ಕೂಡಲಸಂಗಮ : ಬಸವಶ್ರೀ ಕಾಶಪ್ಪನವರ್‌ ಬೀಗ ಗದ್ದಲ - ಬೀಗ ಒಡೆದ ಶ್ರೀಗಳ ಆಪ್ತರ ವಿರುದ್ಧ ಕೇಸು

KannadaprabhaNewsNetwork |  
Published : Jul 16, 2025, 12:45 AM ISTUpdated : Jul 16, 2025, 02:45 AM IST
ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬಂದ ಜಯಮೃತ್ಯುಂಜಯ ಶ್ರೀಗಳು. | Kannada Prabha

ಸಾರಾಂಶ

ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಿದ ಪ್ರಕರಣ ಪೀಠಾಧ್ಯಕ್ಷರಾದ ಬಸವ ಜಯಮೃತ್ಯುಂಜಯ ಶ್ರೀ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ತೀವ್ರ ಜಟಾಪಟಿಗೆ ಕಾರಣವಾಗಿದೆ. 

  ಬಾಗಲಕೋಟೆ :  ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರೋ ರಾತ್ರಿ ಬೀಗ ಹಾಕಿದ ಪ್ರಕರಣ ಪೀಠಾಧ್ಯಕ್ಷರಾದ ಬಸವ ಜಯಮೃತ್ಯುಂಜಯ ಶ್ರೀ ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ತೀವ್ರ ಜಟಾಪಟಿಗೆ ಕಾರಣವಾಗಿದೆ. ಪೀಠಕ್ಕೆ ಬೀಗ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಬೀಗ ಒಡೆಯಲಾಗಿದ್ದು, ಬೀಗ ಒಡೆದ ಆರೋಪದ ಮೇಲೆ ಜಯಮೃತ್ಯುಂಜಯ ಶ್ರೀಗಳ 7 ಬೆಂಬಲಿಗರ ವಿರುದ್ಧ ಕಾಶಪ್ಪನವರ ಬೆಂಬಲಿಗರು ಹುನಗುಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಮಧ್ಯೆ, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮಂಗಳವಾರ ಸಮಾಜದ ಮುಖಂಡರು, ಟ್ರಸ್ಟಿಗಳು, ಸ್ವಾಮೀಜಿ ಭಕ್ತರು ಸಂಧಾನ ಸಭೆ ನಡೆಸಿದ್ದು, ವಿವಾದ ಸದ್ಯಕ್ಕೆ ಸುಖಾಂತ್ಯ ಕಂಡಿದೆ. ಸಂಧಾನದ ಬಳಿಕ ಶ್ರೀಗಳು ಕೂಡಲಸಂಗಮಕ್ಕೆ ಆಗಮಿಸಿ ಪೀಠಕ್ಕೆ ಪ್ರವೇಶ ಮಾಡಿದ್ದಾರೆ. ಆದರೆ, ಸಂಧಾನ ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಯ ಭಕ್ತರು ಒಮ್ಮತದ ನಿರ್ಣಯ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ.

ದೂರು ದಾಖಲು:

ಪೀಠಕ್ಕೆ ಬೀಗ ಹಾಕಿದ ನಂತರ ಮಧ್ಯರಾತ್ರಿ ಕೂಡಲಸಂಗಮ ಪೀಠಕ್ಕೆ ಬಂದು ಕೆಲವರು ಬೀಗ ಒಡೆದಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ ಬೆಂಬಲಿಗರು ಹುನಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಠದ ವ್ಯವಸ್ಥಾಪಕ ಚಂದ್ರಶೇಖರ ದೂರು ನೀಡಿದ್ದು, ಮಠದಲ್ಲಿ ಯಾರೂ ಇಲ್ಲದ್ದರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಪೀಠಕ್ಕೆ ಬೀಗ ಹಾಕಲಾಗಿತ್ತು. ಆದರೆ, ಕೆಲವರು ಬಂದು ಹಾಕಿರುವ ಬೀಗದ ಚಾವಿ ಕೇಳಿದರು. ನಾಳೆ ಬರುವಂತೆ ಹೇಳಿದರೂ ರಾತ್ರೋ ರಾತ್ರಿ ಬೀಗ ಒಡೆದಿದ್ದಾರೆ. ಈ ವಿಷಯವನ್ನು ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ ಗಮನಕ್ಕೆ ತಂದಾಗ ದೂರು ದಾಖಲಿಸುವಂತೆ ನೀಡಿದ ಸೂಚನೆಯಂತೆ ದೂರು ದಾಖಲಿಸಿದ್ದೇವೆ. ಪೀಠದ ಆವರಣದಲ್ಲಿ ಸಿಸಿ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಟ್ರಸ್ಟ್ ಸದಸ್ಯರ ದಿಢೀರ್‌ ಸಭೆ:

ಈ ಮಧ್ಯೆ, ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಸಭಾಂಗಣದಲ್ಲಿ ಪೀಠದ ಟ್ರಸ್ಟಿಗಳು ಮಂಗಳವಾರ ಸಭೆ ನಡೆಸಿದರು. ಟ್ರಸ್ಟ್ ಪ್ರಮುಖ ಸದಸ್ಯರಾದ ಶಿವಾನಂದ ಕಂಠಿ, ಸಿದ್ದಪ್ಪ ಹೊಸೂರ, ಗಂಗಣ್ಣ ಬಾಗೇವಾಡಿ, ಶೇಖರಪ್ಪ ಬಾದವಾಡಗಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಶ್ರೀಗಳು ಹುನಗುಂದದಲ್ಲಿ ಭಕ್ತರ ಸಭೆ ನಡೆಸಿ, ಬಳಿಕ ಕೂಡಲಸಂಗಮಕ್ಕೆ ಆಗಮಿಸಿ ಭಕ್ತರು, ಬೆಂಬಲಿಗರ ಸಮ್ಮುಖದಲ್ಲಿ ಪೀಠಕ್ಕೆ ಪ್ರವೇಶ ಮಾಡಿದರು. ಈ ವೇಳೆ, ಭಕ್ತರು ಸ್ವಾಮೀಜಿಗೆ ಶಾಲು ಹೊದಿಸಿ, ಸನ್ಮಾನಿಸಿ ಒಳಗೆ ಕರೆದುಕೊಂಡರು.

ನಾವು ಗುರು-ಶಿಷ್ಯರು:

ಘಟನೆ ಬಗ್ಗೆ ಹುನಗುಂದದ ಭಕ್ತರೊಬ್ಬರ ಮನೆಯಲ್ಲಿ ಶ್ರೀಗಳು ಪ್ರತಿಕ್ರಿಯಿಸಿ, ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹಾಗೂ ನಾನು ಗುರು-ಶಿಷ್ಯರು. ಅವರು ನನ್ನ ಬಗ್ಗೆ ತಪ್ಪು ತಿಳಿದಿದ್ದಾರೆ ಅಷ್ಟೆ. ಎಲ್ಲ ಗೊಂದಲಗಳನ್ನು ನನ್ನ ಭಕ್ತರೊಂದಿಗೆ ಕಾಶಪ್ಪನವರ ಚರ್ಚೆ ಮಾಡಿದ್ದಾರೆ. ಎಲ್ಲವೂ ಸರಿಯಾಗಲಿದೆ. ಘಟನೆಯಿಂದ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಹೊಸ ಟ್ರಸ್ಟ್ ಮಾಡಲ್ಲ. ಆದರೆ, ಇದೇ ಟ್ರಸ್ಟ್‌ನಲ್ಲಿ ಎಲ್ಲ ತಾಲೂಕಿನ ಸದಸ್ಯರನ್ನು ಸೇರಿಸಿಕೊಳ್ಳುವಂತೆ ಸಮುದಾಯದ ಮುಖಂಡರು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಕರ್ನಾಟಕದ ವಿವಿಧ ಮಠಗಳಲ್ಲಿ ಆಯಾ ಮಠದ ಸ್ವಾಮೀಜಿಗಳೇ ಟ್ರಸ್ಟ್ ಅಧ್ಯಕ್ಷರಾಗಿರುತ್ತಾರೆ. ನಾನು ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಭಕ್ತರೇ ಅಧ್ಯಕ್ಷರಾಗಲಿ ಎಂದು ವಿಶಾಲ ಮನೋಭಾವನೆಯಿಂದ ಬಿಟ್ಟಿದ್ದೇ ತಪ್ಪಾಗಿದೆ. ನನಗೆ ಆಸ್ತಿ ಮಾಡುವ ಆಸೆ ಇಲ್ಲ. ಟ್ರಸ್ಟ್ ನ್ನು ಹಿಡಿದುಕೊಂಡು ಅವರೇ (ಕಾಶಪ್ಪನವರ) ಸಂಪೂರ್ಣವಾಗಿ ಬೆಳೆಯಲಿ. ನಾನು ಇದೇ ಮಠದಲ್ಲಿ ಇರುತ್ತೇನೆ ಎಂದರು.

ಸಿಎಂ ವಿರುದ್ಧದ ಹೇಳಿಕೆ ಮುಳುವಾಯಿತು:

ಮೀಸಲಾತಿ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಎಂಬ ನನ್ನ ಹೇಳಿಕೆಯೇ ನನಗೆ ಬಹುದೊಡ್ಡ ಮುಳುವಾಯಿತು. ನನಗೆ ಸಿದ್ದರಾಮಯ್ಯ ಅವರು ಆತ್ಮೀಯರು. ಈ ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬೊಮ್ಮಾಯಿ ಅವರ ಮನೆ ಎದುರು ಪ್ರತಿಭಟನೆ ಮಾಡಿದ್ದೆ, ಆದರೆ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಎಂದು ಹೇಳಿದ್ದೆ ನನಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಜಯಮೃತ್ಯುಂಜಯ ಶ್ರೀ ಸೂಚಿಸಿದ್ರೆ

ಶಾಖಾ ಮಠ ಸ್ಥಾಪನೆ: ಸಿ.ಸಿ.ಪಾಟೀಲ್‌

ಈ ಮಧ್ಯೆ, ಬೆಂಗಳುರಲ್ಲಿ ಮಾತನಾಡಿದ ಶಾಸಕ ಸಿ.ಸಿ.ಪಾಟೀಲ್‌, ಬೀಗ ಹಾಕಿರುವುದು ಅಕ್ಷಮ್ಯ ಅಪರಾಧ. ಮಠ ಯಾರ ಸ್ವತ್ತೂ ಅಲ್ಲ. ಸಮಾಜದ ಸ್ವತ್ತು. ಮಠ ಕಟ್ಟಲು ಹಣ ಕೊಟ್ಟಿರುವುದು ಬಿಜೆಪಿ ಸರ್ಕಾರ. ಸ್ವಾಮೀಜಿಗೆ ಜೀವ ಭಯ ಇದ್ದಲ್ಲಿ ಬೇರೆಡೆ ಶಾಖಾ ಮಠ ಸ್ಥಾಪಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

PREV
Read more Articles on

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ