ಅಯೋಧ್ಯೆಯ ಬಾಬ್ರಿ ಮಸೀದಿ ಸ್ಥಳದಲ್ಲಿ ನಿರ್ಮಾಣಗೊಂಡ ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ, ಕಾಶಿಯ ಪ್ರಸಿದ್ಧ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯನ್ನು ದೇಗುಲದ ಮೇಲೆ ನಿರ್ಮಿಸಲಾಗಿತ್ತು ಎಂದು ಈ ಕುರಿತು ಸಮೀಕ್ಷೆ ನಡೆಸಿದ್ದ ಪುರಾತತ್ವ ಇಲಾಖೆ ಹೇಳಿದೆ.
ವಾರಾಣಸಿ: ಅಯೋಧ್ಯೆಯ ಬಾಬ್ರಿ ಮಸೀದಿ ಸ್ಥಳದಲ್ಲಿ ನಿರ್ಮಾಣಗೊಂಡ ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ, ಕಾಶಿಯ ಪ್ರಸಿದ್ಧ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯನ್ನು ದೇಗುಲದ ಮೇಲೆ ನಿರ್ಮಿಸಲಾಗಿತ್ತು ಎಂದು ಈ ಕುರಿತು ಸಮೀಕ್ಷೆ ನಡೆಸಿದ್ದ ಪುರಾತತ್ವ ಇಲಾಖೆ ಹೇಳಿದೆ.
ಮಸೀದಿ ಕುರಿತು ನಡೆಸಿದ್ದ ಸಮೀಕ್ಷೆ ವರದಿಯನ್ನು ಇಲಾಖೆ ಇತ್ತೀಚೆಗೆ ಕೋರ್ಟ್‌ಗೆ ಸಲ್ಲಿಸಿತ್ತು. ಕೋರ್ಟ್ ಈ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರಿಗೆ ಗುರುವಾರ ಹಸ್ತಾಂತರ ಮಾಡಿದೆ.
ಅದರಲ್ಲಿ ದೇಗುಲ ಒಡೆದು ಮಸೀದಿ ನಿರ್ಮಿಸಲಾಗಿದೆ ಎಂಬ ಅಂಶಗಳಿವೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಹಿತಿ ನೀಡಿದ್ದಾರೆ.
ವರದಿಯಲ್ಲಿ ಏನಿದೆ?
17ನೇ ಶತಮಾನದಲ್ಲಿ ಔರಂಗಾಜೇಬ್ ಕಾಲದಲ್ಲಿ ದೇಗುಲವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಮಸೀದಿಯ ಪಶ್ಚಿಮ ಭಾಗದ ಗೋಡೆ ದೇಗುಲಕ್ಕೆ ಸೇರಿದ್ದು. ಹಾಲಿ ಇರುವ ಮಸೀದಿ ಸಮುಚ್ಚಯದ ಕೆಳಗೆ ಬೃಹತ್ ಹಿಂದೂ ಮಂದಿರದ ಕುರುಹುಗಳು ಸಿಕ್ಕಿವೆ.
ಹಳೆಯ ಕಟ್ಟಡದ ಮೇಲೆ ಈಗಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಹಳೆಯ ಕಟ್ಟಡದ ಕಂಬಗಳನ್ನೇ ಬಳಸಿಕೊಳ್ಳಲಾಗಿದೆ. ಕೆಲವೊಂದು ಕಡೆ ಹಿಂದೂ ದೇಗುಲದ ಕಂಬಗಳಿಗೆ ಬದಲಾವಣೆ ಮಾಡುವ ಮೂಲಕ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಕೆಲವೊಂದು ಕಡೆ ಕಂಬದ ಮೇಲಿನ ಕೆತ್ತನೆಗಳನ್ನು ಅಳಿಸಿ ಹಾಕುವ ಪ್ರಯತ್ನಗಳನ್ನೂ ಮಾಡಲಾಗಿದೆ.ಜೊತೆಗೆ, ಪುರಾತನ ಹಿಂದೂ ದೇಗುಲದ ಕುರಿತಾಗಿ ದೇವನಾಗರಿ, ಕನ್ನಡ, ತೆಲುಗು ಹಾಗೂ ಇನ್ನಿತರೆ ಭಾಷೆಗಳಲ್ಲಿ ಬರೆಯಲಾದ 34 ಶಾಸನಗಳು ಕಂಡುಬಂದಿವೆ.
ಈ ಶಾಸನಗಳು ಹಾಲಿ ಇರುವ ಕಟ್ಟಡಗಳಲ್ಲಿ ಕಾಣಸಿಕ್ಕಿದೆ. ಈ ಶಾಸನಗಳಲ್ಲಿ ಜನಾರ್ದನ, ರುದ್ರ, ಉಮೇಶ್ವರ ಮೊದಲಾದ ಹೆಸರುಗಳಿವೆ.ಅಲ್ಲದೆ ಕೆಲವೊಂದು ಶಾಸನದ ಕಲ್ಲುಗಳನ್ನು ಹೊಸ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ.
ಮಸೀದಿಯ ನೆಲದಾಳಲ್ಲಿ ಹೂತು ಹೋಗಿರುವ ಅವಶೇಷಗಳಲ್ಲಿ ಹಿಂದೂ ದೇವರ ಮೂರ್ತಿಗಳು ಕಂಡುಬಂದಿವೆ. ಹಾಲಿ ಇರುವ ನಿರ್ಮಾಣದ ಕಂಬಗಳಲ್ಲಿ ಸುಂದರವಾದ ಗಂಟೆಗಳು, ದೀಪ ಹಚ್ಚಿಸಲು ನಿರ್ಮಿಸಲಾದ ಸ್ಥಳಗಳು ಮತ್ತು 1669ನೇ ಸಂವತ್ಸರ ಎಂದು ಬರೆದಿರುವ ಕುರುಹು ಕಂಡುಬಂದಿದೆ.
ಇದು ಹಾಲಿ ಇರುವ ಕಟ್ಟಡವನ್ನು ಮುಂಚೆ ಇದ್ದ ಕಟ್ಟಡವನ್ನು ಧ್ವಂಸ ಮಾಡಿ ನಿರ್ಮಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವರದಿ ಹೇಳಿದೆ.
ಮಸೀದಿಯಲ್ಲಿ ಪುರಾತತ್ವ ಸಮೀಕ್ಷೆ ನಡೆಸಿದ್ದು ಏಕೆ?
ವಾರಾಣಸಿ ವಿಶ್ವನಾಥ ಮಂದಿರ ಪಕ್ಕವೇ ಇರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇಗುಲ ಒಡೆದು ನಿರ್ಮಿಸಲಾಗಿದೆ.
ಹೀಗಾಗಿ ಅದನ್ನು ಮರಳಿ ಹಿಂದೂಗಳ ವಶಕ್ಕೆ ನೀಡಬೇಕು ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ವಾರಾಣಸಿ ನ್ಯಾಯಾಲಯ ಕಳೆದ ವರ್ಷ ದೇಗುಲದ ಸಮೀಕ್ಷೆಗೆ ಸೂಚಿಸಿತ್ತು. ಅದರಂತೆ ಪುರಾತತ್ವ ಇಲಾಖೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಸುದೀರ್ಘ ಸಮೀಕ್ಷೆ ನಡೆಸಿತ್ತು.