ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿದ್ದ ಹವಾಮಾನ ಬದಲಾವಣೆ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಮೇಲಿನ ಪ್ರಕರಣ ರದ್ದುಗೊಳಿಸಿ, ಅವರ ಬಂಧನವನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಹಿಂಪಡೆದಿದೆ. ಇದರ ಬೆನ್ನಲ್ಲೇ ವಾಂಗ್ಚುಕ್ ಅವರನ್ನು ರಾಜಸ್ಥಾನದ ಜೈಪುರ ಸೆಂಟ್ರಲ್ ಶನಿವಾರವೇ ಬಿಡುಗಡೆ ಮಾಡಲಾಗಿದೆ.
- 6 ತಿಂಗಳಿಂದ ಜೈಲಿನಲ್ಲಿದ್ದ ಪರಿಸರ ಹೋರಾಟಗಾರ
- ಇದೀಗ ವಾಂಗ್ಚುಕ್ ಬಂಧ ಮುಕ್ತಗೊಳಿಸಿದ ಕೇಂದ್ರ
- ಲಡಾಖ್ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಿದ್ದ ವಾಂಗ್ಚುಕ್
ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿದ್ದ ಹವಾಮಾನ ಬದಲಾವಣೆ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಮೇಲಿನ ಪ್ರಕರಣ ರದ್ದುಗೊಳಿಸಿ, ಅವರ ಬಂಧನವನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಹಿಂಪಡೆದಿದೆ. ಇದರ ಬೆನ್ನಲ್ಲೇ ವಾಂಗ್ಚುಕ್ ಅವರನ್ನು ರಾಜಸ್ಥಾನದ ಜೈಪುರ ಸೆಂಟ್ರಲ್ ಶನಿವಾರವೇ ಬಿಡುಗಡೆ ಮಾಡಲಾಗಿದೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕಳೆದ ವರ್ಷ ನಡೆದಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ಕು ಮಂದಿ ಮೃತಪಟ್ಟರೆ, 22 ಪೊಲೀಸ್ ಸೇರಿ 45 ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಮೇರೆಗೆ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸೆಪ್ಟೆಂಬರ್ 26, 2025ರಂದು ಬಂಧಿಸಲಾಗಿತ್ತು.
ತಮ್ಮ ಪತಿಯ ಬಂಧನ ಪ್ರಶ್ನಿಸಿ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ.ಅನ್ಗ್‌ಮೋ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಲಾಗಿತ್ತು. ಇದರ ನಡುವೆಯೇ ಇದೀಗ ವಾಂಗ್ಚುಕ್ ಅವರ ಮೇಲಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯ ಕೇಸನ್ನು ಹಿಂಪಡೆದು ಬಂಧಮುಕ್ತಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಲಡಾಖ್‌ನಲ್ಲಿ ಶಾಂತಿ ಸ್ಥಾಪನೆ, ಸ್ಥಿರತೆ ಮತ್ತು ಪರಸ್ಪರ ನಂಬಿಕೆ ಹಾಗೂ ಅರ್ಥಪೂರ್ಣ ಮಾತುಕತೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.