ತುರ್ತುಸ್ಥಿತಿ ಹೇರಿದ ಜೂ.25 ಇನ್ನು ಸಂವಿಧಾನ ಹತ್ಯೆ ದಿನ

KannadaprabhaNewsNetwork |  
Published : Jul 13, 2024, 01:43 AM ISTUpdated : Jul 13, 2024, 06:46 AM IST
ಸಂಸತ್‌ | Kannada Prabha

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಅಪಾಯ ತಂದೊಡ್ಡಿದೆ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಿರುವಾಗಲೇ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ಜೂ.25ನ್ನು ‘ಸಂವಿಧಾನ ಹತ್ಯಾ ದಿವಸ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 ನವದೆಹಲಿ :  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಅಪಾಯ ತಂದೊಡ್ಡಿದೆ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ನಿರಂತರ ಆರೋಪ ಮಾಡುತ್ತಿರುವಾಗಲೇ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ಜೂ.25ನ್ನು ‘ಸಂವಿಧಾನ ಹತ್ಯಾ ದಿವಸ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜೂ.25ನ್ನು ಸಂವಿಧಾನ ಹತ್ಯಾ ದಿವಸವಾಗಿ ಆಚರಿಸುವುದರಿಂದ ಸಂವಿಧಾನವನ್ನು ತುಳಿದಾಗ ಏನಾಗುತ್ತದೆ ಎಂಬುದು ನೆನಪಿಗೆ ಬರುತ್ತದೆ. ಭಾರತದ ಕರಾಳ ಚರಿತ್ರೆಯಲ್ಲಿ ಕಾಂಗ್ರೆಸ್‌ ಜಾರಿಗೊಳಿಸಿದ ತುರ್ತು ಪರಿಸ್ಥಿತಿಯ ವೇಳೆ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರನ್ನೂ ಸ್ಮರಿಸುವ ದಿನ ಇದಾಗಲಿದೆ’ ಎಂದು ಬಣ್ಣಿಸಿದ್ದಾರೆ.

ಅಧಿಸೂಚನೆಯಲ್ಲೇನಿದೆ?:

1975ರ ಜೂ.25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಅದಾದ ಬಳಿಕ ಅಂದು ಆಡಳಿತದಲ್ಲಿದ್ದ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿತು. ದೇಶದ ಜನರನ್ನು ವ್ಯಾಪಕ ದೌರ್ಜನ್ಯಕ್ಕೆ ಗುರಿಪಡಿಸಲಾಯಿತು. ದೇಶದ ಜನರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಪುಟಿದೇಳುವ ಶಕ್ತಿಯ ಬಗ್ಗೆ ನಂಬಿಕೆ ಇದೆ. ಹೀಗಾಗಿ ಜೂ.25 ಅನ್ನು ಸಂವಿಧಾನ ಹತ್ಯಾ ದಿವಸವಾಗಿ ಆಚರಿಸಲಾಗುತ್ತದೆ. ತನ್ಮೂಲಕ ತುರ್ತು ಪರಿಸ್ಥಿತಿ ವೇಳೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರ ವಿರುದ್ಧ ಹೋರಾಡಿ ಹಾಗೂ ಹಿಂಸೆ ಅನುಭವಿಸಿದ ಎಲ್ಲರನ್ನೂ ಸ್ಮರಿಸಲಾಗುತ್ತದೆ. ಭವಿಷ್ಯದಲ್ಲಿ ಮುಂದೆಂದೂ ಈ ರೀತಿ ಅಧಿಕಾರ ದುರ್ಬಳಕೆಗೆ ಬೆಂಬಲ ನೀಡಬೇಡಿ ಎಂದು ಮರುಬದ್ಧತೆ ವ್ಯಕ್ತಪಡಿಸುವಂತೆ ಮಾಡಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸರ್ವಾಧಿಕಾರಿ ಮನಸ್ಥಿತಿಯನ್ನು 1975ರ ಜೂ.25ರಂದು ನಿರ್ಲಜ್ಜೆಯಿಂದ ಪ್ರದರ್ಶಿಸಿದ್ದ ಇಂದಿರಾ ಗಾಂಧಿ ಅವರು, ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಭಾರತದ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಚುಕಿದ್ದರು. ಲಕ್ಷಾಂತರ ಜನರನ್ನು ತಪ್ಪು ಮಾಡದಿದ್ದರೂ ಜೈಲಿಗೆ ಅಟ್ಟಲಾಗಿತ್ತು. ಮಾಧ್ಯಮಗಳ ಧ್ವನಿಯನ್ನೇ ಬಂದ್‌ ಮಾಡಲಾಗಿತ್ತು. ಹೀಗಾಗಿ ಜೂ.25ನ್ನು ಸಂವಿಧಾನ ಹತ್ಯಾ ದಿವಸವಾಗಿ ಆಚರಿಸಿ, ಅಮಾನವೀಯ ನೋವಿಗೆ ಗುರಿಯಾಗುವ ಮೂಲಕ ಬೃಹತ್‌ ಕೊಡುಗೆ ನೀಡಿದ ಜನರನ್ನು ಅಂದು ಸ್ಮರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ತೀರ್ಮಾನದಿಂದ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ನಿರಂತರ ಜ್ಯೋತಿ ಉರಿಯುವಂತೆ ಮಾಡಲಾಗುತ್ತದೆ. ಕಾಂಗ್ರೆಸ್‌ನಂತಹ ಸರ್ವಾಧಿಕಾರಿ ಶಕ್ತಿಗಳು ಇಂತಹ ಕರಾಳ ಕೆಲಸವನ್ನು ಪುನಾರವರ್ತಿಸದಂತೆ ತಡೆಯಲಾಗುತ್ತದೆ ಎಂದಿದ್ದಾರೆ.

ಜೂ.4 ಮೋದಿ ಮುಕ್ತಿ ದಿವಸ: ಕಾಂಗ್ರೆಸ್‌!

ನವದೆಹಲಿ: ಜೂ.25ನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಕಾಂಗ್ರೆಸ್, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಹೀನಾಯವಾಗಿ ಸೋತ ಜೂ.4ನ್ನು ಮೋದಿ ಮುಕ್ತಿ ದಿವಸ್‌ ಎಂದು ಇತಿಹಾಸದಲ್ಲಿ ಗುರುತಿಸಲಾಗುವುದು ಎಂದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ವಿಷಯ ತಿಳಿಸಿದ್ದಾರೆ. ‘10 ವರ್ಷ ಅಘೋಷಿತ ತುರ್ತುಸ್ಥಿತಿ ಜಾರಿಗೊಳಿಸಿದ ಹಾಗೂ ತಮ್ಮನ್ನು ದೇವರ ಅವತಾರ ಎಂದು ಕರೆದುಕೊಳ್ಳುವ ಪ್ರಧಾನಿ ಜನರ ಗಮನ ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಅವರು ಹೀನಾಯವಾಗಿ ಸೋತ ಜೂ.4ನ್ನು ಮೋದಿ ಮುಕ್ತಿ ದಿವಸ್‌ ಎಂದು ಇತಿಹಾಸದಲ್ಲಿ ಗುರುತಿಸಲಾಗುವುದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!