ಎಚ್‌ಡಿಕೆ ಹುಚ್ಚ, ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ: ಡಿಕೆಶಿ

KannadaprabhaNewsNetwork | Updated : Jul 06 2024, 06:43 AM IST

ಸಾರಾಂಶ

‘ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

 ಬೆಂಗಳೂರು :  ‘ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.ಮುಡಾ ಹಗರಣ ಹೊರಬರುವಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂಬ ಕುಮಾರಸ್ವಾಮಿ ಪರೋಕ್ಷ ಆರೋಪಕ್ಕೆ ಶುಕ್ರವಾರ ವಿಧಾನಸೌಧದಲ್ಲಿ ಕಿಡಿಕಾರಿದ ಅವರು, ಮುಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಕೆಲವೊಬ್ಬರಿಗೆ ಪ್ರತಿದಿನ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ಜನತಾದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂಬುದು ಸರಿಯಲ್ಲ. ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ ಅಥವಾ ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದಿದ್ದಾರೆ. ಅಧಿಕಾರಿಗಳು ಅವರ ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಜನರಿಗೆ ಹೋಗಬೇಡಿ ಎಂದು ಹೇಳಲು ಸಾಧ್ಯವೇ? ನನಗೆ ಈ ಆರೋಪದ ವಿಚಾರವೇ ಗೊತ್ತೇ ಇಲ್ಲ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪ್ರತಿಪಕ್ಷದವರು ಪರಿಶೀಲನಾ ಸಭೆ ನಡೆಸಬಾರದು ಎಂಬ ಆದೇಶ ಹೊರಡಿಸಿದ್ದರು. ಅಧಿಕಾರಿಗಳು ಹೋಗಬಾರದು ಎಂಬುದು ಕುಮಾರಸ್ವಾಮಿಗಾಗಿ ಮಾಡಿದ್ದಲ್ಲ. ಮೊದಲಿನಿಂದಲೂ ಶಿಷ್ಟಾಚಾರ ಇದ್ದು, ಅದನ್ನು ಅಧಿಕಾರಿಗಳು ಪಾಲನೆ ಮಾಡಿದ್ದಾರೆ ಎಂದು ತಿಳಿಸಿದರು.

Share this article