ದರ ಏರಿಕೆ ಭರಾಟೆ ಮಧ್ಯೆ ಕೇಂದ್ರ ಸರ್ಕಾರದಿಂದ ಪೆಟ್ರೋಲ್‌, ಡೀಸೆಲ್‌ ತೆರಿಗೆ 2 ರು. ಏರಿಕೆ

KannadaprabhaNewsNetwork | Updated : Apr 08 2025, 05:04 AM IST

ಸಾರಾಂಶ

ದರ ಏರಿಕೆ ಭರಾಟೆ ಮಧ್ಯೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತುಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಳ ಮಾಡಿದೆ. ಆದರೆ ಇದರಿಂದ ಗ್ರಾಹಕರು ಖರೀದಿಸುವ ಪೆಟ್ರೋಲ್ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಮುಂದುವರೆಯಲಿದೆ.

ನವದೆಹಲಿ: ದರ ಏರಿಕೆ ಭರಾಟೆ ಮಧ್ಯೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತುಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಳ ಮಾಡಿದೆ. ಆದರೆ ಇದರಿಂದ ಗ್ರಾಹಕರು ಖರೀದಿಸುವ ಪೆಟ್ರೋಲ್ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಮುಂದುವರೆಯಲಿದೆ.

2 ರು. ತೆರಿಗೆ ಹೆಚ್ಚಳದೊಂದಿಗೆ ಪೆಟ್ರೋಲ್ ಮೇಲೆ 11.77 ರು. ಇದ್ದ ಅಬಕಾರಿ ಸುಂಕ 13.47 ರು.ಗೆ ಮತ್ತು ಡೀಸೆಲ್ ಮೇಲೆ 8 ರು. ಇದ್ದ ಅಬಕಾರಿ ಸುಂಕ 10 ರು.ಗೆ ಏರಲಿದೆ. ಹೊಸ ಸುಂಕ ಏ.8ರಿಂದಲೇ ಜಾರಿಯಾಗಿದೆ.

ಆದರೂ ಗ್ರಾಹಕರಿಗೆ ಇದರ ಯಾವುದೇ ಹೊರೆ ಬೀಳುವುದಿಲ್ಲ. ಏದರೆ ಪೆಟ್ರೋಲ್ ಮತ್ತು ಡೀಸೆಲ್‌ನ ಮೂಲ ಬೆಲೆಯನ್ನು ಇಳಿಸಿ, ಅಬಕಾರಿ ಸುಂಕ ಹೆಚ್ಚಿಸಿ ಅಲ್ಲಿಂದಲ್ಲಿಯೇ ಸರಿದೂಗಿಸಲಾಗುತ್ತದೆ. ಖುದ್ದು ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ.

ತೆರಿಗೆ ಏರಿಕೆಗೆ ಖರ್ಗೆ ಕಿಡಿ:

ಪೆಟ್ರೋಲ್ ಮತ್ತು ಡೀಸೆಲ್‌ ಮೂಲ ದರವನ್ನು ಇಳಿಕೆ ಮಾಡಿ, ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ‘2014ಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆ ಶೇ.41ರಷ್ಟು ಕುಸಿದಿದೆ. ಆದರೂ ನಿಮ್ಮ ಲೂಟಿ ಕೋರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸುವುದರ ಬದಲು ಕೇಂದ್ರ ಅಬಕಾರಿ ಸುಂಕವನ್ನು ತಲಾ 2 ರು.ಗೆ ಹೆಚ್ಚಿಸಿದೆ’ ಎಂದಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಗಳು ತೈಲ ಬೇಡಿಕೆಯನ್ನು ಕಡಿತಗೊಳಿಸುವ ಆತಂಕ ಹುಟ್ಟಿಸಿರುವುದರಿಂದ ಅಂತಾರಾಷ್ಟ್ರೀಯ ತೈಲ ಬೆಲೆ 2021ರ ಏಪ್ರಿಲ್ ಬಳಿಕ ಅತಿ ಕನಿಷ್ಠ ಮಟ್ಟಕ್ಕೆ ಇಳಿದಿದೆ.

Share this article