ಭಾರತದ ವಿರೋಧದ ನಡುವೆಯೂ ಉಗ್ರಪೋಷಕ ಪಾಕಿಸ್ತಾನಕ್ಕೆ 8,500 ಕೋಟಿ ಹಣಕಾಸು ನೆರವು ನೀಡಲು ನಿರ್ಧರಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ಇಸ್ಲಾಮಾಬಾದ್: ಭಾರತದ ವಿರೋಧದ ನಡುವೆಯೂ ಉಗ್ರಪೋಷಕ ಪಾಕಿಸ್ತಾನಕ್ಕೆ 8,500 ಕೋಟಿ ಹಣಕಾಸು ನೆರವು ನೀಡಲು ನಿರ್ಧರಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ಪಾಕಿಸ್ತಾನಕ್ಕೆ ಹಣಕಾಸು ನೆರವಿನ ಮುಂದಿನ ಕಂತು ಬಿಡುಗಡೆ ಮಾಡಲು ಈ ಹಿಂದಿನ 39ರ ಜೊತೆಗೆ ಇದೀಗ ಇನ್ನೂ 11 ಷರತ್ತುಗಳನ್ನು ವಿಧಿಸಿದೆ. ಇದರ ಜತೆಗೆ, ಭಾರತದ ಜತೆಗಿನ ಸಂಘರ್ಷವು ಐಎಂಎಫ್ ಹಣಕಾಸು ನೆರವಿನಿಂದ ನಡೆಯುತ್ತಿರುವ ವಿತ್ತೀಯ, ಬಾಹ್ಯ ಮತ್ತು ಸುಧಾರಣಾ ಕಾರ್ಯಕ್ರಮಗಳ ಗುರಿಗಳಿಗೆ ಅಪಾಯ ತಂದೊಡ್ಡಬಹುದು ಎಂದೂ ಸ್ಪಷ್ಟವಾಗಿ ಎಚ್ಚರಿಸಿದೆ.
ಪಾಕಿಸ್ತಾನವು ದಿವಾಳಿ ಅಂಚಿಗೆ ತಲುಪಿದ್ದು, ಸಂಪೂರ್ಣವಾಗಿ ಐಎಂಎಫ್‌ನ ಹಣಕಾಸು ನೆರವನ್ನೇ ಅವಲಂಬಿಸಿಕೊಂಡು ಮುನ್ನಡೆಯುತ್ತಿದೆ. ಪಾಕಿಸ್ತಾನಕ್ಕೆ ಐಎಂಎಫ್ 20,000 ಕೋಟಿ ರು. ಆರ್ಥಿಕ ನೆರವು ನೀಡಲು ಮುಂದಾಗಿದ್ದು, ಈಗಾಗಲೇ ಇದರಲ್ಲಿ 8500 ಕೋಟಿ ರು. ಬಿಡುಗಡೆ ಮಾಡಿದೆ. ಮುಂದಿನ ಕಂತು ಬಿಡುಗಡೆಗೆ ಇದೀಗ ಹೊಸದಾಗಿ ಷರತ್ತುಗಳನ್ನು ವಿಧಿಸಿದೆ.
ಇತ್ತೀಚೆಗಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಭಿಕ್ಷುಕ ದೇಶ. ಪಾಕಿಸ್ತಾನ ನಿಂತಲ್ಲಿಂದಲೇ ಭಿಕ್ಷುಕರ ಸಾಲು ಆರಂಭವಾಗುತ್ತದೆ ಎಂದಿದ್ದರು. ಅದರ ಬೆನ್ನಲ್ಲೇ ತಾನು ನೀಡಿದ ಸಾಲದ ಹಣವನ್ನು ಸೂಕ್ತವಾಗಿ ಯೋಜಿತ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ಕಡ್ಡಾಯ ಮಾಡಲು ಪಾಕಿಸ್ತಾನಕ್ಕೆ ಐಎಂಫ್ ಹೊಸ ಷರತ್ತುಗಳನ್ನು ವಿಧಿಸಲಾಗಿದೆ. ಜೊತೆಗೆ ಭಾರತದ ಜೊತೆಗಿನ ಸಂಘರ್ಷವು ತಾನು ನೀಡಿದ ಸಾಲವು ನಿಗದಿತ ಯೋಜನೆಗಳ ಗುರಿ ತಲುಪುವುದು ಕಷ್ಟ. ಹೀಗಾಗಿ ಸಂಘರ್ಷದಿಂದ ದೂರ ಉಳಿಯುವುದು ಒಳಿತು ಎಂದು ಪರೋಕ್ಷವಾಗಿ ಸಂದೇಶ ರವಾನಸಿದೆ ಎನ್ನಲಾಗಿದೆ.
ಏನೇನು ಷರತ್ತುಗಳು?:
ಮುಂದಿನ ಹಣಕಾಸು ವರ್ಷಕ್ಕೆ 17 ಲಕ್ಷ ಕೋಟಿ ರು. ಬಜೆಟ್ ಮಂಡಿಸಬೇಕು, ವಿದ್ಯುತ್ ಮೇಲಿನ ಸಾಲದ ಸೇವೆ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬೇಕು, ಮೂರು ವರ್ಷಕ್ಕೂ ಹೆಚ್ಚು ವರ್ಷ ಬಳಕೆಯಾಗಿರುವ ಕಾರುಗಳ ಆಮದಿನ ಮೇಲಿನ ನಿರ್ಬಂಧ ರದ್ದು ಮಾಡಬೇಕು, ಕೃಷಿ ಮೇಲೂ ಹೊಸದಾಗಿ ಆದಾಯ ತೆರಿಗೆ ವಿಧಿಸಬೇಕು, ಇಂಧನ, ಗ್ಯಾಸ್ ಶುಲ್ಕದಲ್ಲೂ ಸುಧಾರಣೆ ಜಾರಿ ಮಾಡುವಂತೆಯೂ ಐಎಂಎಫ್ ಷರತ್ತು ವಿಧಿಸಿದೆ.
ಈ ಸಂಬಂಧ ಐಎಂಎಫ್ ಸಿಬ್ಬಂದಿ ಹಂತದ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಜತೆಗಿನ ಸಂಘರ್ಷವು ಪಾಕಿಸ್ತಾನದ ಆರ್ಥಿಕತೆಗೆ ಹೆಚ್ಚಿನ ಹೊಡೆತ ನೀಡಬಹುದು. ಐಎಂಎಫ್ ಸಾಲ ಪಡೆದು ನಡೆಯುತ್ತಿರುವ ಸುಧಾರಣಾ ಕ್ರಮಗಳ ಮೇಲೆ ಹೊಡೆತ ಬೀಳಬಹುದೂ ಎಂದು ಎಚ್ಚರಿಸಲಾಗಿದೆ.
ಪಾಕಿಸ್ತಾನಕ್ಕೆ ಐಎಂಎಫ್ ನೀಡುವ ಸಾಲವನ್ನು ಆ ದೇಶವು ಉಗ್ರ ಕೃತ್ಯಗಳಿಗೆ ಬಳಸುತ್ತದೆ. ಈ ಮೂಲಕ ಐಎಂಎಫ್ ಹಣಕಾಸು ನೆರವಿನ ದುರುಪಯೋಗ ಆಗುತ್ತದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.