ಮೇರಠ್: ಪತ್ನಿಗೆ ಜನ್ಮದಿನದ ಸರ್‌ಪ್ರೈಸ್ ನೀಡಲೆಂದು ವಿದೇಶದಿಂದ ಬಂದು ಆಕೆಯ ಕೈಯ್ಯಲ್ಲೇ ಕೊಲೆಯಾದ ಮರ್ಚಂಟ್ ನೇವಿ ಅಧಿಕಾರಿ ಸೌರಭ್ ರಾಜಪೂತ್ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವರನ್ನು ಅಮಾನವೀಯ ರೀತಿಯಲ್ಲಿ ಕೊಲೆ ಮಾಡಲಾಗಿರುವ ಬೆಚ್ಚಿಬೀಳಿಸುವ ವಿಷಯ ಬಯಲಾಗಿದೆ.
ತಾನು ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರ ಸಾಹಿಲ್‌ನೊಂದಿಗೆ ಸೇರಿಕೊಂಡು ಸೌರಭ್‌ರನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಡ್ರಂನ ಒಳಗೆ ತುಂಬಲು ಅನುಕೂಲವಾಗುವಂತೆ ತಲೆ, ಮುಂಗೈ ತುಂಡು ತುಂಡು ಮಾಡಲಾಗಿತ್ತು. ಜೊತೆಗೆ ಕಾಲನ್ನು ಹಿಂಬದಿ ಮಡಿಚಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಶವಪರೀಕ್ಷೆ ನಡೆಸಿದ ವೈದ್ಯರು, ‘ಸೌರಭ್ ಅವರಿಗೆ ಮತ್ತು ಬರಿಸಿ ನಂತರ ಕೊಲ್ಲಲಾಗಿದೆ. ಅವರ ಹೃದಯಕ್ಕೆ 3 ಬಾರಿ ಚಾಕುವಿನಿಂದ ಬಲವಾಗಿ ಚುಚ್ಚಲಾಗಿದೆ. ಬಳಿಕ ದೇಹವನ್ನು ಧೂಳು ಹಾಗೂ ಸಿಮೆಂಟ್ ಇದ್ದ ಡ್ರಮ್ಮಿನೊಳಗೆ ತುಂಬಲಾಗಿದೆ. ಒಳಗೆ ಗಾಳಿ ಆಡದ ಕಾರಣ ಶವ ಕೊಳೆತಿರಲಿಲ್ಲ ಹಾಗೂ ಅಷ್ಟಾಗಿ ದುರ್ಗಂಧ ಬರುತ್ತಿರಲಿಲ್ಲ’ ಎಂದು ತಿಳಿಸಿದ್ದಾರೆ.
ಏ.5ರಂದು ಪ್ರಧಾನಿ ಮೋದಿ ಶ್ರೀಲಂಕಾ ಪ್ರವಾಸ
ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರು ಏ.5ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಶನಿವಾರ ತಿಳಿಸಿದ್ದಾರೆ. ಇದು ಶ್ರೀಲಂಕಾ ಆಂತರಿಕ ಸಂಘರ್ಷಕ್ಕೆ ಒಳಗಾದ ಬಳಿಕ ಅಲ್ಲಿಗೆ ಮೋದಿ ನೀಡುತ್ತಿರುವ ಮೊದಲ ಭೇಟಿಯಾಗಿದೆ.‘ಭಾರತ ಮತ್ತು ಶ್ರೀಲಂಕಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿಯವರು ಒಂದು ದಿನದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಸಹಭಾಗಿತ್ವದೊಂದಿಗೆ ಶ್ರೀಲಂಕಾದಲ್ಲಿ ಸೌರಶಕ್ತಿ ಉತ್ಪಾದನಾ ಘಟಕಗಳ ಆರಂಭಕ್ಕೆ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿತ್ತು. 50 ಮೆಗಾವ್ಯಾಟ್ ಮತ್ತು 70 ಮೆಗಾವ್ಯಾಟ್ ಸಾಮರ್ಥ್ಯದ 2 ಸೋಲಾರ್ ಪಾರ್ಕ್‌ಗಳನ್ನು ಟ್ರಿಂಕೋಮಲಿಯ ಸಂಪೂರ್ ಬಳಿ ಭಾರತದ ಸಹಭಾಗಿತ್ವದೊಂದಿಗೆ ನಿರ್ಮಿಸಲಾಗುತ್ತಿದೆ. ಇವುಗಳ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ’ ಎಂದು ತಿಳಿಸಿದರು.
ಅಪ್ರಾಪ್ತನಿಂದ ಮಗು ಪಡೆದ ಕಾರಣ ಐಸ್‌ಲ್ಯಾಂಡ್ ಸಚಿವೆ ರಾಜೀನಾಮೆ
ರೇಕ್ಜಾವಿಕ್: ಹದಿಯರೆಯದ ಹುಡುಗನ ಜತೆ ಅಕ್ರಮ ಸಂಬಂಧ ಹೊಂದಿ ಗರ್ಭವತಿಯಾದ ಕಾರಣ ಐಸ್‌ಲ್ಯಾಂಡ್‌ನ ಮಕ್ಕಳ ಸಚಿವೆ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಪ್ರಸ್ತುತ 55 ವರ್ಷದ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ತಮ್ಮ 22ನೇ ವಯಸ್ಸಿನಲ್ಲಿ 15 ವರ್ಷದ ಹುಡುಗನಿಂದ ಮಗು ಪಡೆದಿದ್ದರು. ಈ ವಿಷಯ ಈಗ ಬಹಿರಂಗವಾಗಿ ಐಸ್‌ಲ್ಯಾಂಡ್ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಐಸ್‌ಲ್ಯಾಂಡ್‌ನಲ್ಲಿ ಒಪ್ಪಿಗೆಯ ದೈಹಿಕ ಸಂಪರ್ಕದ ವಯಸ್ಸು 15 ವರ್ಷ. ಆದರೆ ಮಾರ್ಗದರ್ಶಕ, ಶಿಕ್ಷಕ, ಆರ್ಥಿಕ ಅವಲಂಬಿತ ಅಥವಾ ತಮಗಾಗಿ ಕೆಲಸ ಮಾಡುತ್ತಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಕಾನೂನುಬಾಹಿರವಾಗಿದೆ.
ಭಾರತೀಯರು ವಿದೇಶಗಳಲ್ಲಿ ನಿಯಮ ಪಾಲಿಸಬೇಕು: ಕೇಂದ್ರ ಸೂಚನೆ
ನವದೆಹಲಿ: ಅಮೆರಿಕದಲ್ಲಿ ಇಬ್ಬರು ವಿದ್ಯಾರ್ಥಿಗಳ ಗಡೀಪಾರು ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆಯು ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆಯನ್ನು ನೀಡಿದೆ. ಅಮೆರಿಕದ ನೆಲದಲ್ಲಿ ಇರುವಾಗ ಅಲ್ಲಿನ ನಿಯಮ ಮತ್ತು ಕಾನೂನುಗಳಿಗೆ ಬದ್ಧರಾಗಿರಿ ಎಂದು ಎಚ್ಚರಿಸಿದೆ.ಭಾರತ ಮೂಲದ ವಿದ್ಯಾರ್ಥಿಗಳಾದ ರಂಜನಿ ಶ್ರೀನಿವಾಸನ್ ಮತ್ತು ಬದರ್ ಖಾನ್ ಸೂರಿಗೆ ಗಡೀಪಾರು ಆದೇಶದ ಬೆನ್ನಲ್ಲೇ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ನಮ್ಮ ದೇಶದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ನಮ್ಮ ನೆಲದ ಕಾನೂನಿಗೆ ಬದ್ಧವಾಗಿರಬೇಕು ಎಂದು ನಾವು ಬಯಸುವ ರೀತಿಯಲ್ಲಿಯೇ ಅಮೆರಿಕವೂ ಬಯಸುತ್ತದೆ. ಅದರಲ್ಲಿ ತಪ್ಪಿಲ್ಲ. ಹೀಗಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಕಾನೂನಿಗೆ ಮೊದಲು ಬದ್ಧರಾಗಿರಬೇಕು’ ಎಂದು ಹೇಳಿದ್ದಾರೆ.