ಪಾಕ್‌ ಹಿಂದೂ ಸಚಿವ ಖೇಲ್‌ದಾಸ್‌ ಕೊಹಿಸ್ತಾನಿ ಮೇಲೆ ಹಲ್ಲೆ : ಸರ್ಕಾರ ವಿರೋಧಿ ಪ್ರತಿಭಟನಾಕಾರರಿಂದ ದಾಳಿ

KannadaprabhaNewsNetwork | Updated : Apr 21 2025, 06:24 AM IST

ಸಾರಾಂಶ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ಹೊಸ ಕಾಲುವೆಗಳ ಯೋಜನೆಯನ್ನು ವಿರೋಧಿಸಿ ರ್‍ಯಾಲಿ ನಡೆಸುತ್ತಿದ್ದ ಪ್ರತಿಭಟನಾಕಾರರು ಹಿಂದೂ ಸಚಿವರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ಹೊಸ ಕಾಲುವೆಗಳ ಯೋಜನೆಯನ್ನು ವಿರೋಧಿಸಿ ರ್‍ಯಾಲಿ ನಡೆಸುತ್ತಿದ್ದ ಪ್ರತಿಭಟನಾಕಾರರು ಹಿಂದೂ ಸಚಿವರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನ ಶಾಸಕ, ಸಿಂಧ್‌ ಧಾರ್ಮಿಕ ವ್ಯವಹಾರಗಳ ರಾಜ್ಯ ಸಚಿವ ಖೇಲ್ ದಾಸ್ ಕೊಹಿಸ್ತಾನಿಯವರು ಶನಿವಾರ ಥಟ್ಟಾ ಜಿಲ್ಲೆಯ ಮುಖಾಂತರ ಪ್ರಯಾಣಿಸುತ್ತಿದ್ದರು. ಆ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ಅವರ ವಾಹನದ ಮೇಲೆ ಟೊಮೆಟೊ ಮತ್ತು ಆಲೂಗಡ್ಡೆಗಳನ್ನು ಎಸೆದಿದ್ದಾರೆ. ಘಟನೆಯಲ್ಲಿ ಕೊಹಿಸ್ತಾನಿಯವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್‌ನ ಪ್ರಧಾನಿ ಶೆಹಬಾಜ್ ಷರೀಫ್ ಘಟನೆಯನ್ನು ಖಂಡಿಸಿದ್ದು, ‘ಜನಪ್ರತಿನಿಧಿಗಳ ಮೇಲಿನ ಹಲ್ಲೆ ಸ್ವೀಕಾರಾರ್ಹವಲ್ಲ. ತನಿಖೆ ನಡೆಸಿ, ಅಪರಾಧ ಎಸಗಿದವರಿಗೆ ಯೋಗ್ಯ ಶಿಕ್ಷೆ ವಿಧಿಸಲಾಗುವುದು’ ಎಂದಿದ್ದಾರೆ.

ಮಹಾ ಕುಂಭ ಹಿಂದೆ ಯೋಗಿಗೆ ಪ್ರಧಾನಿ ಪಟ್ಟ ಕಟ್ಟುವ ತಂತ್ರ: ಅಖಿಲೇಶ್‌

ಪ್ರಯಾಗರಾಜ್‌: ‘ಬಿಜೆಪಿಯು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಯೋಜಿಸಿದೆ. ಮಹಾಕುಂಭ ಮೇಳವನ್ನು ದೊಡ್ಡದಾಗಿ ಆಯೋಜಿಸಿದ್ದು ಇದೇ ಕಾರಭಣಕ್ಕೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾಕುಂಭ ವೇಳೆ ಯೋಗಿ ಹೆಸರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಯೋಜನೆಯು ಕೇಳಿಬರುತ್ತಿತ್ತು. ಅವರಿಗೆ (ಬಿಜೆಪಿ) ಮಹಾಕುಂಭವನ್ನು ರಾಜಕೀಯ ಕುಂಭ ಮಾಡುವ ಉದ್ದೇಶವಿತ್ತು’ ಎಂದು ಆರೋಪಿಸಿದರು.ಇದೇ ವೇಳೆ ಇಂಡಿಯಾ ಕೂಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್‌, ‘2027ರ ವಿಧಾನಸಭೆ ಚುನಾವಣೆಗೂ ಇಂಡಿಯಾ ಕೂಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಒಂದೇ ದೇಗುಲ, ಬಾವಿ, ಸ್ಮಶಾನ: ಭಾಗವತ್‌ ಏಕತೆ ಮಂತ್ರ

ಅಲಿಗಢ: ಜಾತಿ ತಾರತಮ್ಯಕ್ಕೆ ಅಂತ್ಯ ಹಾಡಿ, ಸಾಮರಸ್ಯ ಬೆಳೆಸಲು ಹಿಂದೂ ಸಮುದಾಯವು ‘ಒಂದು ಮಂದಿರ, ಒಂದು ಬಾವಿ, ಒಂದು ಸ್ಮಶಾನ’ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಪ್ರಮುಖ ಮೋಹನ್‌ ಭಾಗವತ್‌ ಅವರು ಕರೆ ನೀಡಿದ್ದಾರೆ.ಅಲೀಗಢದಲ್ಲಿ ಸಂಘದ 2 ಶಾಖೆಗಳ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಭಾಗವತ್‌, ‘ಶಾಂತಿಯ ಪ್ರತಿ ಭಾರತ ತನ್ನ ಜವಾಬ್ದಾರಿಯನ್ನು ಪೂರೈಸಲು ಸಾಮಾಜಿಕ ಏಕತೆಯನ್ನು ಸಾಧಿಸುವುದು ಮುಖ್ಯ. ಸಂಸ್ಕಾರಗಳು ಹಿಂದೂ ಸಮಾಜದ ಮೂಲವಾಗಿದ್ದು, ಸಂಪ್ರದಾಯ, ಸಾಂಸ್ಕೃತಿಕ ಮೌಲ್ಯ ಮತ್ತು ನೈತಿಕ ತತ್ವಗಳುಳ್ಳ ಸಮಾಜವನ್ನು ನಿರ್ಮಿಸಬೇಕು’ ಎಂದು ಕರೆ ನೀಡಿದರು.ಇದೇ ವೇಳೆ, ಸಮಾಜದ ಎಲ್ಲಾ ವರ್ಗದವರಿಗೆ ತಳಮಟ್ಟದಲ್ಲೇ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಸಾರುವಂತೆ ಸ್ವಯಂಸೇವಕರಿಗೆ ಕರೆ ನೀಡಿರುವ ಅವರು, ‘ರಾಷ್ಟ್ರೀಯತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಡಿಪಾಯವನ್ನು ಬಲಪಡಿಸಲು ಹಬ್ಬಗಳ ಸಾಮೂಹಿಕ ಆಚರಣೆ ಅಗತ್ಯ’ ಎಂದರು.

ಠಾಕ್ರೆಗಳಿಂದ ಭಾವುಕ ಮಾತಷ್ಟೇ, ಇನ್ನೂ ಒಂದಾಗಿಲ್ಲ: ರಾವುತ್‌

ಮುಂಬೈ: ‘ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ನಡುವೆ ಇನ್ನೂ ಯಾವುದೇ ಮೈತ್ರಿ ಘೋಷಣೆಯಾಗಿಲ್ಲ. ಆದರೆ ಭಾವನಾತ್ಮಕವಾಗಿ ಮಾತನಾಡಿದ್ದಾರಷ್ಟೇ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ತಿಳಿಸಿದ್ದಾರೆ.

ಸುಮಾರು 2 ದಶಕದಿಂದ ಪ್ರತ್ಯೇಕವಾಗಿದ್ದ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗಲಿದ್ದಾರೆ. ಶಿವಸೇನೆ ಮತ್ತು ಎಂಎನ್‌ಎಸ್‌ ನಡುವೆ ಮೈತ್ರಿಯಾಗಲಿದೆ ಎಂಬ ಮಾತುಗಳು ಈಗ ಹರಿದಾಡುತ್ತಿವೆ. ಇದಕ್ಕೆ ಪೂರಕವಾಗಿ ಇಬ್ಬರೂ ನಾಯಕರು ಮೊನ್ನೆ ಹೇಳಿಕೆ ನೀಡಿದ್ದರು.ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ರಾವುತ್‌, ‘ರಾಜ್ ಮತ್ತು ಉದ್ಧವ್ ಠಾಕ್ರೆ ಸಹೋದರರು. ಅವರ ಸಂಬಂಧ ಮುರಿದುಹೋಗಿಲ್ಲ. ಮೈತ್ರಿ ಕುರಿತು ಇಬ್ಬರೂ ಸಹೋದರರು ನಿರ್ಧರಿಸುತ್ತಾರೆ’ ಎಂದು ತಿಳಿಸಿದರು. ಈ ಮೂಲಕ ಒಂದಾಗುವ ಸಾಧ್ಯತೆ ಇನ್ನೂ ಇದೆ ಎಂದು ಪರೋಕ್ಷವಾಗಿ ಹೇಳಿದರು.

ಬೇಗ ಚಿಕಿತ್ಸೆಗೆ ವಿನಂತಿಸಿದ ವೃದ್ಧನನ್ನು ಎಳೆದಾಡಿದ ವೈದ್ಯ

ಛತರಪುರ (ಮಧ್ಯಪ್ರದೇಶ): ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸುಮಾರು 70 ವರ್ಷದ ವ್ಯಕ್ತಿಯ ಮೇಲೆ ವೈದ್ಯ ಮತ್ತು ಆಸ್ಪತ್ರೆಯ ಸಿಬ್ಬಂದಿ ಹಲ್ಲೆ ನಡೆಸಿ, ಆತನನ್ನು ಅಮಾನವೀಯವಾಗಿ ಎಳೆದೊಯ್ದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಏ.17ರಂದು ಉದ್ಧವ್‌ಲಾಲ್‌ ಎಂಬುವರ ಮೇಲೆ ಹಲ್ಲೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವೈದ್ಯ ಮತ್ತು ಆಸ್ಪತ್ರೆಯ ಸಿಬ್ಬಂದಿ ಆತನ ಮೇಲೆ ಕಪಾಳಮೋಕ್ಷ ಮಾಡಿ ಬಲವಂತವಾಗಿ ಎಳೆದೊಯ್ಯುತ್ತಿರುವುದು ಕಂಡುಬರುತ್ತದೆ.ಘಟನೆ ಕುರಿತು ಮಾತನಾಡಿದ ಉದ್ಧವ್‌ಲಾಲ್, ‘ಆಸ್ಪತ್ರೆಯ ಸರತಿ ಸಾಲು ಬಹಳ ಉದ್ದವಿತ್ತು. ನನ್ನ ಪತ್ನಿ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಬಹಳ ಹೊತ್ತು ನಿಲ್ಲಲು ಸಾಧ್ಯವಿರಲಿಲ್ಲ. ಹಾಗಾಗಿ ಬೇಗ ಚಿಕಿತ್ಸೆ ನೀಡುವಂತೆ ವಿನಂತಿಸಿದೆ. ಅದರಿಂದ ಸಿಟ್ಟಿಗೆದ್ದ ವೈದ್ಯರು ಹಲ್ಲೆ ನಡೆಸಿದರು’ ಎಂದು ತಿಳಿಸಿದ್ದಾರೆ.

ಸಂಸ್ಕೃತಿ ಕುರಿತ ಮೋದಿ 35 ಭಾಷಣಗಳ ಪುಸ್ತಕ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಾಂಸ್ಕೃತಿಕ ವಿಷಯಗಳ ಕುರಿತು ಮಾಡಿದ ಆಯ್ದ 34 ಭಾಷಣಗಳನ್ನು ಕೃತಿರೂಪದಲ್ಲಿ ಹೊರತರಲಾಗಿದೆ.2015ರ ಸ್ವಾತಂತ್ರ್ಯದಿನದ ಭಾಷಣದಿಂದ ಹಿಡಿದು ಕಳೆದ ವರ್ಷ ವಾರಾಣಸಿಯ ಕಣ್ಣಿನ ಆಸ್ಪತ್ರೆ ಉದ್ಘಾಟನಾ ಸಮಾರಂಭದವರೆಗೆ, ಒಟ್ಟು 34 ಭಾಷಣಗಳನ್ನು ಪುಸ್ತಕದಲ್ಲಿ ಸೇರಿಸಲಾಗಿದ್ದು, ‘ಸಂಸ್ಕೃತಿ ಕಾ ಪಾಂಚವಾ ಅಧ್ಯಾಯ’ (ಸಂಸ್ಕೃತಿಯ ಐದನೇ ಅಧ್ಯಾಯ) ಎಂದು ಹೆಸರಿಡಲಾಗಿದೆ.ಏ.18ರಂದು ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ (ಐಜಿಎನ್‌ಸಿಎ) ಜುನಾ ಅಖಾಡದ ಮುಖ್ಯಸ್ಥ ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ.

Share this article