ ಹರಿಸಿದೆ ಎನ್ನಲಾಗಿದೆ.

ಲಡಾಖ್‌ ಹಿಂಸೆಯಲ್ಲಿ ಕೈವಾಡ?: ಬಿಜೆಪಿ ಆರೋಪ

ಲೇಹ್‌: ರಾಜ್ಯ ಸ್ಥಾನಮಾನಕ್ಕಾಗಿ ಕೇಂದ್ರಾಡಳಿತ ಪ್ರದೇಶದ ಲಡಾಖ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಕಾಂಗ್ರೆಸ್‌ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಗಲಭೆಕೋರರ ಗುಂಪಿನಲ್ಲಿದ್ದ ಕಾಂಗ್ರೆಸ್‌ ಕೌನ್ಸಿಲರ್‌ ಫುಂಟ್ಸಾಗ್ ಸ್ಟ್ಯಾನ್ಜಿನ್ ತ್ಸೆಪಾಗ್ ಫೋಟೋ ಬಿಡುಗಡೆ ಮಾಡಿದೆ. ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ತಮ್ಮ ಎಕ್ಸ್‌ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇಲ್ಲಿನ ವಾರ್ಡ್‌ವೊಂದರ ಕಾಂಗ್ರೆಸ್‌ ಕೌನ್ಸಿಲರ್‌ ತ್ಸೆಪಾಗ್‌ ಅವರು ಉದ್ರಿಕ್ತರ ಗುಂಪನ್ನು ಪ್ರಚೋದಿಸುತ್ತಿರುವುದು ಸೆರೆಯಾಗಿದೆ.

ಜೆನ್‌ ಝೀ ದಂಗೆ ಬಳಿಕ ಸದ್ಯ ಲೇಹ್‌ ಶಾಂತ

ಲೇಹ್‌: ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಜೆನ್‌ ಝೀಗಳ ಪ್ರತಿಭಟನೆಯಿಂದಾಗಿ ಬುಧವಾರ ಭಾರೀ ಹಿಂಸಾಚಾರಕ್ಕೆ ತುತ್ತಾಗಿದ್ದ ಲಡಾಖ್‌ನ ಲೇಹ್‌ನಲ್ಲಿ ಗುರುವಾರ ಪರಿಸ್ಥಿತಿ ಶಾಂತಿಯುತವಾಗಿತ್ತು. ಉಪರಾಜ್ಯಪಾಲ ಕವಿಂದರ್‌ ಗುಪ್ತಾ ಅವರು ಆಡಳಿತದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಭದ್ರತಾ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಕೇಂದ್ರಾಡಳಿತ ಪ್ರದೇಶದ ಸ್ಥಿತಿಗತಿಯನ್ನು ವಿವರಿಸಿದರು. ಲಡಾಖ್‌ ಶಾಂತಸ್ಥಿತಿಗೆ ಮರಳುತ್ತಿದ್ದಂತೆ ಲೇಹ್‌ನಲ್ಲಿ ಜನರು ಎಂದಿನಂತೆ ಅಂಗಡಿ ಮುಗಟ್ಟುಗಳನ್ನು ತೆರೆದು, ತಮ್ಮ ದಿನಚರಿಯನ್ನು ಆರಂಭಿಸಿದರು.ಬುಧವಾರ ಆರಂಭವಾದ ಹಿಂಸಾಚಾರಕ್ಕೆ ನಾಲ್ವರು ಮೃತಪಟ್ಟಿದ್ದು, 80ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಬಿಜೆಪಿ ಕಚೇರಿ ಸುಟ್ಟು ಭಸ್ಮವಾಗಿದ್ದು, ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

PREV
Read more Articles on

Recommended Stories

ರೈಲಿನ ಮೇಲಿಂದ ಅಗ್ನಿ ಕ್ಷಿಪಣಿ ಹಾರಿಸುವ ಪ್ರಯೋಗ ಯಶಸ್ವಿ
ಐ ಲವ್‌ ಮಹಮ್ಮದ್‌ V/S ಮಹಾದೇವ ದಂಗಲ್