ಬಂಗಾಳದ 42 ಜಾತಿಗೆ ಒಬಿಸಿ ಮೀಸಲು ರದ್ದು: ಹೈಕೋರ್ಟ್‌

KannadaprabhaNewsNetwork | Updated : May 23 2024, 06:31 AM IST

ಸಾರಾಂಶ

  ಕಲ್ಕತ್ತಾ ಹೈಕೋರ್ಟ್‌ ಇದೀಗ 2010-2012ರ ಅವಧಿಯಲ್ಲಿ ಮುಸ್ಲಿಂ ಧರ್ಮದಲ್ಲಿನ ಹಲವು ಜಾತಿಗಳು ಸೇರಿ 42ಕ್ಕೂ ಹೆಚ್ಚು ಸಮುದಾಯಗಳನ್ನು ಒಬಿಸಿ ಮೀಸಲು ಪಟ್ಟಿಗೆ ಸೇರಿಸಿದ್ದ ಆದೇಶವನ್ನು ರದ್ದುಪಡಿಸಿದೆ.

ಕೋಲ್ಕತಾ: ಇತ್ತೀಚೆಗಷ್ಟೇ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಹೇಳಿ 26 ಸಾವಿರ ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್‌ ಇದೀಗ 2010-2012ರ ಅವಧಿಯಲ್ಲಿ ಮುಸ್ಲಿಂ ಧರ್ಮದಲ್ಲಿನ ಹಲವು ಜಾತಿಗಳು ಸೇರಿ 42ಕ್ಕೂ ಹೆಚ್ಚು ಸಮುದಾಯಗಳನ್ನು ಒಬಿಸಿ ಮೀಸಲು ಪಟ್ಟಿಗೆ ಸೇರಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಆದರೆ ಈ ಮೀಸಲಾತಿಯಡಿ ಉದ್ಯೋಗ ನೇಮಕಾತಿ ಅಥವಾ ಮುಂಬಡ್ತಿ ಹೊಂದಿದವರನ್ನು ಕೆಲಸದಿಂದ ತೆಗೆಯುವುದಾಗಲೀ, ಹಿಂಬಡ್ತಿ ನೀಡುವುದಾಗಲೀ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.ಈ ತೀರ್ಪಿನಿಂದಾಗಿ 5 ಲಕ್ಷಕ್ಕೂ ಅಧಿಕ ಒಬಿಸಿ ಪ್ರಮಾಣಪತ್ರಗಳು ಅಸಿಂಧು ಆಗಲಿದ್ದು, ರಾಜ್ಯದಲ್ಲಿ ಇದನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ತೀರ್ಪು ಏನು?:

ಒಬಿಸಿ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿ ತೀರ್ಪು ನೀಡಿದ ನ್ಯಾ. ತಪವ್ರತ ಚಕ್ರವರ್ತಿ ನೇತೃತ್ವದ ಪೀಠ, ‘ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಕಾಯ್ದೆ-2012ರ ಪ್ರಕಾರ ಮಾ.5, 2010ರಿಂದ ಮೇ 11, 2012ರವರೆಗೆ ನೀಡಲಾಗಿದ್ದ 42ಕ್ಕೂ ಅಧಿಕ ಸಮುದಾಯಗಳ ಒಬಿಸಿ ಮೀಸಲಾತಿಯನ್ನು ರದ್ದುಪಡಿಸಲಾಗಿದೆ’ ಎಂದಿತು.

‘ಈ ಸಮುದಾಯಗಳಿಗೆ ಒಬಿಸಿ ಮೀಸಲನ್ನು ನೀಡಬೇಕು ಎಂಬುದಾಗಿ ಸರ್ಕಾರಕ್ಕೆ ಸಮಿತಿ ನೀಡಿದ ಶಿಫಾರಸಿನಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ 2010ಕ್ಕಿಂತ ಮೊದಲು ಒಬಿಸಿ ಮೀಸಲು ಪಟ್ಟಿಗೆ ಸೇರಿದ್ದ 66 ಸಮುದಾಯಗಳನ್ನು ಹಾಲಿ ಅರ್ಜಿಯಲ್ಲಿ ಉಲ್ಲೇಖಿಸದ ಕಾರಣ ಅವುಗಳನ್ನು ಹಾಗೆಯೇ ಮುಂದುವರೆಸಲಾಗಿದೆ’ ಎಂದು ತೀರ್ಪು ನೀಡಿತು.ಇದೇ ವೇಳೆ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಒಬಿಸಿ ಮೀಸಲು ಪಟ್ಟಿಗೆ ಸಮುದಾಯಗಳನ್ನು ಸೇರಿಸುವ ಮತ್ತು ಹೊರತೆಗೆಯುವ ಕುರಿತು ಹೊಸದಾಗಿ ಅಧ್ಯಯನ ನಡೆಸಿ ಶೀಘ್ರದಲ್ಲಿ ವರದಿ ತಯಾರಿಸಿ ಸಲ್ಲಿಸುವಂತೆ ಸಲಹೆ ನೀಡಿದೆ. 

ತೀರ್ಪನ್ನು ಒಪ್ಪಲ್ಲ- ಬಿಜೆಪಿ ಷಡ್ಯಂತ್ರ: ಮಮತಾ:ಕೋರ್ಟ್ ತೀರ್ಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಮನೆ ಮನೆ ಸಮೀಕ್ಷೆ ನಡೆಸಿ ತಯಾರಿಸಿದ ವರದಿಯನ್ನು ನ್ಯಾಯಾಲಯ ಕಾನೂನುಬಾಹಿರ ಎಂದಿದೆ. ಈ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಮುಸ್ಲಿಮರನ್ನು ಒಬಿಸಿಯಿಂದ ಹೊರಹಾಕಿದ್ದು ಸರಿಯಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟಿಗೂ ಹೋಗಲು ಸಿದ್ಧ. ಬಿಜೆಪಿಯೇ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಈ ರೀತಿ ತೀರ್ಪು ಬರುವಂತೆ ಷಡ್ಯಂತ್ರ ರೂಪಿಸಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿದ್ದಾರೆ.

ಇನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀರ್ಪು ಸ್ವಾಗತಿಸಿದ್ದು, ‘ಅಕ್ರಮವಾಗಿ ಒಂದು ವರ್ಗ ಓಲೈಸಲು ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದ ಮಮತಾರ ಬಣ್ಣ ಬಯಲಾಗಿದೆ’ ಎಂದಿದ್ದಾರೆ.

Share this article