ಚಂಡೀಗಢ: ಹರ್ಯಾಣದ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75 ಮೀಸಲು ಕಡ್ಡಾಯಗೊಳಿಸುವ ಕಾನೂನನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ‘ಈ ಕಾನೂನು ಅಸಾಂವಿಧಾನಿಕ ಮತ್ತು ದೇಶದ ಜನರ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು 1 ವರ್ಷ ಬಾಕಿ ಇದ್ದು, ಈ ತೀರ್ಪಿನಿಂದ ಸ್ಥಳೀಯ ಸಮುದಾಯಗಳ ಮತದ ಮೇಲೆ, ಅದರಲ್ಲೂ ವಿಶೇಷವಾಗಿ ಜಾಟ್ ಸಮುದಾಯದ ಮತದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಜೆಪಿಗೆ ದೊಡ್ಡ ಹಿನ್ನಡೆ ಆಗಿದೆ. ಈ ತೀರ್ಪಿನ ವಿರುದ್ಧ ಮನೋಹರಲಾಲ್ ಖಟ್ಟರ್-ದುಷ್ಯಂತ್ ಚೌಟಾಲಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.ಅಲ್ಲದೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲು ನೀಡಬೇಕು ಎಂಬ ಇರಾದೆ ಹೊಂದಿರುವ ಅನೇಕ ರಾಜ್ಯಗಳಿಗೂ ಇದು ಎಚ್ಚರಿಕೆ ಗಂಟೆಯ ತೀರ್ಪಾಗಿದೆ.
ಏನಿದು ಕಾಯ್ದೆ?:2020ರಲ್ಲಿ ಕಾಯ್ದೆಯೊಂದನ್ನು ಜಾರಿಗೆ ತಂದಿದ್ದ ಹರ್ಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರ, ‘ಹರ್ಯಾಣದ ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲು ಇರಬೇಕು. 10 ಅಥವಾ 10ಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಕಂಪನಿಗಳಿಗೆ ಹಾಗೂ 30 ಸಾವಿರ ರು.ಗಿಂತ ಕಡಿಮೆ ವೇತನದ ಹುದ್ದೆಗಳಿಗೆ ಇದು ಅನ್ವಯ ಆಗಬೇಕು. ಸ್ಥಳೀಯ ನಿವಾಸಿ ಎನ್ನಿಸಿಕೊಳ್ಳಲು ಕನಿಷ್ಠ 5 ವರ್ಷ ಹರ್ಯಾಣದಲ್ಲಿ ವಾಸಿಸಿರಬೇಕು ಹಾಗೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ರಹವಾಸಿ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಸಲ್ಲಿಸಬೇಕು’ ಎಂದು ನಿಯಮ ರೂಪಿಸಿತ್ತು.ಕಾಯ್ದೆ ವಿರುದ್ಧ ಅರ್ಜಿ ಏಕೆ?:ಆದರೆ ಇದನ್ನು ಹರ್ಯಾಣದ ವಾಣಿಜ್ಯೋದ್ದಿಮೆ ಸಂಘಗಳು ತೀವ್ರವಾಗಿ ವಿರೋಧಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ‘ಖಾಸಗಿ ಕಂಪನಿಗಳಲ್ಲಿ ಕೌಶಲ್ಯದ ಆಧಾರದಲ್ಲಿ ನೌಕರಿ ನೀಡಲಾಗುತ್ತದೆ. ಅಲ್ಲದೆ, ಭಾರತದ ನಾಗರಿಕರಿಗೆ ಭಾರತದ ಯಾವುದೇ ಭಾಗದಲ್ಲಿ ಅವರ ಶಿಕ್ಷಣದ ಆಧಾರದಲ್ಲಿ ನೌಕರಿ ಮಾಡುವ ಸಂವಿಧಾನದತ್ತ ಹಕ್ಕಿದೆ. ಹೀಗಾಗಿ ಇಂಥ ಹಕ್ಕಿಗೆ ಹರ್ಯಾಣ ಸರ್ಕಾರ ತಂದಿರುವ ‘ಮಣ್ಣಿನ ಮಕ್ಕಳ’ ಕಾನೂನು ಭಂಗ ತರುತ್ತಿದೆ’ ಎಂದು ವಾದಿಸಿದ್ದವು.‘ಅಲ್ಲದೆ, ಕೌಶಲ್ಯ ಹಾಗೂ ಬುದ್ಧಿಮತ್ತೆ ಆಧರಿಸಿ ನೌಕರಿ ನೀಡುವುದಕ್ಕಿಂತ ಸ್ಥಳೀಯ ಆಧಾರದಲ್ಲಿ ನೌಕರಿ ನೀಡುವುದರಿಂದ ಉದ್ಯಮದಲ್ಲಿ ತಲ್ಲಣ ಸೃಷ್ಟಿಯಾಗುತ್ತದೆ’ ಎಂದು ಕಂಪನಿಗಳು ಕಳವಳ ವ್ಯಕ್ತಪಡಿಸಿದ್ದವು.ಕೋರ್ಟ್ ಆದೇಶವೇನು?:ಇದರ ವಿಚಾರಣೆ ನಡೆಸಿದ ನ್ಯಾ। ಜಿ.ಎಸ್. ಸಾಂಧ್‌ವಾಲಿಯಾ ಗಾಗೂ ನ್ಯಾ। ಹರ್‌ಪ್ರೀತ್ ಜೌರ್ ಜೀವನ್ ಅವರ ಪೀಠ, ‘ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ-2020 ಅಸಂವಿಧಾನಿಕವಾಗಿದೆ ಮತ್ತು ಈ ಕಾಯಿದೆಯು ಸಂವಿಧಾನದ ಭಾಗ-3ರ (ಮೂಲಭೂತ ಹಕ್ಕಿಗೆ ಸಂಬಂಧಿಸಿದ ಪರಿಚ್ಛೇದ) ಉಲ್ಲಂಘನೆಯಾಗಿದೆ’ ಎಂದಿದೆ.
ಏನಿದು ಕಾಯ್ದೆ?ಹರ್ಯಾಣದ ಖಾಸಗಿ ಕಂಪನಿಗಳು 30 ಸಾವಿರ ರು.ಗಿಂತ ಕಡಿಮೆ ಸಂಬಳದ ಹುದ್ದೆಗಳಲ್ಲಿ 75%ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಹರ್ಯಾಣ ಸರ್ಕಾರ 2020ರಲ್ಲಿ ಕಾಯ್ದೆ ರೂಪಿಸಿತ್ತು.ಈಗ ರದ್ದು ಏಕೆ?ಕೌಶಲ್ಯದ ಆಧಾರದಲ್ಲಿ ಹುದ್ದೆ ನೀಡುತ್ತೇವೆ. ಭಾರತದ ನಾಗರಿಕರಿಗೆ ಎಲ್ಲಿ ಬೇಕಾದರೂ ಕೆಲಸ ಮಾಡುವ ಹಕ್ಕಿದೆ ಎಂದು ಖಾಸಗಿ ಕಂಪನಿಗಳಿಂದ ಅರ್ಜಿ. ಅದನ್ನು ಆಧರಿಸಿ ರದ್ದು.