ಈಶಾನ್ಯ ಭಾರತದಲ್ಲಿ ಭಾರೀ ಮಳೆ, ಭೂಕುಸಿತಕ್ಕೆ 18 ಬಲಿ

KannadaprabhaNewsNetwork |  
Published : Jun 01, 2025, 04:29 AM ISTUpdated : Jun 01, 2025, 05:46 AM IST
ಭಾರೀ ಮಳೆ | Kannada Prabha

ಸಾರಾಂಶ

ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮುಂಗಾರು ಮಳೆ ಇದೀಗ ಈಶಾನ್ಯ ರಾಜ್ಯಗಳಲ್ಲಿ ತನ್ನ ಪ್ರಕೋಪ ತೋರಿಸತೊಡಗಿದೆ.

ಇಟಾನಗರ/ತಿರುವನಂತಪುರ/ಗುವಾಹಟಿ: ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮುಂಗಾರು ಮಳೆ ಇದೀಗ ಈಶಾನ್ಯ ರಾಜ್ಯಗಳಲ್ಲಿ ತನ್ನ ಪ್ರಕೋಪ ತೋರಿಸತೊಡಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಅರುಣಾಚಲಪ್ರದೇಶ, ಅಸ್ಸಾಂ, ಮಿಜೋರಾಂನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ಮಳೆ ಸಂಬಂಧಿ ಅನಾಹುತಕ್ಕೆ 18 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಸಾಮಾನ್ಯ ಜನಜೀವನದ ಮೇಲೂ ಮಳೆ ಅಬ್ಬರ ಪರಿಣಾಮ ಬೀರಿದೆ.

ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ್ದು, 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ವ ಕಮೆಂಗ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ದಢೀರ್‌ ಭೂಕುಸಿತ ಸಂಭವಿಸಿದ ಪರಿಣಾಮ ವಾಹನಗಳು ಕೊಚ್ಚಿಹೋಗಿ ಕಿಚಾಂಗ್ ಗ್ರಾಮದ 2 ಕುಟುಂಬಗಳ 7 ಮಂದಿ ಸಾವನ್ನಪ್ಪಿದ್ದಾರೆ. ಅತ್ತ ಸುಬಂಸಿರಿ ಜಿಲ್ಲೆಯಲ್ಲಿ 2 ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಲ ಕಡೆಗಳಲ್ಲಿ ನದಿಗಳು ಉಕ್ಕಿಹರಿದಿದ್ದು, 117 ಮನೆಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಅಸ್ಸಾಂನಲ್ಲಿ ಪ್ರವಾಹ, 5 ಸಾವು:

ಒಂದೇ ದಿನ ಸುರಿದ ಮಳೆಗೆ ಅಸ್ಸಾಂನ 6 ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಭೂಕುಸಿತಕ್ಕೆ ಸಿಲುಕಿ 5 ಮಂದಿ ಸಾವನ್ನಪ್ಪಿದ್ದಾರೆ. 18 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಹಲವು ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಒಟ್ಟು 10,150 ಮಂದಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗಾಗಿ 2 ಕ್ಯಾಂಪ್‌ ಮತ್ತು ಪರಿಹಾರ ವಿತರಣಾ ಶಿಬಿರ ಸ್ಥಾಪಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಮಿಜೋರಂನಲ್ಲಿ 4 ಸಾವು:

ಮಿಜೋರಂನಲ್ಲಿ ಭಾರೀ ಮಳೆಯಿಂದ ಮನೆಯೊಂದ ಕುಸಿದು ಮೂವರು ಮ್ಯಾನ್ಮಾರ್‌ ನಿರಾಶ್ರಿತು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಸಂತ್ರಸ್ತರು ಪರಿಹಾರ ಶಿಬಿರಕ್ಕೆ:

ಮುಂಗಾರನ್ನು ಸ್ವಾಗತಿಸಿದ ಕೇರಳದಲ್ಲೂ ವರುಣಾರ್ಭಟ ಮುಂದುವರೆದಿದ್ದು, ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗಾಗಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ನೂರಾರು ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಮನೆಗಳೊಳಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪರಿಸ್ಥಿತಿ ಕೈಮೀರಿದರೆ ಜನರನ್ನು ಪರಿಹಾರ ಶಿಬಿರಗಳಿಗೆ ಕರೆದೊಯ್ಯಲು ದೋಣಿಗಳನ್ನು ಸಿದ್ಧಮಾಡಿ ಇಡಲಾಗಿದೆ.

PREV
Read more Articles on

Recommended Stories

ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!
ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು: ಮೋದಿ