ಶಬರಿಮಲೆ ಅಯ್ಯಪ್ಪನ ದೇಗುಲ ಕೂಡ ವಕ್ಫ್‌ ಮಂಡಳಿ ಪಾಲಾದೀತು : ಕೇರಳ ಬಿಜೆಪಿ ನಾಯಕ ಕೆ. ಗೋಪಾಲಕೃಷ್ಣನ್‌

KannadaprabhaNewsNetwork | Updated : Nov 10 2024, 04:59 AM IST

ಸಾರಾಂಶ

‘ಶಬರಿಮಲೆ ಅಯ್ಯಪ್ಪನ ದೇಗುಲ ಕೂಡ ವಕ್ಫ್‌ ಮಂಡಳಿ ಪಾಲಾದೀತು’ ಎಂದು ಕೇರಳ ಬಿಜೆಪಿ ನಾಯಕ ಕೆ. ಗೋಪಾಲಕೃಷ್ಣನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಯನಾಡ್‌: ‘ಶಬರಿಮಲೆ ಅಯ್ಯಪ್ಪನ ದೇಗುಲ ಕೂಡ ವಕ್ಫ್‌ ಮಂಡಳಿ ಪಾಲಾದೀತು’ ಎಂದು ಕೇರಳ ಬಿಜೆಪಿ ನಾಯಕ ಕೆ. ಗೋಪಾಲಕೃಷ್ಣನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಯನಾಡ್‌ ಚುನಾವಣೆ ನಿಮಿತ್ತ ಬಿಜೆಪಿ ಪರ ಪ್ರಚಾರ ಮಾಡಿದ ಅವರು, ‘ಶಬರಿಮಲೆ ಅಯ್ಯಪ್ಪನ ಮುಸ್ಲಿಂ ಧರ್ಮೀಯ ಸ್ನೇಹಿತ ವಾವರ್‌ ಸ್ವಾಮಿ ದೇವಾಲಯ 18 ಮೆಟ್ಟಿಲ ಕೆಳಗೆ ಇದೆ. ವಾವರ್ ಮುಸ್ಲಿಂ ಆಗಿರುವ ಕಾರಣ ಇಡೀ ಶಬರಿಮಲೆಯೇ ತನ್ನದು ಎಂದು ವಕ್ಫ್‌ ಮಂಡಳಿ ಪ್ರತಿಪಾದಿಸಿದರೆ ಅಚ್ಚರಿಯಿಲ್ಲ. ಅಯ್ಯಪ್ಪನನ್ನು ಶಬರಿಮಲೆಯಿಂದ ಹೊರಹಾಕಿದರೆ ನೀವು ಒಪ್ಪುವಿರಾ?’ ಎಂದು ಪ್ರಶ್ನಿಸಿದರು.

ವಕ್ಫ್‌ ಎಂಬುದು 4 ಅಕ್ಷರಗಳ ದೈತ್ಯ: ಕೇಂದ್ರ ಸಚಿವ ಕಿಡಿ

ವಯನಾಡ್‌: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಶನಿವಾರ ವಕ್ಫ್ (ಡಬ್ಲುಎಕ್ಯುಎಫ್‌) ಮಂಡಳಿಯನ್ನು ‘4 ಅಕ್ಷರಗಳ ದೈತ್ಯ’ ಎಂದು ಕಿಡಿಕಾರಿದ್ದಾರೆ ಮತ್ತು ಅದನ್ನು ಕೇಂದ್ರ ಸರ್ಕಾರವು ಅದರ ಸ್ಥಾನದಲ್ಲಿ ಇರಿಸಲಿದೆ ಎಂದು ಹೇಳಿದ್ದಾರೆ. ಈ ಮೂಲಕ ವಕ್ಫ್‌ ತಿದ್ದಿಪಡಿ ಮಸೂದೆಯಲ್ಲಿ ವಕ್ಫ್‌ ಮಂಡಳಿಗೆ ಅಂಕುಶ ಹಾಕುವ ಸುಳುಹು ನೀಡಿದ್ದಾರೆ.ಆದರೆ, ಗೋಪಿಗೆ ತಿರುಗೇಟು ನೀಡಿದ ಕಾಂಗ್ರೆಸ್-ಮಿತ್ರ ಐಯುಎಂಎಲ್, ಜನರನ್ನು "ಒಡೆದು ಆಳುವ " ಹೇಳಿಕೆಗಳನ್ನು ನೀಡುವ ಬದಲು, ಭೂಕುಸಿತದಿಂದ ಸಂತ್ರಸ್ತರಾದ ವಯನಾಡಿನ ಜನರಿಗೆ ಅವರ ಪುನರ್ವಸತಿಗಾಗಿ ಕೇಂದ್ರದ ನೆರವು ಸಿಗುವಂತೆ ಮಾಡಲು ಕೇಂದ್ರ ಸಚಿವರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದೆ.

ಕಪ್ಲಿಂಗ್ ಕಳಚುವಾಗ ಬೋಗಿ-ಎಂಜಿನ್ ನಡುವೆ ಸಿಲುಕಿ ನೌಕರ ಸಾವು

ಪಟನಾ: ಕಪ್ಲಿಂಗ್‌ ಕಳುಚುವಾಗ ರೈಲಿನ ಎಂಜಿನ್‌ ಹಾಗೂ ಬೋಗಿ ನಡುವೆ ಸಿಲುಕಿ ನೌಕರನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರ ಬಿಹಾರದ ಬೇಗುಸರೈನ ಬರೌನಿ ಜಂಕ್ಷನ್‌ನಲ್ಲಿ ನಡೆದಿದೆ. ಮೃತ ನೌಕರನನ್ನು ಅಮರ್‌ ಕುಮಾರ್‌ ರಾವ್‌ ಎಂದು ಗುರುತಿಸಲಾಗಿದೆ.ರಾವ್‌ ಅವರು ಬರೌನಿ ಜಂಕ್ಷನ್‌ನಲ್ಲಿ ಲಖನೌ-ಬರೌನಿ ಎಕ್ಸ್‌ಪ್ರೆಸ್‌ ರೈಲಿನ ಕಪ್ಲಿಂಗ್‌ಗಳನ್ನು ಕಳಚುವ ವೇಳೆ ರೈಲು ಎಂಜಿನ್‌ ರಿವರ್ಸ್‌ ಬಂದಿದ್ದು, ಅದರ ನಡುವೆ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ರೈಲು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಸೂಕ್ತ ತನಿಖೆಗೆ ರೈಲ್ವೆ ಅಧಿಕಾರಿಗಳು ಆದೇಶಿಸಿದ್ದಾರೆ.

ಈ ಸಂಬಂಧ ಘಟನೆ ಸಂಭವಿಸುವಾಗಿನ ವಿಡಿಯೋವೊಂದು ವೈರಲ್‌ ಆಗಿದೆ.

ಹಿಮಾಚಲ ಸಿಎಂ ಫೋಟೋ ಬಿಡುಗಡೆಗೆ ಷರತ್ತು

ಶಿಮ್ಲಾ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರ ಸರ್ಕಾರಿ ಸಭೆಗಳ ಚಿತ್ರಗಳನ್ನು ವಾರ್ತಾ ಇಲಾಖೆ ಅನುಮತಿ ಇಲ್ಲದೇ ಮಾಧ್ಯಮಗಳಿಗೆ ಕೊಡುವಂತಿಲ್ಲ ಎಂದು ಹಿಮಾಚಲ ಸರ್ಕಾರವು ತನ್ನ ವಿವಿಧ ಇಲಾಖೆಗಳಿಗೆ ಆದೇಶ ಹೊರಡಿಸಿದೆ.ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿಎಂ ಮಾತಾಡುವ, ಸರಿಯಾಗಿ ಭಂಗಿಯಲ್ಲಿ ಇರದ ಫೋಟೋಗಳು ಸಿಎಂ ಅವರ ಘನತೆಗೆ ಧಕ್ಕೆಯನ್ನುಂಟು ಮಾಡುತ್ತವೆ. ಇದರಿಂದ ಅವರ ಸರ್ಕಾರಕ್ಕೂ ಮುಜುಗರವಾಗುತ್ತದೆ. ಹೀಗಾಗಿ ಇಲಾಖೆಗಳು ಸಭೆಗಳಲ್ಲಿನ ಚಿತ್ರಗಳನ್ನು ವಾರ್ತಾ ಇಲಾಖೆಯ ಅನುಮತಿ ಪಡೆದ ಬಳಿಕವೇ ಮಾಧ್ಯಮಗಳಿಗೆ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ನೀಟ್‌ ಆಕಾಂಕ್ಷಿ ಮೇಲೆ ಅತ್ಯಾಚಾರ: ಇಬ್ಬರು ಶಿಕ್ಷಕರ ಸೆರೆ

ಕಾನ್ಪುರ: ಇಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಪ್ರಸಿದ್ಧ ಕೋಚಿಂಗ್‌ ಸೆಂಟರ್‌ನ ಇಬ್ಬರು ಶಿಕ್ಷಕರು ಅತ್ಯಾಚಾರವೆಸಗಿ, ಬ್ಲಾಕ್‌ಮೇಲ್‌ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಜೀವಶಾಸ್ತ್ರದ ಶಿಕ್ಷಕ ಸಾಹಿಲ್ ಸಿದ್ದಿಕಿ (32), ರಸಾಯನಶಾಸ್ತ್ರ ಶಿಕ್ಷಕ ವಿಕಾಸ್ ಪೋರ್ವಾಲ್ (39) ಬಂಧಿತರು.ಅಪ್ರಾಪ್ತ ಬಾಲಕಿಯೊಬ್ಬಳು ಇಲ್ಲಿನ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದಳು. ಆಕೆಗೆ ತರಬೇತಿ ನೀಡುತ್ತಿದ್ದ ಸಿದ್ದಿಕಿ ತನ್ನ ಮನೆಯಲ್ಲಿ ಪಾರ್ಟಿ ಇದೆ ಎಂದು ಆಕೆಯನ್ನು ಆಹ್ವಾನಿಸಿದ್ದನು. ಆ ವೇಳೆ ಮನೆಗೆ ಹೋದ ಬಾಲಕಿ ಮೇಲೆ ಕುಡಿದ ಮತ್ತಿನಲ್ಲಿ ಸಿದ್ದಿಕಿ ಅತ್ಯಾಚಾರವೆಸಗಿದ್ದು, ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕೆಲವು ದಿನಗಳ ನಂತರ ಮತ್ತೊಂದು ಪಾರ್ಟಿಗೆ ಆಹ್ವಾನಿಸಿದ್ದು, ಅಲ್ಲಿ ವಿಕಾಸ್‌ ಪೋರ್ವಾಲ್‌ ಅವರೂ ಸಹ ಅತ್ಯಾಚಾರವೆಸಗಿದ್ದಾನೆ. ಹೀಗೆ ಇಬ್ಬರೂ ಶಿಕ್ಷಕರು ತಿಂಗಳುಗಳಗಟ್ಟಲೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.

ಇತ್ತೀಚೆಗೆ ತನ್ನ ಊರಿಗೆ ತೆರಳಿದ್ದ ಬಾಲಕಿ ಈ ವಿಚಾರವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಅವರನ್ನ ಬಂಧಿಸಲಾಗಿದೆ.ಇತ್ತೀಚೆಗೆ ಸಿದ್ದಿಕಿ ಮತ್ತೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಡಿಯೋ ವೈರಲ್‌ ಆಗಿದ್ದು, ಆತನನ್ನು ಪೊಲೀಸರು ಬಂಧಿಸಿ ನಂತರ   ಬಿಡುಗಡೆ ಮಾಡಿದ್ದರು.

Share this article