ಬೆಂಗಳೂರು : ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ.
2011ರ ಜನಗಣತಿ ಆಧರಿಸಿ ಪ್ರಸ್ತುತ ರಾಜ್ಯದಲ್ಲಿ 1.16 ಕೋಟಿ ಪರಿಶಿಷ್ಟ ಜಾತಿ ಸಮುದಾಯದವರು ಇರಬಹುದೆಂದು ಆಯೋಗ ಅಂದಾಜಿಸಿ ಸಮೀಕ್ಷೆ ಆರಂಭಿಸಿದೆ. ಈವರೆಗೆ ಬಹುತೇಕ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗಿಯಾಗಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 13-14 ಲಕ್ಷ ಮಂದಿ ಇರಬಹುದೆಂದು ಅಂದಾಜಿಸಿದ್ದರೂ ಈವರೆಗೆ ಎಂಟು ಲಕ್ಷ ದಾಟಿಲ್ಲ ಎಂದು ಮೂಲಗಳು ತಿಳಿಸಿವೆ.
ಆನ್‌ಲೈನ್ ಘೋಷಣೆ:
ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಆನ್‌ಲೈನ್ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದ್ದು, ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಘೋಷಣೆ ಮಾಡಿಕೊಂಡಿವೆ. ಈ ನಡುವೆ ವಿಶೇಷ ಶಿಬಿರಗಳ ಮೂಲಕ ಗಣತಿ ನಡೆಯುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಟ್ಟೆ ಇರುವ ಕಡೆ ಇಬ್ಬರು ಹಾಗೂ ಒಂದು ಮತಗಟ್ಟೆ ಇರುವ ಕಡೆ ಒಬ್ಬರನ್ನು ನಿಯೋಜಿಸಿ ಗಣತಿ ಕಾರ್ಯ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ ಚುರುಕು:
ಸಮೀಕ್ಷೆ ಬಗ್ಗೆ ವಿವಿಧ ರೀತಿ ಜಾಗೃತಿ ಮೂಡಿಸುವ ಜೊತೆಗೆ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ವಿವಿಧ ಕಡೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮನವೊಲಿಸಿದ ಪರಿಣಾಮ ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಚುರುಕಾಗಿ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಮಳೆ ಕಾರಣ ಸಮೀಕ್ಷೆ ಸರಿಯಾಗಿ ನಡೆದಿರಲಿಲ್ಲ. ಸಣ್ಣಪುಟ್ಟ ಗೊಂದಲಗಳನ್ನು ಗಣತಿದಾರರು ಎದುರಿಸುತ್ತಿದ್ದರು. ಈಗ ಅವರಿಗೆ ಸರಿಯಾದ ಮಾಹಿತಿ, ತಿಳಿವಳಿಕೆ ನೀಡಿದ ನಂತರ ಸುಸೂತ್ರವಾಗಿ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ವಿಶೇಷ ಶಿಬಿರ ಹಾಗೂ ಆನ್‌ಲೈನ್ ಮೂಲಕ ಇನ್ನೂ ಹೆಚ್ಚಿನ ಜನ ಕುಟುಂಬದ ವಿವರ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಜೂ.8ರವರೆಗೆ ಸಮೀಕ್ಷೆ ವಿಸ್ತರಣೆ
ಮನೆ ಮನೆ ಸಮೀಕ್ಷೆ, ಆನ್‌ಲೈನ್ ಮತ್ತು ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆಯನ್ನು ಜೂ.1ಕ್ಕೆ ಮುಕ್ತಾಯಗೊಳಿಸಲು ಆಯೋಗ ನಿರ್ಧರಿಸಿತ್ತು. ಅದರಂತೆ ಮನೆ ಮನೆ ಸಮೀಕ್ಷೆ ಮುಕ್ತಾಯವಾಗಿದೆ. ಆದರೆ ಇನ್ನೂ ಸಾಕಷ್ಟು ಜನ ಸಮೀಕ್ಷೆಯಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಆನ್‌ಲೈನ್ ಮತ್ತು ವಿಶೇಷ ಶಿಬಿರಗಳ ಸಮೀಕ್ಷೆ ಕಾರ್ಯವನ್ನು ಜೂ.8ರವರೆಗೆ ವಿಸ್ತರಣೆ ಮಾಡಲಾಗಿದೆ.