ನವದೆಹಲಿ : ಮೊಬೈಲ್ ಫೋನ್ ತಯಾರಕರು ಸ್ಮಾರ್ಟ್‌ಫೋನ್‌ಗಳಲ್ಲಿ ಸೈಬರ್ ಭದ್ರತಾ ಆ್ಯಪ್ ಸಂಚಾರ್ ಸಾಥಿಯನ್ನು ಉತ್ಪಾದನೆ ವೇಳೆಯೇ ಕಡ್ಡಾಯವಾಗಿ ಪ್ರಿ-ಇನ್‌ಸ್ಟಾಲ್ (ಅಳವಡಿಕೆ) ಮಾಡಬೇಕು ಎಂಬ ವಿವಾದಾತ್ಮಕ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ ಹಿಂತೆಗೆದುಕೊಂಡಿದೆ.
ಸೋಮವಾರ ಸರ್ಕಾರದ ಈ ಆದೇಶ ಬಹಿರಂಗವಾದ ಬೆನ್ನಲ್ಲೇ ಪ್ರತಿಪಕ್ಷಗಳು ಹಾಗೂ ಸ್ಮಾರ್ಟ್‌ಫೋನ್ ತಯಾರಕರಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ವಿರೋಧ ವ್ಯಕ್ತಪಡಿಸಿದ್ದವು. ‘ಸರ್ಕಾರವು ಜನರ ಮೇಲೆ ಬೇಹುಗಾರಿಕೆ ಮಾಡುತ್ತಿದೆ. ಖಾಸಗಿತನಕ್ಕೆ ಧಕ್ಕೆ ಬರುತ್ತದೆ’ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದವು. ಇದರ ಬೆನ್ನಲ್ಲೇ, ‘ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್‌ಸ್ಟಾಲ್ ಕಡ್ಡಾಯ ಎಂಬ ಆದೇಶ ರದ್ದುಗೊಳಿಸಲಾಗಿದೆ’ ಎಂದು ಟೆಲಿಕಾಂ ಸಚಿವಾಲಯ ಹೇಳಿದೆ.
ಇದಕ್ಕೂ ಮುನ್ನ ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ನಾ ಸ್ನೂಪಿಂಗ್ ಸಂಭವ್ ಹೈ, ನೋ ಸ್ನೂಪಿಂಗ್ ಹೋಗಾ (ಯಾವುದೇ ಬೇಹುಗಾರಿಕೆ ಇದರ ಮೂಲಕ ನಡೆಯುವುದಿಲ್ಲ)’ ಎಂದು ಪ್ರತಿಪಕ್ಷ ಸದಸ್ಯರ ಕಳವಳದ ಬಗ್ಗೆ ಸ್ಪಷ್ಟಪಡಿಸಿದರು. ಅಲ್ಲದೆ. ‘ಜನರ ಪ್ರತಿಕ್ರಿಯೆಯನ್ನು ಅವಲಂಬಿಸಿ, ಆ್ಯಪ್ ಇನ್‌ಸ್ಟಾಲ್‌ಗೆ ಸಂಬಂಧಿಸಿದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಾಗಿದೆ’ ಎಂದರು. ಇದಾದ ಕೆಲವೇ ಹೊತ್ತಿನಲ್ಲಿ ಟೆಲಿಕಾಂ ಸಚಿವಾಲಯವು ಪ್ರಿ ಇನ್‌ಸ್ಟಾಲ್ ಕಡ್ಡಾಯವಲ್ಲ ಎಂಬ ಅಧಿಕೃತ ಘೋಷಣೆ ಮಾಡಿತು.
ನವದೆಹಲಿ : ಸೈಬರ್ ಭದ್ರತೆಗೆ ಅನುಕೂಲವಾಗುವ ಸಂಚಾರ್ ಸಾಥಿ ಆ್ಯಪ್ ಅನ್ನು ಮೊಬೈಲ್ ಕಂಪನಿಗಳು ಪ್ರಿ ಇನ್‌ಸ್ಟಾಲ್ ಮಾಡಬೇಕು ಎಂದು ಆದೇಶಿಸಿದ ಬೆನ್ನಲ್ಲೇ ಈ ಅಪ್ಲಿಕೇಶನ್‌ನ ಡೌನ್‌ಲೋಡ್‌ಗಳು ಮಂಗಳವಾರ 10 ಪಟ್ಟು ಹೆಚ್ಚಾಗಿವೆ.
‘ಸಂಚಾರ್ ಸಾಥಿ ಆ್ಯಪ್‌ಗೆ ಸಾರ್ವಜನಿಕರಿಂದ ಇದ್ದಕ್ಕಿದ್ದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ದಿನದ ಡೌನ್‌ಲೋಡ್ 10 ಪಟ್ಟು ಹೆಚ್ಚಾಗಿ, ದೈನಂದಿನ ಸರಾಸರಿ 60 ಸಾವಿರದಿಂದ ಸುಮಾರು 6 ಲಕ್ಷಕ್ಕೆ ತಲುಪಿದೆ’ ಎಂದು ಟೆಲಿಕಾಂ ಇಲಾಖೆ ಮೂಲವೊಂದು ಪಿಟಿಐಗೆ ತಿಳಿಸಿದೆ.ಅಧಿಕೃತ ಮಾಹಿತಿಯ ಪ್ರಕಾರ, ಆದೇಶ ಹೊರಡಿಸುವ ಮೊದಲೇ 1.5 ಕೋಟಿ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.