ಈ ಮಾಸಾಂತ್ಯದ ವೇಳೆಗೆ ಎಚ್‌ಎಎಲ್‌ನಿಂದ ಹಸ್ತಾಂತರ ಸಾಧ್ಯತೆ
==
ನವದೆಹಲಿ: ರಕ್ಷಣಾ ಉಪಕರಣಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬದ ಕುರಿತು ಇತ್ತೀಚೆಗೆ ಭಾರತೀಯ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅತೃಪ್ತಿ ಹೊರಹಾಕಿದ ಬೆನ್ನಲ್ಲೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೂನ್ ಅಂತ್ಯದ ವೇಳೆಗೆ ತನ್ನ ನಾಸಿಕ್ ಘಟಕದಿಂದ ಮೊದಲ ತೇಜಸ್ ಎಂಕೆ-1ಎ ಯುದ್ಧವಿಮಾನವನ್ನು ಹಸ್ತಾಂತರಿಸಲು ಸಜ್ಜಾಗಿದೆ.ಫೆ.2021ರಲ್ಲಿ ಭಾರತೀಯ ವಾಯುಪಡೆಯು 83 ತೇಜಸ್ ಎಂಕೆ -1ಎ ಜೆಟ್‌ಗಳಿಗಾಗಿ ಎಚ್‌ಎಎಲ್‌ನೊಂದಿಗೆ 48,000 ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕಿತ್ತು. 2024ರ ಮಾ.31ರೊಳಗೆ ಮೊದಲ ವಿಮಾನ ಒದಗಿಸುವುದಾಗಿ ಎಚ್‌ಎಎಲ್ ತಿಳಿಸಿತ್ತು. ಆದರೆ ಅಮೆರಿಕ ಮೂಲದ ಜಿಇ ಏರೋಸ್ಪೇಸ್‌ನಿಂದ ಎಫ್ 404 ಎಂಜಿನ್‌ಗಳ ಪೂರೈಕೆಯಲ್ಲಿ ವಿಳಂಬವಾದ ಕಾರಣ ಜೆಟ್‌ಗಳ ಪೂರೈಕೆಯೂ 1 ವರ್ಷಕ್ಕೂ ಅಧಿಕ ಕಾಲ ವಿಳಂಬವಾಯಿತು.
ಕಳೆದ ವಾರ ವಾಯುಪಡೆ ಮುಖ್ಯಸ್ಥ ಸಿಂಗ್, ‘ಕಾಲಮಿತಿ ನಮ್ಮ ಮುಂದಿರುವ ಬಹುದೊಡ್ಡ ಸಮಸ್ಯೆ. ಒಪ್ಪಂದಕ್ಕೆ ಸಹಿ ಹಾಕಿದ ಒಂದೇ ಒಂದು ಪ್ರಾಜೆಕ್ಟ್ ಈವರೆಗೆ ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ’ ಎಂದು ಬೇಸರಿಸಿದ್ದರು.