ಉತ್ತರಾಖಂಡ, ಹಿ.ಪ್ರದೇಶದಲ್ಲಿ ಮೇಘಸ್ಫೋಟ, ಭಾರೀ ಪ್ರವಾಹ

KannadaprabhaNewsNetwork |  
Published : Sep 17, 2025, 01:05 AM IST
ಮಳೆ | Kannada Prabha

ಸಾರಾಂಶ

ಇತ್ತೀಚೆಗಷ್ಟೇ ಸಂಭವಿಸಿದ ಮೇಘಸ್ಫೋಟ, ಭಾರೀ ಮಳೆ, ಭೂಕುಸಿತದಿಂದ ಚೇತರಿಸಿಕೊಳ್ಳುವ ಮೊದಲೇ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ.

- ಒಟ್ಟು 13 ಮಂದಿ ಬಲಿ, ಹಲವರು ನಾಪತ್ತೆ

- ಉಕ್ಕಿಹರಿಯುತ್ತಿರುವ ಹಲವು ನದಿಗಳು

ಡೆಹ್ರಾಡೂನ್‌/ಶಿಮ್ಲಾ: ಇತ್ತೀಚೆಗಷ್ಟೇ ಸಂಭವಿಸಿದ ಮೇಘಸ್ಫೋಟ, ಭಾರೀ ಮಳೆ, ಭೂಕುಸಿತದಿಂದ ಚೇತರಿಸಿಕೊಳ್ಳುವ ಮೊದಲೇ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ.

ಪರಿಣಾಮ ಉಭಯ ರಾಜ್ಯಗಳಲ್ಲಿ ಹಲವು ನದಿಗಳು ಉಕ್ಕೇರಿ ಹರಿಯುತ್ತಿದ್ದು ಹಲವು ಕಡೆ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಘಟನೆಗಳಿಗೆ 13 ಜನ ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಸೋಮವಾರ ರಾತ್ರಿ ಭಾರೀ ಮೇಘಸ್ಫೋಟ ಸಂಭವಿಸಿದ್ದು, ಅದರ ಬೆನ್ನಲ್ಲೇ ಬಿರುಸಿನ ಮಳೆ ಸುರಿದಿದೆ. ಇದರ ಬೆನ್ನಲ್ಲೇ ಸಹಸ್ರಧಾರಾ, ಮಲ್ದೇವ್ತಾ, ಸಂತ್ಲಾ ದೇವಿ, ದಲನ್‌ವಾಲಾ ಮತ್ತಿತರ ಕಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ಹಲವು ರಸ್ತೆಗಳು, ಮನೆಗಳು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿವೆ. ಹಲವೆಡೆ ಸಂಭವಿಸಿದ ಭೂಕುಸಿತದಿಂದಾಗಿ ಸಾರಿಗೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದಾಗಿ 600ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಮಳೆ ಸಂಬಂಧಿ ಅನಾಹುತಕ್ಕೆ 10 ಜನರು ಸಾವನ್ನಪ್ಪಿದ್ದಾರೆ.

ತಮ್ಸಾ, ಗಂಗಾ, ಯಮುನಾ ಸೇರಿ ಹಲವು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ತಮ್ಸಾ ನದಿ ಉಕ್ಕಿ ಹರಿದು ತಪಕೇಶ್ವರ ದೇಗುಲದ ಆವರಣಕ್ಕೆ ನೀರು ನುಗ್ಗಿದೆ.

ಹಿಮಾಚಲವೂ ತತ್ತರ:

ನೆರೆಯ ಹಿಮಾಚಲಪ್ರದೇಶ ರಾಜ್ಯದ ಮಂಡಿ ಜಿಲ್ಲೆ, ಶಿಮ್ಲಾ ಮತ್ತಿತರ ಕಡೆಯೂ ಮೇಘಸ್ಫೋಟದಿಂದ ಉಂಟಾದ ಪ್ರವಾಹ, ಭೂಕುಸಿತದಿಂದ ಭಾರೀ ಹಾನಿಯಾಗಿದೆ. ಮಂಡಿ ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಇನ್ನು ಶಿಮ್ಲಾದಲ್ಲೂ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಹಲವು ವಾಹನಗಳು ನೀರುಪಾಲಾಗಿವೆ. ಮಳೆ ನೀರು ಹಲವು ಮನೆಗಳು, ವಾಣಿಜ್ಯ ಸಂಕೀರ್ಣಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗೆ ಮೂರು ರಾಷ್ಟ್ರೀಯ ಹೆದ್ದಾರಿ ಸೇರಿ 650ಕ್ಕೂ ಹೆಚ್ಚು ರಸ್ತೆಗಳಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿದೆ.

ಮಾಹಿತಿ ಪಡೆದ ಮೋದಿ, ಶಾ:

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ವಿವರಣೆ ಪಡೆದಿದ್ದಾರೆ. ಕೇಂದ್ರದಿಂದ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಮೋದಿ ಮತ್ತು ಶಾ ಭರವಸೆ ನೀಡಿದ್ದಾರೆ.

==

ನೋಡನೋಡುತ್ತಿದ್ದಂತೆ ಕೊಚ್ಚಿಹೋದರು!

ಡೆಹ್ರಾಡೂನ್‌ನ ವಿಕಾಸಸಾಗರ ಪ್ರದೇಶದಲ್ಲಿ ಟ್ರ್ಯಾಕ್ಟರ್‌ ಟ್ರ್ಯಾಲಿಯಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಕಾರ್ಮಿಕರು ನೋಡ ನೋಡುತ್ತಿದ್ದಂತೆ ಕೊಚ್ಚಿಹೋಗಿದ್ದಾರೆ. ಗಣಿಕೆಲಸಕ್ಕೆಂದು ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಸಾಗುತ್ತಿದ್ದರು. ಈ ವೇಳೆ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ಟ್ರ್ಯಾಕ್ಟರ್‌ ಮುಂದೆ ಚಲಿಸಲಾಗದೆ ನಿಂತಿದೆ. ಆಗ ಕಾರ್ಮಿಕರು ನೆರವಿಗಾಗಿ ಕೂಗು ಹಾಕಿದ್ದು, ರಕ್ಷಣೆಗೆ ಸಾರ್ವಜನಿಕರು ಧಾವಿಸಬೇಕೆನ್ನುವ ಹೊತ್ತಿಗೆ ಎಲ್ಲರೂ ಟ್ರ್ಯಾಕ್ಟರ್‌ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಹೀಗೆ ಕೊಚ್ಚಿ ಹೋಗುತ್ತಿದ್ದವರಲ್ಲಿ ನಾಲ್ಕು ಮಂದಿ ಹೇಗೋ ಅಪಾಯದಿಂದ ಪಾರಾದರೆ, ಉಳಿದ ಆರು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ.

===

ರಭಸದಿಂದ ಹರಿಯುತ್ತಿರುವ ಪ್ರವಾಹದ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಕರೆಂಟ್‌ ಕಂಬವನ್ನೇರಿ ಕುಳಿತಿರುವುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ