ಢಾಕಾ: ಮತಾಂಧತೆ ತಾಂಡವವಾಡುತ್ತಿರುವ ಬಾಂಗ್ಲಾದೇಶದಲ್ಲಿ ಕ್ಷುಲ್ಲಕ ಕಾರಣಗಳಿಗೆ ಹಿಂದೂಗಳ ಹತ್ಯೆ ಮುಂದುವರೆದಿದ್ದು, ಗಾಜಿಪುರ ಜಿಲ್ಲೆಯಲ್ಲಿ ಸಿಹಿತಿನಿಸುಗಳ ಅಂಗಡಿಯ ಮಾಲೀಕ ಲಿಟೋನ್ ಚಂದ್ರ ಘೋಷ್ (55) ಎಂಬ ವ್ಯಾಪಾರಿಯನ್ನು ಕೊಲ್ಲಲಾಗಿದೆ. ಇದು ಕಳೆದ ಒಂದೂವರೆ ತಿಂಗಳಲ್ಲಿ ಬಾಂಗ್ಲಾದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ 16ನೇ ವ್ಯಕ್ತಿಯ ಹತ್ಯೆಯಾಗಿದೆ.
ಮೌಸಮ್ ಮಿಯಾ ಎಂಬಾತ ಬಾಳೆತೋಟ ಹೊಂದಿದ್ದು, ಶನಿವಾರ ಆತನ ತೋಟದಿಂದ ಕೆಲ ಬಾಳೆಗೊನೆ ನಾಪತ್ತೆಯಾಗಿತ್ತು. ಅದನ್ನು ಹುಡುಕಿಕೊಂಡು ಆತ ತಿರುಗಾಡುತ್ತಿದ್ದ ವೇಳೆ ಘೋಷ್ ಅವರ ‘ಬೈಸಾಕಿ ಸ್ವೀಟ್‌ಮೀಟ್’ ಅಂಗಡಿಯಲ್ಲಿ ಕೆಲವು ಬಾಳೆಗೊನೆ ಪತ್ತೆಯಾಗಿದೆ. ಈ ವೇಳೆ ಮೌಸಮ್, ಅಂಗಡಿಯಲ್ಲಿದ್ದ ಅನಂತ್ ದಾಸ್ (17) ಎಂಬಾತನ ಜೊತೆ ವಿಷಯ ಪ್ರಸ್ತಾಪಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಘೋಷ್ ಅಲ್ಲಿಗೆ ಆಗಮಿಸಿದ ಮಧ್ಯಪ್ರವೇಶ ಮಾಡಿದ ವೇಳೆ ಮೌಸಮ್, ಆತನ ತಂದೆ ಮತ್ತು ತಾಯಿ ಸೇರಿಕೊಂಡು ಘೋಷ್ ಮೇಲೆ ಹಲ್ಲೆ ಮಾಡಿ ಒದ್ದು ಕೆಳಗೆ ಬೀಳಿಸಿದ್ದಾರೆ. ಕೆಳಗೆ ಬಿದ್ದ ಮೇಲೂ ಆತನ ಮೇಲೆ ಥಳಿಸಿದ್ದಾರೆ. ದಾಳಿಯ ತೀವ್ರತೆಗೆ ಘೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶನಿವಾರ ಬೆಳಗ್ಗೆ 11ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಕ್ಕ-ಪಕ್ಕದವರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಮಿಯಾ ಮತ್ತು ಆತನ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವುದಾಗಿ ಕಾಲಿಗಂಜ್ ಪೊಲೀಸ್ ಠಾಣೆ ಅಧಿಕಾರಿ ಜಾಕಿರ್ ಹೊಸೇನ್ ತಿಳಿಸಿದ್ದಾರೆ.