ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಸರ್ಕಾರ ದಿವಾಳಿ : ದೇಗುಲದ ಬೊಕ್ಕಸಕ್ಕೇ ‘ಕೈ’!

KannadaprabhaNewsNetwork | Updated : Mar 01 2025, 07:02 AM IST

ಸಾರಾಂಶ

ಸಾಕಷ್ಟು ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸರ್ಕಾರ, ‘ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯಗಳು ಸರ್ಕಾರದ 2 ಯೋಜನೆಗಳಿಗೆ ದೇಣಿಗೆ ನೀಡಬಹುದು’ ಎಂದು ಕೋರಿಕೆ ಸಲ್ಲಿಸಿದೆ.  

 ಶಿಮ್ಲಾ : ಸಾಕಷ್ಟು ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸರ್ಕಾರ, ‘ಮುಜರಾಯಿ ಇಲಾಖೆ ಅಡಿ ಬರುವ ದೇವಾ ಲಯಗಳು ಸರ್ಕಾರದ 2 ಯೋಜನೆಗಳಿಗೆ ದೇಣಿಗೆ ನೀಡಬಹುದು’ ಎಂದು ಕೋರಿಕೆ ಸಲ್ಲಿಸಿದೆ. ಮುಖ್ಯಮಂತ್ರಿ ಸುಖು ಸರ್ಕಾರದ ಈ ಆದೇಶ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜೊತೆಗೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.

‘ದೇಗುಲಗಳಿಂದ ಸರ್ಕಾರ ಹಣ ಕೇಳುವುದು ಆಘಾತಕಾರಿ. ಹಿಂದಿನ ಯಾವುದೇ ಸರ್ಕಾರವು ಬಜೆಟ್ ಯೋಜನೆಗಳಿಗೆ ದೇವಾಲಯದ ಟ್ರಸ್ಟ್ ನಿಧಿಯನ್ನು ಬಳಸಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಕಾಂಗ್ರೆಸ್‌ ಈ ಆರೋಪ ತಳ್ಳಿಹಾಕಿದೆ. ‘ದೇಗುಲಗಳಿಂದ ಮಾತ್ರವಲ್ಲ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಈ ಯೋಜನೆಗಳಿಗೆ ಎಲ್ಲ ವರ್ಗಗಳಿಂದ ಹಣ ಕೇಳಲಾಗಿದೆ’ ಎಂದು ಸಮರ್ಥಿಸಿದೆ.

ಅಧಿಸೂಚನೆ ಏನು?:

ಜ.29 ರಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿ, ‘ಹಿಮಾಚಲ ಪ್ರದೇಶ ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ದತ್ತಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದೇವಾಲಯ ಟ್ರಸ್ಟ್‌ಗಳು ಮುಖ್ಯಮಂತ್ರಿ ಸುಖ ಆಶ್ರಯ ಮತ್ತು ಮುಖ್ಯ ಮಂತ್ರಿ ಸುಖ ಶಿಕ್ಷಾ ಯೋಜನೆಗೆ ದೇಣಿಗೆ ನೀಡಬಹುದು. ಆದರೆ ದೇಣಿಗೆಗೆ ಟ್ರಸ್ಟ್‌ ಒಪ್ಪಿಗೆ ಕಡ್ಡಾಯ’ ಎಂದು ಹೇಳಿತ್ತು.

ಆರ್ಥಿಕ ಸಂಕಟ:

ಹಿಮಾಚಲ ಸರ್ಕಾರ ಸಾಕಷ್ಟು ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಹಾಗೂ ಮಳೆಯಂಥ ಪ್ರಾಕೃತಿಕ ವಿಕೋಪಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸಿಎಂ ಸುಖವಿಂದರ್‌ ಸಿಂಗ್ ಸುಖು, ‘ಎಲ್ಲ ಶಾಸಕ, ಸಚಿವರು 2 ತಿಂಗಳ ವೇತನ ಪಡೆಯದೇ ಸರ್ಕಾರದ ಬೊಕ್ಕಸಕ್ಕೆ ನೆರವಾಗಬೇಕು’ ಎಂದು ಸೂಚಿಸಿದ್ದರು.

ಮುಖ್ಯಮಂತ್ರಿ ಸುಖ ಆಶ್ರಯ, ಮುಖ್ಯಮಂತ್ರಿ ಸುಖ ಶಿಕ್ಷಾಗೆ ದೇಗುಲ ದೇಣಿಗೆ ನೀಡಬಹುದು

ಆದರೆ ದೇಣಿಗೆ ನೀಡಿಕೆಗೂ ಮುನ್ನ ಟ್ರಸ್ಟ್‌ ಒಪ್ಪಿಗೆ ಕಡ್ಡಾಯ: ಸಮಾಜ ಕಲ್ಯಾಣ ಇಲಾಖೆ

ಸರ್ಕಾರದ ಆದೇಶಕ್ಕೆ ಬಿಜೆಪಿ ಕಿಡಿ: ಯಾವ ಸರ್ಕಾರವೂ ದೇಗುಲದ ಹಣ ಸ್ಕೀಂಗೆ ಬಳಸಿಲ್ಲ

ದೇಗುಲಗಳಿಂದ ಮಾತ್ರವಲ್ಲ. ಶಿಕ್ಷಣದ ಸ್ಕೀಂಗೆ ಎಲ್ಲರಿಂದಲೂ ನೆರವು ಕೋರಿಕೆ: ಕಾಂಗ್ರೆಸ್‌

ಹಿಮಾಚಲ ಗ್ಯಾರಂಟಿ ಸ್ಕೀಂಗಳುಮಹಿಳೆಯರಿಗೆ 1500 ರು.

ಮಾಸಾಶನ: ₹800 ಕೋಟಿ ವೆಚ್ಚ

ನಿವೃತ್ತರಿಗೆ ಹಳೇ ಪಿಂಚಣಿ

ಯೋಜನೆ ಮರುಸ್ಥಾಪನೆಮನೆಗಳಿಗೆ ಮಾಸಿಕ 300

ಯೂನಿಟ್ ಉಚಿತ ವಿದ್ಯುತ್

ಇ ಬಸ್‌ ಅಥವಾ ಇ ಟ್ಯಾಕ್ಸಿ

ಖರೀದಿಸಿದರೆ ಶೇ.50 ಸಬ್ಸಿಡಿ

ಭಾರೀ ಸಾಲದ ಸುಳಿಯಲ್ಲಿ ಹಿಮಾಚಲ ಕೈ ಸರ್ಕಾರ

ಹಿಮಾಚಲ ಪ್ರದೇಶದ ಸಾಲವು 2018 ರಲ್ಲಿ 47,906 ಕೋಟಿ ರು ಇತ್ತು. ಅದು 2023ರಲ್ಲಿ 76,651 ಕೋಟಿ ರು.ಗಳಿಗೆ ಮತ್ತು 2024ಕ್ಕೆ 86,589 ಕೋಟಿ ರು.ಗೆ ಏರಿದೆ. 2025ಕ್ಕೆ ಅದು 1 ಲಕ್ಷ ಕೋಟಿ ರು.ಗೆ ಏರುವ ಸಾಧ್ಯತೆ ಇದೆ.

Share this article