ಮುಂಬೈ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೀವನಾಧರಿತ ಸಿನಿಮಾ ‘ಅಜೇಯ: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಯೋಗಿ’ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ ಹಾಗೂ ಚಿತ್ರಕ್ಕೆ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಸೂಚಿಸಿದೆ.‘ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್’ ಪುಸ್ತಕದಿಂದ ಸ್ಫೂರ್ತಿ ಪಡೆದಿದ್ದ ಸಿನಿಮಾ ಆ.1ರಂದು ರಿಲೀಸ್ ಆಗಬೇಕಿತ್ತು. ಆದರೆ ವಿವಿಧ ಕಾರಣ ನೀಡಿ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿತ್ತು. ಇದರ ನಡುವೆ ಬಾಂಬೆ ಹೈಕೋರ್ಟ್ ದ್ವಿಸದಸ್ಯ ಪೀಠ ಸಿನಿಮಾ ವೀಕ್ಷಿಸಿದ್ದು, ಯಾವುದೇ ಆಕ್ಷೇಪಾರ್ಹ ಸಂಗತಿ ಇಲ್ಲ ಎಂದಿದೆ ಹಾಗೂ ಸೆನ್ಸಾರ್ ಮಂಡಳಿಗೆ ಪ್ರಮಾಣಪತ್ರ ನೀಡುವಂತೆ ಆದೇಶಿಸಿದೆ.
ಕಾಶ್ಮೀರ: ಸರ್ಕಾರಿ ಕಚೇರಿಗಳಲ್ಲಿ ಪೆನ್‌ಡ್ರೈವ್, ವಾಟ್ಸಾಪ್‌ಗೆ ನಿರ್ಬಂಧ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪೆನ್‌ಡ್ರೈವ್ ಬಳಕೆ ಮತ್ತು ವಾಟ್ಸಾಪ್ ಮೂಲಕ ಅಧಿಕೃತ ಸಂವಹನ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಸೈಬರ್ ದಾಳಿ ಭೀತಿಯ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದೆ.ಈ ಬಗ್ಗೆ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ಆದೇಶ ಹೊರಡಿಸಿದ್ದು, ‘ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕೃತ ಸಾಧನದಲ್ಲಿ ಪೆನ್‌ಡ್ರೈವ್ ಬಳಕೆಯನ್ನು ನಿಷೇಧಿಸಲಾಗಿದೆ. ಜತೆಗೆ ಕಚೇರಿ ಸಂವಹನಕ್ಕಾಗಿ ಕಚೇರಿಗಳಲ್ಲಿ ವಾಟ್ಸಾಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಸೈಬರ್ ಭದ್ರತಾ ನಿಲುವು, ಸರ್ಕಾರದ ಸೂಕ್ಷ್ಮ ಮಾಹಿತಿ ರಕ್ಷಣೆ , ಸೈಬರ್ ದಾಳಿ ಅಪಾಯವನ್ನು ತಡೆಗಟ್ಟುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದೆ.
ಉಪರಾಷ್ಟ್ರಪತಿ ಚುನಾವಣೆಗೆ ಸಂಸದರ ನಕಲಿ ಸಹಿ ನಾಮಪತ್ರ!
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರತಿಕ್ರಿಯೆ ವೇಳೆ ವ್ಯಕ್ತಿಯೊಬ್ಬ ಸಂಸದರ ಸಹಿ ನಕಲು ಮಾಡಿ ಉಮೇದುವಾರಿಕೆ ಸಲ್ಲಿಸಿರುವುದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಾಕೋಬ್ ಜೋಸೆಫ್ ಎಂಬ ಕೇರಳ ವ್ಯಕ್ತಿ ಹೀಗೆ ಮಾಡಿದ್ದಾನೆ. ಈ ಬಗ್ಗೆ ತಿಳಿಯುತ್ತಲೇ ಚುನಾವಣಾ ಆಯೋಗ ಜೋಸೆಫ್ ನಾಮಪತ್ರವನ್ನು ತಿರಸ್ಕರಿಸಿದೆ.22 ಅನುಮೋದಕರು ಮತ್ತು 22 ಬೆಂಬಲಿಗರ ಸಹಿ ಒಳಗೊಂಡ ನಾಮಪತ್ರವನ್ನು ಜೋಸೆಫ್ ಸಲ್ಲಿಸಿದ್ದ. ಇವರೆಲ್ಲ ಲೋಕಸಭೆ, ರಾಜ್ಯಸಭೆಯ ಸದಸ್ಯರಾಗಿದ್ದರು.
ನಾಮಪತ್ರದಲ್ಲಿರುವ ಹೆಸರು ಮತ್ತು ಸಹಿಗಳನ್ನು ಸಂಸದರ ಗಮನಕ್ಕೆ ತರದೆ ನಕಲಿಸಲಾಗಿದೆ ಎಂದು ಪತ್ತೆಯಾದ ನಂತರ ನಾಮಪತ್ರ ತಿರಸ್ಕೃತಗೊಂಡಿದೆ.
ಗಾಜಾ ಆಸ್ಪತ್ರೆಗೆ ಇಸ್ರೇಲ್ ಬಾಂಬ್: 4 ಪತ್ರಕರ್ತರು ಸೇರಿ 15 ಸಾವು
ಡೇರ್ ಅಲ್-ಬಲಾಹ್ (ಗಾಜಾಪಟ್ಟಿ): 2023ರಿಂದಲೂ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರ ಮುಂದುವರೆದಿದ್ದು, ಇಸ್ರೇಲ್ ದಕ್ಷಿಣ ಗಾಜಾದ ಆಸ್ಪತ್ರೆಯೊಂದರ ಮೇಲೆ ಸೋಮವಾರ ವೈಮಾನಿಕ ದಾಳಿ ನಡೆಸಿದೆ. ಘಟನೆಯಲ್ಲಿ 4 ಪತ್ರಕರ್ತರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ.ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆ ದಕ್ಷಿಣ ಗಾಜಾದ ಅತಿದೊಡ್ಡ ಆಸ್ಪತ್ರೆಯಾಗಿದ್ದು, ಇದರ ಮೇಲೆಯೇ ಇಸ್ರೇಲ್ ದಾಳಿ ನಡೆಸಿದೆ. ಈ ವೇಳೆ ಪತ್ರಕರ್ತರಾದ ಮರಿಯಮ್ ಅಬು ಡಕ್ಕಾ, ಮೊಹಮ್ಮದ್ ಸಲಾಂ, ಮೋತ್ ಅಬು ತಾಹಾ, ಹೊಸಮ್ ಅಲ್ ಮಸ್ರಿ ಸಾವನ್ನಪ್ಪಿದ್ದಾರೆ.ಕಳೆದ ಜೂನ್‌ನಲ್ಲಿಯೂ ಇದೇ ಆಸ್ಪತ್ರೆ ಮೇಲೆ ದಾಳಿ ನಡೆದಿತ್ತು. ಆಗ ಮೂವರು , ಮಂದಿ ಸಾವನ್ನಪ್ಪಿದ್ದರು. ಕಳೆದ 22 ತಿಂಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಗಾಜಾದಲ್ಲಿ192 ಪತ್ರಕರ್ತರು ಬಲಿಯಾಗಿದ್ದಾರೆ.
ಇನ್ನು ಸೋಮವಾರ ನಡೆದ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತದ ಸಾಲ ತೀರಿಸುವ ರೇಟಿಂಗ್ ‘ಬಿಬಿಬಿ-’: ಫಿಚ್
ಪಿಟಿಐ ನವದೆಹಲಿಭಾರತದಲ್ಲಿನ ಉತ್ತಮ ಆರ್ಥಿಕ ಬೆಳವಣಿಗೆ ಮತ್ತು ಸಾಲ ತೀರಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಫಿಚ್, ಭಾರತದ ರೇಟಿಂಗ್ ಅನ್ನು ‘ಬಿಬಿಬಿ-’ನಲ್ಲಿಯೇ ಇರಿಸಿದೆ. ಈ ಮೂಲಕ ಭಾರತವು ಉತ್ತಮವಾಗಿ ಮುನ್ನುಗ್ಗುತ್ತಿದೆ ಎಂದು ಅದು ಸೂಚಿಸಿದೆ.
ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ.50ರಷ್ಟು ತೆರಿಗೆಯನ್ನು ಮಧ್ಯಮ ಅಪಾಯವೆಂದು ಅದು ಪರಿಗಣಿಸಿದೆ.‘ಬಿಬಿಬಿ-’ ಸಾಲ ತೀರಿಸುವ ಸಾಮರ್ಥ್ಯದ ಆಧಾರದ ಮೇಲೆ ಕೊಡುವ ರೇಟಿಂಗ್ ಆಗಿದ್ದು, ದೇಶವು ತನ್ನ ಸಾಲಗಾರಿಗೆ ಸರಿಯಾಗಿ ಪಾವತಿ ಮಾಡುತ್ತಿದೆಯೇ ಎಂದು ನೋಡಿ ಹಾಗೂ ಹೂಡಿಕೆದಾರರ ನಡವಳಿಕೆಗಳ ಆಧಾರದ ಮೇಲೆ ಕೊಡಲಾಗುತ್ತದೆ.
ಇತ್ತೀಚೆಗೆ ಎಸ್ ಆ್ಯಂಡ್ ಪಿ ರೇಟಿಂಗ್ ಭಾರತದ ರೇಟಿಂಗ್ ಅನ್ನು ‘ಬಿಬಿಬಿ’ಗೆ ಏರಿಕೆ ಮಾಡಿತ್ತು. ಇದಾದ 15 ದಿನದಲ್ಲಿಯೇ ಫಿಚ್ ಸಹ ತನ್ನ ರೇಟಿಂಗ್ ಪ್ರಕಟಿಸಿದೆ.
ವಿರೋಧ ಬೆನ್ನಲ್ಲೇ ವಿಶ್ವ ಅಯ್ಯಪ್ಪ ಸಮಾವೇಶದಿಂದ ಹಿಂದೆ ಸರಿದ ಸ್ಟಾಲಿನ್
ಚೆನ್ನೈ: ಕೇರಳದ ಪತ್ತನಂತಿಟ್ಟಂನ ಪಂಪದಲ್ಲಿ ನಡೆಯಲಿರುವ ಜಾಗತಿಕ ಅಯ್ಯಪ್ಪ ಸಮಾವೇಶಕ್ಕೆ ತಮಿಳುನಾಡಿನ ಸಿಎಂ ಸ್ಟಾಲಿನ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ಬಿಜೆಪಿ ವಿರೋಧ ಬೆನ್ನಲ್ಲೇ, ಸ್ಟಾಲಿನ್ ತಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಬದಲಾಗಿ ಸಂಪುಟದ ಇಬ್ಬರು ಸಚಿವರನ್ನು ಕಳುಹಿಸುವುದಾಗಿ ಹೇಳಿದ್ದಾರೆ.ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಈ ಬಗ್ಗೆ ಪತ್ರ ಬರೆದಿರುವ ಸ್ಟಾಲಿನ್ ‘ ಪೂರ್ವ ನಿಗದಿ ಕಾರ್ಯಕ್ರಮದ ಕಾರಣದಿಂದ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ. ಶೇಖರಬಾಬು ಮತ್ತು ಐಟಿ ಸಚಿವ ತಿಯಾಗ್ ರಾಜನ್ ಅವರನ್ನು ಕಳುಹಿಸಿಕೊಡುತ್ತೇನೆ’ ಎಂದಿದ್ದಾರೆ.