ಧೋನಿ ಸೇರಿ 7 ದಿಗ್ಗಜರಿಗೆ ಐಸಿಸಿ ಹಾಲ್‌ ಆಫ್‌ ಫೇಮ್‌!

Published : Jun 10, 2025, 06:09 AM IST
MS Dhoni

ಸಾರಾಂಶ

ದಿಗ್ಗಜ ಕ್ರಿಕೆಟಿಗ ಎಂ.ಎಸ್‌.ಧೋನಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡಿದ್ದಾರೆ. ಅವರ ಜೊತೆಗೆ ಇತರ 6 ಕ್ರಿಕೆಟಿಗರು ಕೂಡಾ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಲಂಡನ್‌: ಭಾರತಕ್ಕೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ದಿಗ್ಗಜ ಕ್ರಿಕೆಟಿಗ ಎಂ.ಎಸ್‌.ಧೋನಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡಿದ್ದಾರೆ. ಅವರ ಜೊತೆಗೆ ಇತರ 6 ಕ್ರಿಕೆಟಿಗರು ಕೂಡಾ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಂಗಳವಾರ ಲಂಡನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡ ಕ್ರಿಕೆಟಿಗರ ಹೆಸರು ಘೋಷಿಸಲಾಯಿತು. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲ, ಗ್ರೇಮ್‌ ಸ್ಮಿತ್‌, ನ್ಯೂಜಿಲೆಂಡ್‌ನ ಡೇನಿಯಲ್‌ ವೆಟೋರಿ, ಮಹಿಳಾ ಕ್ರಿಕೆಟಿಗರಾದ ಪಾಕಿಸ್ತಾನದ ಸನಾ ಮೀರ್‌, ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡರು. ಈ ಗೌರವ ಪಡೆದ ಎಲ್ಲಾ ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಹಾಜರಿದ್ದರೂ, ಧೋನಿ ಗೈರಾದರು.

ಧೋನಿ ಸಾಧನೆ: ಧೋನಿ 2004ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು 350 ಏಕದಿನ ಪಂದ್ಯಗಳಲ್ಲಿ 50.57ರ ಸರಾಸರಿಯಲ್ಲಿ 10,773 ರನ್‌ ಗಳಿಸಿದ್ದು, ಇದರಲ್ಲಿ 10 ಶತಕ, 73 ಅರ್ಧಶತಕ ಒಳಗೊಂಡಿವೆ. 90 ಟೆಸ್ಟ್‌ನಲ್ಲಿ 6 ಶತಕ ಒಳಗೊಂಡ 4876 ರನ್‌ ಕಲೆಹಾಕಿದ್ದಾರೆ. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಹಾಲ್‌ ಆಫ್‌ ಫೇಮ್‌ ಪಟ್ಟಿ

ಕ್ರಿಕೆಟರ್ ದೇಶ

ಎಂ.ಎಸ್‌.ಧೋನಿ ಭಾರತ

ಮ್ಯಾಥ್ಯೂ ಹೇಡನ್‌ ಆಸ್ಟ್ರೇಲಿಯಾ

ಹಾಶಿಂ ಆಮ್ಲ ದಕ್ಷಿಣ ಆಫ್ರಿಕಾ

ಗ್ರೇಮ್‌ ಸ್ಮಿತ್‌ ದಕ್ಷಿಣ ಆಫ್ರಿಕಾ

ವೆಟೋರಿ ನ್ಯೂಜಿಲೆಂಡ್‌

ಸನಾ ಮೀರ್‌ ಪಾಕಿಸ್ತಾನ

ಧೋನಿ 11ನೇ ಭಾರತೀಯ

ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡ ಭಾರತದ 11ನೇ ಕ್ರಿಕೆಟಿಗ ಧೋನಿ. ಸುನಿಲ್‌ ಗವಾಸ್ಕರ್‌, ಬಿಶನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ವೀನೂ ಮಂಕಡ್‌, ಮಹಿಳಾ ಕ್ರಿಕೆಟಿಗರಾದ ಡಯಾನ ಎಡುಲ್ಜಿ, ನೀತು ಡೇವಿಡ್‌ ಕೂಡಾ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ಏನಿದು ಹಾಲ್‌ ಆಫ್‌ ಫೇಮ್‌?

ಇದು ಕ್ರಿಕೆಟ್‌ಗೆ ಅಸಾಧಾರಣ ಕೊಡುಗೆ ನೀಡಿದ ದಿಗ್ಗಜ ಆಟಗಾರರಿಗೆ ಐಸಿಸಿ ಸಲ್ಲಿಸುವ ವಿಶೇಷ ಗೌರವ. ಈ ವರೆಗೂ 11 ಭಾರತೀಯರು ಸೇರಿ ಒಟ್ಟು 122 ಮಂದಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡಿದ್ದಾರೆ.

PREV
Read more Articles on

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ: ಆಯೋಗ ಸ್ಪಷ್ಟನೆ