ದೇಶದಲ್ಲೇ ಮೊದಲ ಬಾರಿ ಮರಣಕ್ಕೆ ‘ಫ್ರೀವಿಲ್’ ಜಾರಿ

KannadaprabhaNewsNetwork |  
Published : Jun 01, 2024, 12:46 AM ISTUpdated : Jun 01, 2024, 05:19 AM IST
ಫ್ರೀವಿಲ್ | Kannada Prabha

ಸಾರಾಂಶ

‘ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನಿಲ್ಲಿಸಲು ಅವಕಾಶ ಕೊಡಬಹುದು’ 2023ರ ಮಾರ್ಚ್‌ನಲ್ಲಿ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಚಾರಿತ್ರಿಕ ತೀರ್ಪನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಕೀರ್ತಿಗೆ ಗೋವಾ ಭಾಜನವಾಗಿದೆ.

ಪಣಜಿ: ‘ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನಿಲ್ಲಿಸಲು ಅವಕಾಶ ಕೊಡಬಹುದು’ 2023ರ ಮಾರ್ಚ್‌ನಲ್ಲಿ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಚಾರಿತ್ರಿಕ ತೀರ್ಪನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಕೀರ್ತಿಗೆ ಗೋವಾ ಭಾಜನವಾಗಿದೆ.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ರಾಷ್ಟ್ರದಲ್ಲೇ ಮೊದಲ ಬಾರಿಗೆ ಗುರುವಾರ ಆಸ್ಪತ್ರೆಯಲ್ಲಿ ‘ಜೀವಂತ ಶವದ ಸ್ಥಿತಿಯಲ್ಲಿ’ ನರಳುತ್ತಿರುವ ರೋಗಿಯೊಬ್ಬರಿಗೆ ವೈದ್ಯರ ಮನವಿ ಮೇರೆಗೆ ಚಿಕಿತ್ಸೆ ನಿಲ್ಲಿಸಲು ಅವಕಾಶ ಕಲ್ಪಿಸಿದೆ. ಈ ರೀತಿ ಎಂಡ್‌ ಆಫ್‌ ಲೈಫ್‌ ಕೇರ್‌ ವಿಲ್‌ (ಇಚ್ಛೆಯ ಮೇರೆಗೆ ಜೀವನ ಅಂತ್ಯಗೊಳಿಸುವ ಉಯಿಲು) ಜಾರಿ ಮಾಡಲು ಅನುಮತಿ ನೀಡಿದ ಮೊದಲ ಹೈಕೋರ್ಟ್‌ ನ್ಯಾಯಾಧೀಶ ಎಂಬ ಕೀರ್ತಿಗೆ ಗೋವಾ ಪೀಠದ ನ್ಯಾ ಎಂ.ಎಸ್‌ ಸೋನಕ್‌ ಭಾಜನರಾಗಿದ್ದಾರೆ.

ಗುರುವಾರ ಸಂಜೆ ಗೋವಾ ಹೈಕೋರ್ಟ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ ಎಂ.ಎಸ್‌ ಸೋನಕ್‌ ಅವರು ಜೀವಚ್ಛವದ ಸ್ಥಿತಿಯಲ್ಲಿದ್ದ ರೋಗಿಗೆ ಕೃತಕ ಚಿಕಿತ್ಸೆ ಕಲ್ಪಿಸುವುದನ್ನು ನಿಲ್ಲಿಸಲು ಅನುಮತಿ ನೀಡುವ ಪತ್ರಕ್ಕೆ ಸಹಿ ಹಾಕಿದರು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಸಂದೇಶ್‌ ಛೋಡಂಕರ್ ಮತ್ತು ದಿನೇಶ್‌ ಶೆಟ್ಟಿ ಸಾಕ್ಷಿಗಳಾಗಿ ಸಹಿ ಹಾಕಿದರೆ, ಸರ್ಕಾರದ ಪರವಾಗಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಡಾ. ಮೇಧಾ ಸಾಲ್ಕರ್‌ ಸಾಕ್ಷಿಯಾಗಿದ್ದರು.

ಈ ವೇಳೆ ಮಾತನಾಡಿದ ನ್ಯಾ. ಸೋನಕ್‌, ‘ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ರೋಗಿಗಳ ನರಳಾಟವನ್ನು ತಪ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಧುನಿಕ ವೈದ್ಯಕೀಯ ನಿರ್ದೇಶನಗಳಲ್ಲಿರುವ ಜಟಿಲತೆಯನ್ನು ಅರ್ಥೈಸಿಕೊಂಡು ನಾವೆಲ್ಲರೂ ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ. ನನ್ನ ತಂದೆ ಕೂಡ ಮರಣಶಯ್ಯೆಯಲ್ಲಿದ್ದರು. ಆಗ ಇಂಥ ಕಾನೂನು ಇರಲಿಲ್ಲ. ಈಗ ಇಂಥ ಕಾನೂನು ಬಂದಿದ್ದ ಸ್ವಾಗತಾರ್ಹ’ ಎಂದು ತಿಳಿಸಿದರು.

ಏನಿದು ಫ್ರೀವಿಲ್‌?

ವ್ಯಕ್ತಿಯು ತಾನು ಉಳಿಯುವ ಸಾಧ್ಯತೆಗಳು ಬಹಳ ಕ್ಷೀಣವಾಗಿರುವ ಸಂದರ್ಭದಲ್ಲಿ ಚಿಕಿತ್ಸೆ ನಿಲ್ಲಿಸಿ ಎಂದು ಆ ವ್ಯಕ್ತಿಯೇ ಖುದ್ದು ‘ಲಿವಿಂಗ್‌ ವಿಲ್‌’ ಮೂಲಕ ಕೋರಿಕೆ ಸಲ್ಲಿಸಬಹುದು ಅಥವಾ ಆ ವ್ಯಕ್ತಿ ವಿಲ್‌ ಬರೆಯಲು ಅಸಮರ್ಥನಾಗಿದ್ದರೆ ಆ ವ್ಯಕ್ತಿಯ ನೇರ ವಾರಸುದಾರರು (ಮಗ/ಮಗಳು/ಹೆಂಡತಿ ಇತ್ಯಾದಿ) ಸಂವಿಧಾನದ 226ನೇ ವಿಧಿಯ ಮೂಲಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಬುಹುದು ಎಂದು 2023ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ‘ಆಧುನಿಕ ವೈದ್ಯಕೀಯ ನಿರ್ದೇಶನ’ಗಳ ರೂಪದಲ್ಲಿ ಪ್ರಕಟಿಸಿ ‘ಎಂಡ್‌ ಆಫ್‌ ಲೈಫ್‌ ಕೇರ್‌ ವಿಲ್‌’ಗೆ ಅವಕಾಶ ಕಲ್ಪಿಸಿತ್ತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ