ಅಯೋಧ್ಯೆ: ಗರ್ಭಗುಡಿಗೆ ಜ.18ಕ್ಕೆ ಶ್ರೀರಾಮನ ಪ್ರವೇಶ!

KannadaprabhaNewsNetwork | Updated : Jan 07 2024, 11:58 AM IST

ಸಾರಾಂಶ

ಅಯೋಧ್ಯೆಯಲ್ಲಿ ನಿರ್ಮಾಣವಾಗಿರು ಭವ್ಯ ಶ್ರೀರಾಮ ಮಂದಿರಕ್ಕೆ ರಾಮನ ಮೂರ್ತಿಯನ್ನು ಜ.18ರಂದೇ ಇಡಲಾಗುತ್ತದೆ. ಈ ವಿಗ್ರಹ ಬರೋಬ್ಬರಿ 1.5 ಟನ್‌ ತೂಕ 51 ಇಂಚು ಇರಲಿದೆ.

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ಜ.22ರಂದು ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆಗೆ ಭರದಿಂದ ಸಿದ್ಧತೆ ನಡೆಯುತ್ತಿರುವ ನಡುವೆಯೇ, ಪ್ರತಿಷ್ಠಾಪನೆಗೂ 4 ದಿನ ಮುನ್ನ- ಅಂದರೆ ಜ.18ರಂದು ಗರ್ಭಗುಡಿಯಲ್ಲಿ ವಿಗ್ರಹ ಇರಿಸಲಾಗುವುದು ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಇದೇ ಮೊದಲ ಬಾರಿಗೆ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಗವಾನ್ ರಾಮನ ಕಪ್ಪು ಬಣ್ಣದ ಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ಬೆಳಗುತ್ತವೆ’ ಎಂದರು.

‘ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಜ.16ರಿಂದ ಪ್ರಾರಂಭವಾಗಲಿವೆ ಮತ್ತು ಜ.18 ರಂದು ಗರ್ಭಗುಡಿಯಲ್ಲಿ ವಿಗ್ರಹ ಇರಿಸಲಾಗುವುದು. ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಸ್ಥಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು, ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖು, ಭಗವಾನ್ ಸೂರ್ಯ ಸ್ವತಃ ಮಧ್ಯಾಹ್ನ 12 ಗಂಟೆಗೆ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಿ ಕಂಗೊಳಿಸಲಿದ್ದಾನೆ’ ಎಂದು ರಾಯ್‌ ನುಡಿದರು.

‘ಮೂವರು ಶಿಲ್ಪಿಗಳು ಶ್ರೀರಾಮನ ವಿಗ್ರಹವನ್ನು ಪ್ರತ್ಯೇಕವಾಗಿ ತಯಾರಿಸಿದ್ದು, ಅದರಲ್ಲಿ 1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಪ್ಪು ಶಿಲೆಯ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಪ್ರತಿಮೆಯ ಮೇಲೆ ತಲೆ, ಕಿರೀಟವನ್ನು ಸಹ ಉತ್ತಮವಾಗಿ ರಚಿಸಲಾಗಿದೆ’ ಎಂದು ಅವರು ಹೇಳಿದರು.

‘ವಿಗ್ರಹದ ವೈಶಿಷ್ಟ್ಯವನ್ನು ವಿವರಿಸಿದ ಅವರು, ವಿಗ್ರಹದ ಮೇಲೆ ನೀರು ಹಾಗೂ ಪಂಚಾಮೃತ ಅಭಿಷೇಕ ಮಾಡಿದರೂ ವಿಗ್ರಹದ ಕಲ್ಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಅಲ್ಲದೆ, ವಿಗ್ರಹದ ಅಭಿಷೇಕದಿಂದ ತೆಗೆದ ತೀರ್ಥ ಹಾಗೂ ಪಂಚಾಮೃತ ಸೇವಿಸಿದರೆ ಯಾರ ದೇಹದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಪ್ಪು ವಿಗ್ರಹವೇ ಪ್ರತಿಷ್ಠಾಪನೆ: ಕನ್ನಡಿಗರ ಮೂರ್ತಿ ಫೈನಲ್‌?

ಅಯೋಧ್ಯೆ: ಕರ್ನಾಟಕದ ಇಬ್ಬರು ಶಿಲ್ಪಿಗಳು ಕೆತ್ತಿದ ಬಾಲರಾಮ ವಿಗ್ರಹ ಪೈಕಿ ಒಂದು ಜ.22ರಂದು ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸ್ವತಃ ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಸುಳಿವು ನೀಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ರಾಯ್‌, ಬಾಲರಾಮನ ವಿಗ್ರಹ ಕಪ್ಪುವರ್ಣದ ಶಿಲೆಯದ್ದಾಗಿರಲಿದೆ ಎಂದಿದ್ದಾರೆ. 

ಹಾಲಿ ಬಾಲರಾಮನ ವಿಗ್ರಹಕ್ಕಾಗಿ ಕೆತ್ತಲಾಗಿರುವ ಮೂರು ವಿಗ್ರಹಗಳ ಪೈಕಿ ಬಿಳಿಯ ಬಣ್ಣದ ಕಲ್ಲಿನ ವಿಗ್ರಹವನ್ನು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿದ್ದಾರೆ. ಇನ್ನು ಕಪ್ಪುವರ್ಣದ ಶಿಲೆಯಲ್ಲಿ ಕರ್ನಾಟಕದ ಮೈಸೂರಿನ ಅರುಣ್‌ ಯೋಗಿರಾಜ್‌ ಮತ್ತು ಇಡಗುಂಜಿಯ ಗಣೇಶ್‌ ಭಟ್‌ ಕೆತ್ತಿದ್ದಾರೆ. ಹೀಗಾಗಿ ಅರುಣ್‌ ಯೋಗಿರಾಜ್‌ ಹಾಗೂ ಗಣೇಶ್‌ ಭಟ್‌ ಕೆತ್ತಿರುವ ಮೂರ್ತಿಗಳ ಪೈಕಿ ಒಂದು ಆಯ್ಕೆಯಾಗಿರುವುದು ಖಚಿತವಾಗಿದೆ ಎಂಬ ವಾದ ಕೇಳಿಬಂದಿದೆ.

Share this article