ಯುದ್ಧದ ನಡುವೆ ಅಮೆರಿಕ ಸೇನೆಯಲ್ಲಿ ದಂಗೆ?

KannadaprabhaNewsNetwork |  
Published : Apr 04, 2026, 01:45 AM IST
ರ್‍ಯಾಂಡಿ | Kannada Prabha

ಸಾರಾಂಶ

ಇರಾನ್‌ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಅಮೆರಿಕ ಸೇನೆಯಲ್ಲಿ ಬಂಡಾಯದ ಆತಂಕ ಶುರುವಾಗಿದೆ. ದಿಢೀರ್‌ ಬೆಳವಣಿಗೆಯಲ್ಲಿ ಸೇನಾ ಮುಖ್ಯಸ್ಥ ಜನರಲ್‌ ರ್‍ಯಾಂಡಿ ಎ. ಜಾರ್ಜ್‌ ಸೇರಿ ಮೂವರು ಉನ್ನತ ಮಿಲಿಟರಿ ಅಧಿಕಾರಿಗಳನ್ನು ದಿಢೀರ್‌ ಬದಲಾವಣೆ ಮಾಡಲಾಗಿದೆ. ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಸೂಚನೆಯಂತೆ ಈ ಬದಲಾವಣೆ ಮಾಡಲಾಗಿದೆ.

ಸೇನಾ ಮುಖ್ಯಸ್ಥ ಸೇರಿ ಮೂವರಿಗೆ ಗೇಟ್‌ಪಾಸ್‌ । ಕಾಶ್‌ಪಟೇಲ್‌, ತುಳಸಿ ಹುದ್ದೆಯೂ ಆತಂಕದಲ್ಲಿ ವಾಷಿಂಗ್ಟನ್‌: ಇರಾನ್‌ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಅಮೆರಿಕ ಸೇನೆಯಲ್ಲಿ ಬಂಡಾಯದ ಆತಂಕ ಶುರುವಾಗಿದೆ. ದಿಢೀರ್‌ ಬೆಳವಣಿಗೆಯಲ್ಲಿ ಸೇನಾ ಮುಖ್ಯಸ್ಥ ಜನರಲ್‌ ರ್‍ಯಾಂಡಿ ಎ. ಜಾರ್ಜ್‌ ಸೇರಿ ಮೂವರು ಉನ್ನತ ಮಿಲಿಟರಿ ಅಧಿಕಾರಿಗಳನ್ನು ದಿಢೀರ್‌ ಬದಲಾವಣೆ ಮಾಡಲಾಗಿದೆ. ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಸೂಚನೆಯಂತೆ ಈ ಬದಲಾವಣೆ ಮಾಡಲಾಗಿದೆ.

ಅಧಿಕಾರಿಗಳ ಬದಲಾವಣೆಗೆ ಸರ್ಕಾರ ಯಾವುದೇ ಕಾರಣ ನೀಡದಿದ್ದರೂ ಹಿರಿಯ ಅಧಿಕಾರಿಗಳ ಬಡ್ತಿಗೆ ತಡೆ ನೀಡಲು ನಿರಾಕರಣೆ ಹಾಗೂ ಸೇನಾ ಸಿಬ್ಬಂದಿ ವಿಚಾರದಲ್ಲಿ ಅನಗತ್ಯ ಮಧ್ಯಪ್ರವೇಶದ ವಿಚಾರವಾಗಿ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಜತೆಗಿನ ತಿಕ್ಕಾಟದ ಕಾರಣಕ್ಕಾಗಿಯೇ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಜನರಲ್‌ ರ್‍ಯಾಂಡಿ ಜಾರ್ಜ್‌ ಅವರು 41ನೇ ಸೇನಾ ಮುಖ್ಯಸ್ಥ ಹುದ್ದೆಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತರಾಗಲಿದ್ದಾರೆ. ಅಮೆರಿಕ ಸೇನೆಗೆ ದಶಕಗಳ ಕಾಲ ಅವರು ಸಲ್ಲಿಸಿದ ಸೇವೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಪೆಂಟಗಾನ್‌ ಕಚೇರಿ ಬಿಡುಗಡೆ ಮಾಡಿದ ಸಂದೇಶದಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ಜಾರ್ಜ್‌ ಅವರ ಸೇವಾವಧಿ 2027ರ ವರೆಗೆ ಇತ್ತು. ಇದೀಗ ಅವರ ದಿಢೀರ್‌ ಬದಲಾವಣೆ ಅಚ್ಚರಿ ಮೂಡಿಸಿದೆ. ಇವರ ಜತೆಗೆ ಆರ್ಮಿ ಟ್ರಾನ್ಫಾರ್ಮೇಷನ್‌ ಆ್ಯಂಡ್‌ ಟ್ರೈನಿಂಗ್‌ ಕಮಾಂಡ್‌ನ ವಿಭಾಗದ ಮುಖ್ಯಸ್ಥ ಜನರಲ್‌ ಡೇವಿಡ್‌ ಹೋಂಡೆ ಮತ್ತು ಚಾಪ್ಲಿನ್‌ ಪಡೆಗಳ ಮುಖ್ಯಸ್ಥ ಮೇಜರ್‌ ಜನರಲ್‌ ವಿಲಿಯಂ ಗ್ರೀನ್‌ ಅವರನ್ನೂ ಬದಲಾಯಿಸಲಾಗಿದೆ.

ರ್‍ಯಾಂಡಿ ಜಾರ್ಜ್‌ ಮೊದಲ ಕೊಲ್ಲಿಯುದ್ಧ, ಇರಾಕ್‌, ಅಫ್ಘಾನಿಸ್ತಾನ ಯುದ್ಧದ ವೇಳೆ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರ ಜಾಗಕ್ಕೆ ಇದೀಗ ಹೆಗ್ಸೆತ್‌ರ ಆಪ್ತ ಜನರಲ್‌ ಕ್ರಿಸ್ಟೋಫರ್‌ ಲನೇವ್‌ ಪ್ರಭಾರಿಯಾಗಿ ನೇಮಕಗೊಂಡಿದ್ದಾರೆ. 2 ವರ್ಷದ ಹಿಂದೆ ಕೇವಲ ಡಬಲ್‌ ಸ್ಟಾರ್‌ ಅಧಿಕಾರಿಯಾಗಿದ್ದ ಲನೇವ್‌ ಅವರ ಈ ದಿಢೀರ್‌ ಬಡ್ತಿ ಕುತೂಹಲ ಮೂಡಿಸಿದೆ.

ಹೆಗ್ಸೆತ್‌ಗೆ ಸೇನೆ ಜತೆ ಹಿಂದಿನಿಂದಲೂ ಇದ್ದ ಕೆಲ ತರಕಾರುಗಳು, ನೇಮಕಾತಿ, ಬಡ್ತಿ ನಿರ್ಧಾರಗಳ ಬಗ್ಗೆ ಅಸಮಾಧಾನಗಳಿದ್ದವು. ಇದರ ಜತೆಗೆ ಹೆಗ್ಸೆತ್‌ ಹಾಗೂ ಸೇನಾ ಕಾರ್ಯದರ್ಶಿ ಡೇನಿಯಲ್‌ ಪಿ. ಡ್ರಿಸ್ಕಾಲ್‌ ಜತೆಗೆ ಭಿನ್ನಾಭಿಪ್ರಾಯಗಳೂ ಇತ್ತು. ಕೆಲ ವರ್ಷಗಳಿಂದ ಡಿಸ್ಕಾಲ್‌ ಮತ್ತು ಸೇನಾ ಮುಖ್ಯಸ್ಥರ ನಡುವಿನ ಕೆಲಸದ ಬಾಂಧವ್ಯ ಚೆನ್ನಾಗಿತ್ತು. ಇದು ಹೆಗ್ಸೆತ್‌ ಅಸಮಾಧಾನಕ್ಕೆ ಕಾರಣವಾಗಿತ್ತು. 2 ವಾರಗಳ ಹಿಂದೆ ಜಾರ್ಜ್‌ ಅವರು ಹೆಗ್ಸೆತ್‌ ಭೇಟಿಯಾಗಲು ಮುಂದಾಗಿದ್ದರು. ಸೇನಾ ಸಿಬ್ಬಂದಿ ವಿಚಾರದಲ್ಲಿ ಅನಗತ್ಯ ಮಧ್ಯಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸುವ ಇಂಗಿತ ಹೊಂದಿದ್ದರು. ಆದರೆ, ಈ ಭೇಟಿಗೆ ಅವಕಾಶವೇ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಆದರೆ, ಮಧ್ಯಪ್ರಾಚ್ಯ ಸಂಘರ್ಷದ ಸಂದರ್ಭದಲ್ಲೇ ಅನುಭವಿ ಸೇನಾಧಿಕಾರಿಗಳನ್ನು ಬದಲಾಯಿಸಿರುವುದು ಯುದ್ಧದಲ್ಲಿ ಅಮೆರಿಕಕ್ಕೆ ಹಿನ್ನಡೆಯಾಗುವ ಆತಂಕ ಸೃಷ್ಟಿಸಿದೆ.

ಕಾಶ್‌ ಪಟೇಲ್‌, ಗಬಾರ್ಡ್‌ಗೂ ಆತಂಕ:

ಸೇನೆಯ ಈ ಮೂವರು ಅಧಿಕಾರಿಗಳ ಜತೆಗೆ ಭಾರತೀಯ ಮೂಲದವರಾದ ಎಫ್‌ಬಿಐ ನಿರ್ದೇಶಕ ಕಾಶ್‌ ಪಟೇಲ್‌, ಡೈರೆಕ್ಟರ್‌ ಆಫ್‌ ನ್ಯಾಷನಲ್‌ ಇಂಟೆಲಿಜೆನ್ಸ್‌ ತುಳಸಿ ಗಬಾರ್ಡ್‌ ಅವರಿಗೂ ಟ್ರಂಪ್‌ ಗೇಟ್‌ ಪಾಸ್‌ ನೀಡುವ ಸಾಧ್ಯತೆ ಇದೆ. ಗುರುವಾರವಷ್ಟೇ ಅಮೆರಿಕದ ಅಟಾರ್ನಿ ಜನರಲ್‌ ಪಾಮ್‌ ಬೊಂಡಿ ಅವರನ್ನು ಟ್ರಂಪ್‌ ವಜಾ ಮಾಡಿದ್ದರು. ಜೆಫ್ರೀ ಎಪ್‌ಸ್ಟೈನ್‌ ಫೈಲ್ಸ್‌ ಪ್ರಕರಣದಲ್ಲಿ ಟ್ರಂಪ್‌ ರಾಜಕೀಯ ವಿರೋಧಿಗಳನ್ನು ಕಟ್ಟಿಹಾಕುವಲ್ಲಿ ಮಹತ್ವದ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅರಿದಮನ್‌ ಸೇನೆಗೆ