ಸಂಸತ್ತಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್‌ ಜೆಪಿಸಿ ವರದಿ ಮಂಡನೆ : ಆಕ್ರೋಶ

KannadaprabhaNewsNetwork | Updated : Feb 14 2025, 04:39 AM IST

ಸಾರಾಂಶ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್‌ ತಿದ್ದುಪಡಿ ಮಸೂದೆ-2024ಕ್ಕೆ ಸಂಬಂಧಿಸಿದ ಜಂಟಿ ಸದನ ಸಮಿತಿ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಗಿದೆ.

ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್‌ ತಿದ್ದುಪಡಿ ಮಸೂದೆ-2024ಕ್ಕೆ ಸಂಬಂಧಿಸಿದ ಜಂಟಿ ಸದನ ಸಮಿತಿ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಗಿದೆ.

ಮೊದಲು ವಿಪಕ್ಷಗಳ ಸದಸ್ಯರು ಸಲ್ಲಿಸಿದ್ದ ಆಕ್ಷೇಪ ಟಿಪ್ಪಣಿಗಳನ್ನು (ಡಿಸೆಂಟ್‌ ನೋಟ್ಸ್‌) ವರದಿಯಲ್ಲಿ ಸೇರಿಸಿರಲಿಲ್ಲ. ಹೀಗಾಗಿ ಇದು ನಕಲಿ ಜೆಪಿಸಿ ವರದಿ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದವು. ಕೊನೆಗೆ ಆಕ್ರೋಶಕ್ಕೆ ಮಣಿದ ಸಮಿತಿಯ ಆಡಳಿತಾರೂಢ ಸದಸ್ಯೆ ಮೇಧಾ ಕುಲಕರ್ಣಿ ತಿದ್ದುಪಡಿ ವರದಿಯನ್ನು ನಂತರ ಮಂಡಿಸಿದರು. ಆಗ ವಿಪಕ್ಷಗಳು ಸಮಾಧಾನಗೊಂಡವು.

ರಾಜ್ಯಸಭೆಯಲ್ಲಿ ಕೋಲಾಹಲ:

ಲೋಕಸಭೆಯಲ್ಲಿ ವಿರೋಧದ ನಡುವೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಹಾಗೂ ರಾಜ್ಯಸಭೆಯಲ್ಲಿ ವಕ್ಫ್‌ ಜೆಪಿಸಿಯ ಬಿಜೆಪಿ ಸದಸ್ಯೆ ಮೇಧಾ ಕುಲಕರ್ಣಿ ಬೆಳಗ್ಗೆ ವರದಿ ಮಂಡಿಸಿದರು. ಆದರೆ ರಾಜ್ಯಸಭೆಯಲ್ಲಿ ವರದಿ ಕೋಲಾಹಲ ಎಬ್ಬಿಸಿತು.

ಇದಕ್ಕೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿ, ‘ವರದಿಯಲ್ಲಿ ವಿಪಕ್ಷ ಸದಸ್ಯರು ಸಲ್ಲಿಸಿದ್ದ ಆಕ್ಷೇಪ ಟಿಪ್ಪಣಿಗಳನ್ನ ಸೇರಿಸಿಲ್ಲ. ಇದು ಸದಸ್ಯರಿಗೆ ಮಾತ್ರವಲ್ಲ. ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾಡಿದ ಅನ್ಯಾಯ. ಕೇವಲ ಒಂದು ಸಮುದಾಯದ ಪರ ಇರುವ ಈ ವರದಿ ನಕಲಿ’ ಎಂದು ಆರೋಪಿಸಿದರು.

ಇದಕ್ಕೆ ಕೇಂದ್ರ ಸಚಿವ ಕಿರಣ್‌ ರಿಜಿಜು ತಿರುಗೇಟು ನೀಡಿ, ‘ಯಾವ ಅಂಶವನ್ನೂ ವರದಿಯಲ್ಲಿ ತೆಗೆದು ಹಾಕಿಲ್ಲ. ವಿಪಕ್ಷಗಳು ಸುಳ್ಳು ಹೇಳುತ್ತಿವೆ’ ಎಂದರು. ಆದರೆ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಹಾಗೂ ಟಿಎಂಸಿಯ ಸಾಕೇತ್‌ ಗೋಖಲೆ, ‘ನಮ್ಮ ಟಿಪ್ಪಣಿ ತೆಗೆದು ಹಾಕಲಾಗಿದೆ. ರಿಜಿಜು ಸುಳ್ಳು ಹೇಳಿದ್ದಾರೆ’ ಎಂದು ಆರೋಪಿಸಿದರು.

ಆದರೆ ಸದನ ಭೋಜನ ವಿರಾಮದ ವೇಳೆ ಮುಂದೂಡಿಕೆ ಆದಾಗ ರಿಜಿಜು ಸುದ್ದಿಗಾರರ ಜತೆ ಮಾತನಾಡಿ, ‘ಆಕ್ಷೇಪದ ಟಿಪ್ಪಣಿ ತೆಗೆದು ಹಾಕಿದ್ದು ನಿಜ’ ಎಂದು ಒಪ್ಪಿಕೊಂಡರು. ‘ಆದರೆ ಸಮಿತಿಯ ಔಚಿತ್ಯವನ್ನೇ ಪ್ರಶ್ನಿಸುವ ಆಕ್ಷೇಪಾರ್ಹ ಟಿಪ್ಪಣಿಯನ್ನು ತೆಗೆದು ಹಾಕಲಾಗಿದೆ. ಈ ಅಧಿಕಾರ ಜೆಪಿಸಿ ಅಧ್ಯಕ್ಷರಿಗೆ ಇರುತ್ತದೆ’ ಎಂದು ಸಮರ್ಥಿಸಿಕೊಂಡರು.

ತಿದ್ದುಪಡಿ ವರದಿ ಮಂಡನೆ:

ವಿವಾದದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ಕ್ಕೆ ರಾಜ್ಯಸಭೆಯಲ್ಲಿ ಜೆಪಿಸಿ ಸದಸ್ಯೆ ಮೇಧಾ ಕುಲಕರ್ಣಿ ತಿದ್ದುಪಡಿ ವರದಿ ಮಂಡಿಸಿದರು. ಈ ವರದಿಯಲ್ಲಿ ವಿಪಕ್ಷಗಳ ಸದಸ್ಯರ ಆಕ್ಷೇಪ ಟಿಪ್ಪಣಿಗಳಿದ್ದವು.

ಸರ್ಕಾರದ ಬಣ್ಣ ಬಯಲು- ವಿಪಕ್ಷ:

ತಿದ್ದುಪಡಿ ವರದಿ ಮಂಡನೆಗೆ ಸಂತಸ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ‘ಆಕ್ಷೇಪ ಟಿಪ್ಪಣಿ ತೆಗೆದುಹಾಕಿ ನಮ್ಮ ದನಿ ಹತ್ತಿಕ್ಕುವ ಯತ್ನವನ್ನು ಸರ್ಕಾರ ನಡೆಸಿತ್ತು. ಆದರೆ ನಮ್ಮ ಒತ್ತಡಕ್ಕೆ ಮಣಿದು ಈಗ ಅವನ್ನು ಸೇರಿಸಿದೆ. ಟಿಪ್ಪಣಿ ತೆಗೆದು ಹಾಕಿಲ್ಲ ಎಂದು ಮೊದಲು ಸದನದಲ್ಲಿ ಹೇಳಿ ದಿಕ್ಕು ತಪ್ಪಿಸಿದ್ದ ಸಚಿವ ರಿಜಿಜು ಬಣ್ಣ ಬಯಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಮುಂದೆ ಚರ್ಚ್, ಗುರುದ್ವಾರ ಟಾರ್ಗೆಟ್‌:

ಇದೇ ವೇಳೆ, ವಕ್ಫ್‌ ತಿದ್ದುಪಡಿ ಮಸೂದೆ ಮೂಲಕ ಈಗ ಮುಸ್ಲಿಮರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಮುಂದೆ ಸಿಖ್ಖರ ಗುರುದ್ವಾರ ಹಾಗೂ ಕ್ರೈಸ್ತರ ಚರ್ಚ್‌ಗಳು ಟಾರ್ಗೆಟ್‌ ಆಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Share this article