ಮತ ಎಣಿಕೆ ಕುರಿತು ಭಾರತವನ್ನು ನೋಡಿ ಅಮೆರಿಕ ಕಲಿಯಲಿ : ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌

KannadaprabhaNewsNetwork | Updated : Nov 25 2024, 04:40 AM IST

ಸಾರಾಂಶ

ಭಾರತೀಯ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌, ಅದೇ ವೇಳೆ ಅಮೆರಿಕದಲ್ಲಿನ ವ್ಯವಸ್ಥೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.  

ನ್ಯೂಯಾರ್ಕ್‌: ಭಾರತೀಯ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌, ಅದೇ ವೇಳೆ ಅಮೆರಿಕದಲ್ಲಿನ ವ್ಯವಸ್ಥೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಈ ಆಕ್ರೋಶಕ್ಕೆ ಕಾರಣ, ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದು 18 ದಿನಗಳಾದರೂ ಕ್ಯಾಲಿಫೋರ್ನಿಯಾ ರಾಜ್ಯದ ಫಲಿತಾಂಶ ಪ್ರಕಟವಾಗದೇ ಇರುವುದು.

ಭಾರತದಲ್ಲಿ ಒಂದೇ ದಿನಕ್ಕೆ 64 ಕೋಟಿ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ. ಇದು ದುರಂತ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ತನ್ಮೂಲಕ ಪರೋಕ್ಷವಾಗಿ ಮತ ಎಣಿಕೆ ವಿಚಾರದಲ್ಲಿ ಭಾರತವನ್ನು ನೋಡಿ ಅಮೆರಿಕ ಕಲಿಯಲಿ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ 20 ದಿನಗಳ ಹಿಂದೆಯೇ ನಡೆದು, ಫಲಿತಾಂಶ ಪ್ರಕಟವಾಗುತ್ತಿದೆ. ಆದರೆ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಇನ್ನೂ ಅಧಿಕೃತವಾಗಿ ಫಲಿತಾಂಶ ಅಧಿಕೃತವಾಗಿ ಹೊರಬಿದ್ದಿಲ್ಲ. 3 ಲಕ್ಷ ಮತಗಳನ್ನು ಇನ್ನೂ ಎಣಿಕೆ ಮಾಡಬೇಕಾಗಿದೆ ಎಂದು ವರದಿಗಳು ತಿಳಿಸಿವೆ.

ಫಲಿತಾಂಶ ಏಕೆ ತಡ?:

ಕ್ಯಾಲಿಫೋರ್ನಿಯಾದಲ್ಲಿ 3.9 ಕೋಟಿ ಜನಸಂಖ್ಯೆ ಇದೆ. ಅದು ಅಮೆರಿಕದಲ್ಲೇ ಅತಿ ಹೆಚ್ಚು ಜನರು ಇರುವ ರಾಜ್ಯವಾಗಿದೆ. 1.6 ಕೋಟಿ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಜನರು ಮತಗಟ್ಟೆಗೆ ಬರುವ ಬದಲು ಅಂಚೆ ಮತದಾನ ಮಾಡಿದ್ದಾರೆ. ಹೀಗಾಗಿ ಎಣಿಕೆ ವಿಳಂಬವಾಗಿದೆ.

ಎಲಾನ್‌ ಮಸ್ಕ್‌ ಆಸ್ತಿ ಕರ್ನಾಟಕ ಬಜೆಟ್‌ನ 8 ಪಟ್ಟು!

ವಾಷಿಂಗ್ಟನ್‌: ಈಗಾಗಲೇ ವಿಶ್ವದ ನಂ.1 ಶ್ರೀಮಂತ ಪಟ್ಟವನ್ನು ತನ್ನದಾಗಿಸಿಕೊಂಡಿರುವ ಟೆಸ್ಲಾ ಸಿಇಒ, ಎಕ್ಸ್‌ ಒಡೆಯ ಎಲಾನ್‌ ಮಸ್ಕ್‌, ಇದೀಗ 29 ಲಕ್ಷ ಕೊಟಿ ರು. ಸಂಪತ್ತಿನೊಂದಿಗೆ ಇತಿಹಾಸ ಸೃಷ್ಟಿಸಿದ್ದಾರೆ. ವ್ಯಕ್ತಿಯೊಬ್ಬ ಇಷ್ಟು ಮೌಲ್ಯದ ಆಸ್ತಿಯನ್ನು ಹೊಂದಿರುವುದು ಇದೇ ಮೊದಲು. ಇದು ಕರ್ನಾಟಕದ ವಾರ್ಷಿಕ ಬಜೆಟ್‌ನ 8 ಪಟ್ಟಿಗೆ ಸಮ ಎಂಬುದು ವಿಶೇಷ.

ನ.23ರಂದು ಬ್ಲೂಂಬರ್ಗ್‌ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮಸ್ಕ್‌ ಆಸ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 10 ಲಕ್ಷ ಕೋಟಿ ಸಂಪತ್ತು ಹೆಚ್ಚಳವಾಗಿದೆ. ಅಮೆರಿಕ ಚುನಾವಣೆಯಲ್ಲಿ ಮಸ್ಕ್‌ ಬೆಂಬಲಿತ ರಿಪಬ್ಲಿಕನ್‌ ಪಕ್ಷ ಜಯ ಗಳಿಸುತ್ತಿದ್ದಂತೆ ಟೆಸ್ಲಾದ ಶೇರುಗಳಲ್ಲಿ ಏರಿಕೆ ಕಂಡಿದೆ. ಜೊತೆಗೆ ಅವರ ಎಕ್ಸ್‌ಎಐ ಕಂಪನಿಯ ಮೌಲ್ಯ ಕೂಡ 50 ಬಿಲಿಯನ್‌ ಡಾಲರ್‌ನಷ್ಟು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಮಸ್ಕ್‌ರ ಆಸ್ತಿ ಇನ್ನೂ 18 ಬಿಲಿಯನ್‌ ಏರಿಕೆಯಾಗುವ ನಿರೀಕ್ಷೆಯಿದೆ.

Share this article