ನವದೆಹಲಿ: 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯಗೊಳಿಸುವ ನೀತಿ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕರಡು ವರದಿ ಅನ್ವಯ, ಇನ್ನುಮುಂದೆ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆಯುವ ಮುನ್ನ ಅವರ ಪೋಷಕರ ಅನುಮತಿ ಕೇಳಲಾಗುವುದು. ಅಂತೆ ಅನುಮತಿ ನೀಡಿದವರು ಆ ಮಗುವಿನ ಪೋಷಕರೇ ಎಂಬುದನ್ನು ಧೃಡಪಡಿಸಿಕೊಳ್ಳಲು ಪೋಷಕರಿಗೆ ಸರ್ಕಾರ ವಿತರಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ಪರಿಶೀಲಿಸಲಾಗುವುದು.
ಜೊತೆಗೆ ಕರಡು ವರದಿ ಅನ್ವಯ, ಯಾವುದೇ ಬಳಕೆದಾರರು ಕಂಪನಿಗಳು ಸಂಗ್ರಹಿಸಿದ ತಮ್ಮ ಖಾಸಗಿ ಮಾಹಿತಿಯನ್ನು ಅಳಿಸಿಹಾಕುವಂತೆ ಕೋರುವ ಮತ್ತು ಯಾವ ಕಾರಣಕ್ಕಾಗಿ ಈ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಮಕ್ಕಳ ಖಾಸಗಿ ಮಾಹಿತಿ ದುರ್ಬಳಕೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಬದಲಾವಣೆ ಮಾಡಿದೆ.ಈ ನಡುವೆ ಖಾಸಗಿ ಮಾಹಿತಿ ದೊಡ್ಡಮಟ್ಟದಲ್ಲಿ ಸೋರಿಕೆಯಾದರೆ ಅಂಥ ಕಂಪನಿಗಳ ಮೇಲೆ 250 ರು. ಕೋಟಿ ರು.ವರೆಗೂ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.