ವಿವಾದಿತ ಐಎಎಸ್ ಪೂಜಾಗೆ ‘ತರಬೇತಿ ತಡೆ ಶಿಕ್ಷೆ’

KannadaprabhaNewsNetwork | Published : Jul 17, 2024 12:48 AM

ಸಾರಾಂಶ

ಟ್ರೈನೀ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸಂಬಂಧಿಸಿದ ಹಲವು ಅಕ್ರಮಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ತರಬೇತಿ ಅವಧಿಯಲ್ಲಿನ ಸೇವೆಗೆ ಸರ್ಕಾರ ತಡೆ ನೀಡಿದೆ ಹಾಗೂ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮರಳುವಂತೆ ಆದೇಶಿಸಿದೆ.

ಪುಣೆ: ಟ್ರೈನೀ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸಂಬಂಧಿಸಿದ ಹಲವು ಅಕ್ರಮಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ತರಬೇತಿ ಅವಧಿಯಲ್ಲಿನ ಸೇವೆಗೆ ಸರ್ಕಾರ ತಡೆ ನೀಡಿದೆ ಹಾಗೂ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮರಳುವಂತೆ ಆದೇಶಿಸಿದೆ.

‘ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಅಕಾಡೆಮಿ, ‘ಮಹಾರಾಷ್ಟ್ರದ ವಾಶಿಮ್‌ನಲ್ಲಿ ಸೇವೆಯಲ್ಲಿರುವ ಪೂಜಾ ಖೇಡ್ಕರ್‌ ಅವರು ತರಬೇತಿಯನ್ನು ಮೊಟಕುಗೊಳಿಸಬೇಕು ಹಾಗೂ ಜು.23ರೊಳಗೆ ಮಸ್ಸೂರಿಯಲ್ಲಿ ಹೊಸದಾಗಿ ನೇಮಕ ಆಗುವ ಐಎಎಸ್‌ ಅಧಿಕಾರಿಗಳಿಗೆ ತರಬೇತಿ ನೀಡುವ ಮಸ್ಸೂರಿಯಲ್ಲಿನ ಶಾಸ್ತ್ರಿ ಅಕಾಡೆಮಿಗೆ ಮರಳಬೇಕು’ ಎಂದು ಸೂಚಿಸಿದೆ’ ಎಂದು ಸೂಚಿಸಿದೆ’ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್‌ ಗದ್ರೆ ಹೇಳಿದ್ದಾರೆ.‘ಪೂಜಾ ನೇಮಕಾತಿ ವೇಳೆ ನಕಲಿ ದೃಷ್ಟಿದೋಷ/ಅಂಗವೈಕಲ್ಯ ಹಾಗೂ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು. ಟ್ರೈನಿ ಅಧಿಕಾರಿ ಆಗಿದ್ದರೂ ಸೇವೆ ಸೇರಿದ ಬಳಿಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿರಿಯ ಅಧಿಕಾರಿಗಳಿಗೆ ಸಿಗುವ ಐಷಾರಾಮಿ ಸವಲತ್ತಿಗೆ ಬೇಡಿಕೆ ಇರಿಸಿದ್ದರು. ತಮ್ಮ ಸ್ವಂತ ಆಡಿ ಕಾರಿಗೆ ಅಕ್ರಮವಾಗಿ ರೆಡ್‌ ಬೀಕನ್‌ ಹಾಕಿಕೊಂಡಿದ್ದರು. ಅಲ್ಲದೆ, ಕಾರಿಗೆ ಹಾಕಲಾದ 27 ಸಾವಿರ ರು. ದಂಡ ನೀಡದೇ ಸತಾಯಿಸುತ್ತಿದ್ದರು’ ಎಂಬ ಆರೋಪಗಳು ಪೂಜಾ ಮೇಲಿವೆ.

ಹೀಗಾಗಿಯೇ ಸರ್ಕಾರ ಇತ್ತೀಚೆಗೆ ಇವರನ್ನು ಪುಣೆಯಿಂದ ವಾಶಿಮ್‌ ನಗರ ಹೆಚ್ಚುವರಿ ಆಯುಕ್ತ ಹುದ್ದೆಗೆ ಎತ್ತಂಗಡಿ ಮಾಡಿತ್ತು.

ಹೆಸರು ಬದಲಿ, ವಯಸ್ಸು ನಕಲಿ: ಪೂಜಾ ಮತ್ತೊಂದು ಅಕ್ರಮ

ಪುಣೆ: ಅಧಿಕಾರ ದುರ್ಬಳಕೆ, ಯೋಗ್ಯತೆಗೂ ಮೀರಿದ ಸವಲತ್ತು, ನಕಲಿ ದಾಖಲೆ ಸಲ್ಲಿಕೆ ಸೇರಿದಂತೆ ಹಲವಾರು ಆರೋಪ ಎದುರಿಸುತ್ತಿರುವ ಟ್ರೈನಿ ಐಎಎಸ್‌ ಅಧಿಕಾರಿಣಿ ಪೂಜಾ ಖೇಡ್ಕರ್‌ಳ ಮತ್ತೊಂದು ಅಕ್ರಮ ಬಯಲಾಗಿದೆ.

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಆಕೆ 2020 ಹಾಗೂ 2023ರಲ್ಲಿ ಆಕೆ ಸಲ್ಲಿಸಿದ್ದ ದಾಖಲೆಗಳಲ್ಲಿ ಹೆಸರು ಹಾಗೂ ವಯಸ್ಸಿನಲ್ಲಿ ಸಾಮ್ಯತೆ ಇಲ್ಲದ್ದು ಕಂಡುಬಂದಿದೆ. 2022ರಲ್ಲಿ ಸಿವಿಲ್‌ ಸರ್ವೀಸ್‌ ಪ್ರಿಲಿಮ್ಸ್‌ ಪರೀಕ್ಷೆಗೆ ಕೂತಿದ್ದ ಅವರು, ‘ಡಾ. ಖೇಡ್ಕರ್ ಪೂಜಾ ದಿಲೀಪ್‌ರಾವ್‌’ ಎಂಬ ಹೆಸರಿನೊಂದಿಗೆ 30 ವರ್ಷ ವಯಸ್ಸು ಎಂದು ದಾಖಲಿಸಿದ್ದಾರೆ. 2023ರಲ್ಲಿ ಇನ್ನೊಂದು ಪರೀಕ್ಷೆಗೆ ಕೂತಿದ್ದ ಆಕೆ, ತನ್ನ ಹೆಸರನ್ನು ಮಿಸ್ ಪೂಜಾ ಮನೋರಮಾ ದಿಲೀಪ್‌ ಖೇಡ್ಕರ್ ಎಂದು ಬದಲಿಸಿಕೊಂಡಿದ್ದು, ವಯಸ್ಸನ್ನು 31 ಎಂದು ದಾಖಲಿಸಿದ್ದಾಳೆ.

ಪುಣೆ ಡೀಸಿಯಿಂದ ನನಗೆ ಕಿರುಕುಳ: ಪೂಜಾ ದೂರು

ಟ್ರೈನಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ಪುಣೆಯ ಜಿಲ್ಲಾಧಿಕಾರಿ ಸುಹಾಸ್‌ ದಿವಾಸೆ ಅವರ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಅನೇಕ ಅಕ್ರಮಗಳ ಆರೋಪ ಹೊತ್ತಿರುವ ಪೂಜಾಳನ್ನು, ದಿವಾಸೆ ಅವರ ಆದೇಶದಂತೆ ಪುಣೆಯಿಂದ ವಾಶಿಮ್‌ಗೆ ವರ್ಗಾಯಿಸಲಾಗಿತ್ತು. ಈ ನಡುವೆ ಕಚೇರಿಗೆ ಹೋಗಿದ್ದ ತನಗೆ ದಿವಾಸೆ ಕಿರುಕುಳ ನೀಡಿದ್ದಾರೆ ಎಂದು ಪೂಜಾ ದೂರಿದ್ದಾಳೆ.ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆಯಲ್ಲಿ ಮಾನಸಿಕ ಹಾಗೂ ದೃಷ್ಟಿ ದೋಷದ ಬಗೆಗಿನ ಸುಳ್ಳು ಮಾಹಿತಿ ನೀಡಿ, ನಕಲಿ ದಾಖಲೆ ಸಲ್ಲಿಸಿದ್ದ ಆರೋಪ ಹೊತ್ತಿದ್ದ ಆಕೆಯ ತರಬೇತಿಯನ್ನು ರದ್ದುಗೊಳಿಸಿ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮರಳುವಂತೆ ಆದೇಶ ಹೊರಡಿಸಲಾಗಿದೆ.

2023ರಲ್ಲಿ ತನ್ನ ಹೆಸರಿನೊಂದಿಗೆ ತಾಯಿಯ ಹೆಸರನ್ನೂ ಸೇರಿಸಿಕೊಂಡು ತಂದೆಯ ಹೆಸರನ್ನು ಬದಲಿಸಿದ್ದಾಳೆ. 2020ರ ದಾಖಲೆಯಲ್ಲಿ 30 ವರ್ಷವಿದ್ದ ವಯಸ್ಸು ಮೂರು ವರ್ಷಗಳ ಬಳಿಕೆ ಕೇವಲ ಒಂದು ವರ್ಷ ಏರಿಕೆಯಾಗಿದೆ.

Share this article