ಫೋನ್‌ ಕದ್ದಾಲಿಕೆ ಮಾದರಿಯಲ್ಲೇ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ

KannadaprabhaNewsNetwork |  
Published : Dec 08, 2024, 01:17 AM ISTUpdated : Dec 08, 2024, 05:50 AM IST
ನಿಗಾ | Kannada Prabha

ಸಾರಾಂಶ

ಫೋನ್‌ ಕದ್ದಾಲಿಕೆ ನಿಯಮಗಳ ಮಾದರಿಯಲ್ಲೇ ಇದೀಗ ಕೇಂದ್ರ ಸರ್ಕಾರ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ ಇಡುವ ಹೊಸ ದೂರಸಂಪರ್ಕ (ಸಂದೇಶಗಳ ಕಾನೂನಾತ್ಮಕ ನಿಗಾ ಇಡುವ ಸುರಕ್ಷತೆ ಮತ್ತು ಪ್ರಕ್ರಿಯೆಗಳು) ನಿಯಮಗಳು-2024 ಅನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.

ನವದೆಹಲಿ: ಫೋನ್‌ ಕದ್ದಾಲಿಕೆ ನಿಯಮಗಳ ಮಾದರಿಯಲ್ಲೇ ಇದೀಗ ಕೇಂದ್ರ ಸರ್ಕಾರ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ ಇಡುವ ಹೊಸ ದೂರಸಂಪರ್ಕ (ಸಂದೇಶಗಳ ಕಾನೂನಾತ್ಮಕ ನಿಗಾ ಇಡುವ ಸುರಕ್ಷತೆ ಮತ್ತು ಪ್ರಕ್ರಿಯೆಗಳು) ನಿಯಮಗಳು-2024 ಅನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಈ ಹೊಸ ನೀತಿಯು ಕಾನೂನು ಪಾಲನಾ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಕೆಲ ನಿರ್ದಿಷ್ಟ ಉದ್ದೇಶಗಳಿಗೆ ಮತ್ತು ನಿರ್ದಿಷ್ಟ ಅವಧಿವರೆಗೆ ಯಾವುದೇ ವ್ಯಕ್ತಿಯ ಸಂದೇಶದ ಮೇಲೆ ನಿಗಾ ಇಡಲು ಕಾನೂನುರೀತಿ ಅವಕಾಶ ಮಾಡಿಕೊಡುತ್ತದೆ. ಅನುಮತಿ ಸಿಕ್ಕ ದಿನದಿಂದ 6 ತಿಂಗಳವರೆಗೆ ಮೆಸೇಜ್‌ ಮೇಲೆ ನಿಗಾ ಇಡಲು ಏಜೆನ್ಸಿಗಳಿಗೆ ಅವಕಾಶ ನೀಡಲಾಗಿದೆ

ಆ.28ಕ್ಕೆ ಈ ನಿಯಮಗಳಿಗೆ ಆಕ್ಷೇಪ ಕೋರಿ ಕೇಂದ್ರ ಸರ್ಕಾರ ಅಭಿಪ್ರಾಯಗಳಿಗೆ ಆಹ್ವಾನ ನೀಡಿತ್ತು. ಈಗ ಅಭಿಪ್ರಾಯ ಆಲಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಹಿಂದೆ ವಿವಿಧ ಏಜೆನ್ಸಿಗಳು ಈ ರೀತಿ ಅನಧಿಕೃತವಾಗಿ ಸಂದೇಶಗಳನ್ನು ಕದ್ದು ನೋಡಿ ಆ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಈ ಹೊಸ ನೀತಿ ಗೌಪ್ಯತೆಯ ಹಕ್ಕಿನ ವಿಚಾರದಲ್ಲಿ ಚರ್ಚೆ ಹುಟ್ಟುಹಾಕುವ ಸಾಧ್ಯತೆ ಇದೆ.

ಏನಿದೆ ಈ ಹೊಸ ನೀತಿಯಲ್ಲಿ?:

ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಸಂದೇಶಗಳ ಮೇಲೆ ಕಣ್ಗಾವಲು ಇಡುವ ಆದೇಶ ಹೊರಡಿಸುವ ಅಧಿಕಾರ ಇದೆ. ತುರ್ತು ಸನ್ನಿವೇಶಗಳಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಇನ್ಸ್‌ಪೆಕ್ಟರ್‌ ಜನರಲ್‌ ಮಟ್ಟದ ಅಥವಾ ಅದಕ್ಕಿಂತ ಉನ್ನತಮಟ್ಟದ ಪೊಲೀಸ್‌ ಅಧಿಕಾರಿಗಳೂ ಈ ರೀತಿಯ ಆದೇಶ ಹೊರಡಿಸಬಹುದಾಗಿದೆ. ಆದರೆ ಅವರು ಹೊರಡಿಸಿದ ಆದೇಶದ ಕುರಿತು 7 ಕೆಲಸದ ದಿನದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಸಕ್ಷಮ ಪ್ರಾಧಿಕಾರವು 7 ಕೆಲಸದ ದಿನದೊಳಗೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಹೋದರೆ ನಿಗಾ ಆದೇಶ ತನ್ನಿಂತಾನೆ ರದ್ದಾಗಲಿದೆ. ಜತೆಗೆ ಆ ಮೂಲಕ ಸಂಗ್ರಹಿಸಲಾದ ದಾಖಲೆಗಳನ್ನು ಕೋರ್ಟ್‌ ಸೇರಿದಂತೆ ಎಲ್ಲೂ ಸಾಕ್ಷ್ಯವನ್ನಾಗಿ ಬಳಸುವಂತೆಯೂ ಇಲ್ಲ.

ಮಾಹಿತಿ ಕಡ್ಡಾಯ:

ನಿಗಾ ಇಡಲು ಉದ್ದೇಶಿಸಿರುವ ವ್ಯಕ್ತಿಯ ಹೆಸರು ಮತ್ತು ವಿವರಗಳು, ಯಾವ ಅಧಿಕಾರಿಗೆ ಕಣ್ಗಾವಲು ವಹಿಸಲು ಅಧಿಕಾರ ನೀಡಲಾಗಿದೆ ಹಾಗೂ ಈ ರೀತಿ ಸಂಗ್ರಹಿಸಿದ ಮಾಹಿತಿಗಳನ್ನು ಯಾವ ಅವಧಿವರೆಗೆ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯನ್ನೂ ಏಜೆನ್ಸಿಗಳು ನೀಡುವುದು ಕಡ್ಡಾಯವಾಗಿದೆ.

ನಿಗಾ ಆದೇಶವನ್ನು ಕಾರ್ಯರೂಪಕ್ಕಿಳಿಸಲು ಪ್ರತಿ ಏಜೆನ್ಸಿಗಳು ಎಸ್ಪಿ ಹಂತಕ್ಕಿಂತ ಕೆಳಗಿನ ಅಥವಾ ತತ್ಸಮಾನ ಹುದ್ದೆಯ ಇಬ್ಬರು ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು, ಅಲ್ಲದೆ ನಿಗಾ ಆದೇಶಗಳ ರೆಫರೆನ್ಸ್‌ ಸಂಖ್ಯೆ ಮತ್ತು ಆದೇಶ ಹೊರಡಿಸಿದ ದಿನಾಂಕ ಅಥವಾ ಅದಕ್ಕೆ ಒಪ್ಪಿಗೆ ಸಿಕ್ಕ ದಿನಾಂಕವನ್ನೊಳಗೊಂಡ ವರದಿಯನ್ನು ಪ್ರತಿ 15 ದಿನಗಳಿಗೊಮ್ಮೆ ಏಜೆನ್ಸಿಗಳು ನೀಡಬೇಕಿದೆ. ಒಂದು ವೇಳೆ ಟೆಲಿಕಮ್ಯುನಿಕೇಷನ್‌ ಸಂಸ್ಥೆಯ ಸಿಬ್ಬಂದಿಯೇನಾದರೂ ಅನಧಿಕೃತವಾಗಿ ಸಂದೇಶಗಳ ಮೇಲೆ ಕಣ್ಗಾವಲು ಇಟ್ಟರೆ ಈ ನಿಯಮಾವಳಿ ಪ್ರಕಾರ ಅದಕ್ಕೆ ಆ ಸಂಸ್ಥೆಯೇ ಹೊಣೆಯಾಗುತ್ತದೆ.

ಮೇಲ್ವಿಚಾರಣೆಗೆ ಸಮಿತಿ ರಚನೆ:ಸಂದೇಶಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮೇಲ್ವಿಚಾರಣೆಗೆ ಕೇಂದ್ರ ಮಟ್ಟದಲ್ಲಿ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಕಾನೂನು ವ್ಯವಹಾರಗಳ ಮತ್ತು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿಗಳನ್ನೊಳಗೊಂಡ ಉನ್ನತಮಟ್ಟದ ಪುನರ್‌ ಪರಿಶೀಲನಾ ಸಮಿತಿಯೊಂದನ್ನು ಸ್ಥಾಪಿಸಬೇಕು. ರಾಜ್ಯ ಸರ್ಕಾರಗಳು ಕೂಡ ಕಾನೂನು ಮತ್ತು ಆಡಳಿತಾತ್ಮಕ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಯೊಂದನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ.

ಈ ಹೊಸ ನಿಯಮಾವಳಿಗಳು ರಾಷ್ಟ್ರೀಯ ಭದ್ರತೆ ಮತ್ತು ವೈಯಕ್ತಿಕ ಗೌಪ್ಯತೆಯ ನಡುವೆ ಸಮತೋಲನ ಸಾಧಿಸಿಕೊಂಡು ರೂಪಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!