;Resize=(412,232))
ನವದೆಹಲಿ : ಬೀದಿ ನಾಯಿ ನಿಯಂತ್ರಣ ನಿಯಮಾವಳಿ ಅನುಷ್ಠಾನಕ್ಕೆ ತಾರದೆ ಕಳೆದ 5 ವರ್ಷಗಳಿಂದ ಸುಮ್ಮನೆ ಕೂತಿರುವ ಸರ್ಕಾರಗಳ ವಿರುದ್ಧ ಹಾಗೂ ಅವನ್ನು ಪೋಷಿಸುತ್ತಿರುವ ಸಂಘ ಸಂಸ್ಥೆಗಳು ಮತ್ತು ಶ್ವಾನಪ್ರಿಯರ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ಗರಂ ಆಗಿದೆ. ‘ಬೀದಿ ನಾಯಿಗಳ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆಯಲ್ಲಿ ಏಕೆ ಸಾಕುತ್ತಿಲ್ಲ?’ ಎಂದು ಶ್ವಾನಪ್ರಿಯರು ಹಾಗೂ ನಾಯಿ ಪ್ರಿಯ ಸಂಸ್ಥೆಗಳನ್ನು ಅದು ಪ್ರಶ್ನಿಸಿದೆ. ಅಲ್ಲದೆ, ‘ಬೀದಿ ನಾಯಿಗಳ ದಾಳಿಗೆ ಭಾರೀ ಪರಿಹಾರ ನೀಡುವಂತೆ ಸರ್ಕಾರಗಳಿಗೆ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ಆದೇಶಿಸುತ್ತೇವೆ’ ಎಂದು ಹೇಳಿದೆ.
ಬೀದಿನಾಯಿ ಹಾವಳಿ ತಡೆಗೆ ತಾನು ನೀಡಿದ್ದ ಆದೇಶ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಕ್ರಂನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಬೀದಿ ನಾಯಿ ಕಡಿತದಿಂದ ಉಂಟಾಗುವ ಯಾವುದೇ ಗಾಯ, ಸಾವಿಗೆ ಭಾರೀ ಪರಿಹಾರ ನೀಡುವಂತೆ ನಾವು ರಾಜ್ಯ ಸರ್ಕಾರಗಳನ್ನು ಕೇಳಲಿದ್ದೇವೆ. ಏಕೆಂದರೆ ಕಳೆದ 5 ವರ್ಷಗಳಿಂದ ಬೀದಿ ನಾಯಿ ನಿಯಂತ್ರಣ ಕ್ರಮ ಜಾರಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಜತೆಗೆ ಯಾರೆಲ್ಲ ಬೀದಿ ನಾಯಿಗೆ ಆಹಾರ ಹಾಕುತ್ತಾರೋ ಅವರನ್ನೂ ಹೊಣೆಗಾರರನ್ನಾಗಿ ಮಾಡಿ ಉತ್ತರದಾಯಿತ್ವ ಹೊರಿಸಲಾಗುವುದು’ ಎಂದು ತಿಳಿಸಿತು.
‘ಒಂದು ವೇಳೆ ಎನ್‌ಜಿಒಗಳು ಅಥವಾ ಶ್ವಾನಪ್ರಿಯರಿಗೆ ಬೀದಿ ನಾಯಿಗಳು ಅಷ್ಟೊಂದು ಇಷ್ಟವೆಂದಾದರೆ ಅವುಗಳನ್ನು ಮನೆಗೆ ಏಕೆ ಕೊಂಡೊಯ್ಯಲ್ಲ? ಆ ನಾಯಿಗಳು ಯಾಕೆ ಊರೆಲ್ಲ ಅಡ್ಡಾಡಬೇಕು? ದಾರಿ ಹೋಕರಿಗೆ ಕಚ್ಚಬೇಕು? ಜನರಲ್ಲಿ ಆತಂಕ ಮೂಡಿಸಬೇಕು?’ ಎಂದು ನ್ಯಾ। ನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾ.ಮೆಹ್ತಾ ಅವರು, ‘9 ವರ್ಷದ ಮಗುವಿನ ಮೇಲೆ ನಾಯಿ ಕಚ್ಚಿದರೆ ಯಾರನ್ನು ಉತ್ತರದಾಯಿಯನ್ನಾಗಿ ಮಾಡಬೇಕು? ಆ ನಾಯಿಗಳಿಗೆ ಅನ್ನ ಹಾಕುವ ಸಂಘಟನೆಗಳನ್ನೇ? ಬೀದಿ ನಾಯಿಗಳ ಸಮಸ್ಯೆಗೆ ನಾವು ಕಣ್ಣುಮುಚ್ಚಿ ಕೂರಬೇಕೆಂದು ನಿಮ್ಮ ಬಯಕೆಯೇ?’ ಎಂದು ಎನ್‌ಜಿಒಗಳನ್ನು ಪ್ರಶ್ನಿಸಿದರು.
‘ಗುಜರಾತ್‌ನಲ್ಲಿ ವಕೀಲರೊಬ್ಬರಿಗೆ ಬೀದಿ ನಾಯಿ ಕಚ್ಚಿದ್ದು, ಆ ನಾಯಿಗಳನ್ನು ಹಿಡಿಯಲು ಸಂಬಂಧಪಟ್ಟವರು ಹೋಗಿದ್ದರು. ಆಗ ಶ್ವಾನಪ್ರೇಮಿ ಎಂದು ಕರೆಸಿಕೊಂಡ ಕೆಲ ವಕೀಲರೇ ಸೇರಿಕೊಂಡು ಪ್ರಾಧಿಕಾರದವರಿಗೆ ಹಲ್ಲೆ ನಡೆಸಿದ್ದು ಬೇಸರದ ಸಂಗತಿ’ ಎಂದು ಈ ವೇಳೆ ನ್ಯಾ. ಮೆಹ್ತಾ ಹೇಳಿದರು.
ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳ ತೆರವುಗೊಳಿಸುವಂತೆ ಕಳೆದ ನ.7ರಂದು ತಾನು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
- 9 ವರ್ಷದ ಮಗುವಿನ ಮೇಲೆ ನಾಯಿ ಕಚ್ಚಿದರೆ ಯಾರನ್ನು ಹೊಣೆಗಾರರನ್ನು ಮಾಡಬೇಕು? ಎನ್‌ಜಿಒಗಳನ್ನೆ?
- ಗುಜರಾತ್ ವಕೀಲರೊಬ್ಬರಿಗೆ ಬೀದಿ ನಾಯಿ ಕಚ್ಚಿತ್ತು. ಹಿಡಿಯಲು ಹೋದವರಿಗೆ ಶ್ವಾನಪ್ರಿಯರು ಥಳಿಸಿದ್ದರು
- ಪ್ರತಿ ನಾಯಿ ಕಡಿತ, ಅದರಿಂದಾಗುವ ಸಾವು ಅಥವಾ ಹಾನಿಗೆ ರಾಜ್ಯಗಳು ಹೆಚ್ಚು ಪರಿಹಾರ ಕೊಡಬೇಕು
- ಕಳೆದ ಐದು ವರ್ಷಗಳಲ್ಲಿ ಬೀದಿ ನಾಯಿಗಳ ವಿರುದ್ಧ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದ್ದಕ್ಕೆ ಈ ನೀತಿ
- ಬೀದಿ ನಾಯಿಗಳಿಗೆ ಆಹಾರ ನೀಡುವವರಿಗೂ ಹೊಣೆಗಾರಿಕೆಯನ್ನು ನಾವು ನಿಗದಿ ಮಾಡಲಿದ್ದೇವೆ: ಸುಪ್ರೀಂ
ಹೈದರಾಬಾದ್: ತೆಲಂಗಾಣದಲ್ಲಿ 200 ಬೀದಿ ನಾಯಿಗಳ ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ 500 ಶ್ವಾನಗಳನ್ನು ಕೊಲ್ಲಲಾಗಿದೆ. ಕಾಮರೆಡ್ಡಿ ಜಿಲ್ಲೆಯೊಂದರ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆ ವೇಳೆ ಸರಪಂಚ್ ಹಾಗೂ ಸದಸ್ಯರು ಗ್ರಾಮದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳನ್ನು ನಿಯಂತ್ರಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ ವಿಷ ವಿಕ್ಕಿ ಹತ್ಯೆ ಮಾಡಲಾಗಿದೆ. ಈ ಸಂಬಂಧ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಹಳ್ಳಿಯಲ್ಲಿ 300 ನಾಯಿಗಳ ಹತ್ಯೆಗೈದಿರುವ ಘಟನೆ ನಡೆದಿತ್ತು.