ಗೋಪೇಶ್ವರ (ಉತ್ತರಾಖಂಡ) : ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಗುರುವಾರ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಒಬ್ಬ ಸಾವನ್ನಪ್ಪಿದ್ದಾನೆ. 14 ಜನ ಕಣ್ಮರೆಯಾಗಿದ್ದಾರೆ. ಸುಮಾರು 20 ಜನ ಗಾಯಗೊಂಡಿದ್ದಾರೆ. ಚರ್ಮೋಲಿ ಜಿಲ್ಲೆಯ 4 ಹಳ್ಳಿಗಳ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಕುಂಟಾರಿ ಲಗಫಲಿ, ಕುಂಟಾರಿ ಲಗಸರ್ಪಣಿ, ಸೇರ ಮತ್ತು ಧರ್ಮ ಹಳ್ಳಿಗಳ 33 ಮನೆಗಳು, ಹಲವು ಅಂಗಡಿಗಳು, ಗೋಶಾಲೆಗಳು ಪ್ರವಾಹಕ್ಕೆ ಸಿಲುಕಿ ಧ್ವಂಸಗೊಂಡಿವೆ. 14 ಜನ ಕಾಣೆಯಾಗಿದ್ದು, ಸುಮಾರು 20 ಜನ ಗಾಯಗೊಂಡಿದ್ದಾರೆ. ಮಳೆ ಸಂಬಂಧಿತ ಘಟನೆಗಳಿಗೆ 200ಕ್ಕೂ ಅಧಿಕ ಜನ ಅತಂತ್ರರಾಗಿದ್ದಾರೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ತಲೆಗೆ ಗಂಭೀರ ಗಾಯವಾಗಿರುವ ಮಗು ಸೇರಿದಂತೆ ತೀವ್ರವಾಗಿ ಗಾಯಗೊಂಡಿರುವವರನ್ನು ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಪ್ರವಾಹಪೀಡಿತ ಪ್ರದೇಶಗಳನ್ನು ತಲುಪಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.