ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳೂ ಸೇರಿದಂತೆ ಅಲ್ಪಸಂಖ್ಯಾತರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಭಾರತಕ್ಕೆ ಭರವಸೆ ನೀಡಿದ್ದಾರೆ.
ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ಶುಕ್ರವಾರ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಕರೆಮಾಡಿದ್ದ ಯೂನಸ್ ಈ ಭರವಸೆ ನೀಡಿದ್ದಾರೆ.
ಯೂನಸ್ ಜೊತೆಗಿನ ಮಾತುಕತೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಮುಹಮ್ಮದ್ ಯೂನುಸ್ ಅವರೊಂದಿಗೆ ಟೆಲಿಫೋನ್ ಸಂಭಾಷಣೆ ನಡೆಸಲಾಯಿತು. ಬಾಂಗ್ಲಾದಲ್ಲಾಗುತ್ತಿರುವ ವರ್ತಮಾನಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ ಹಾಗೂ ಅಭಿವೃದ್ಧಿಶೀಲ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲ ಸದಾ ಇರುತ್ತದೆ ಎಂದು ಪುನರುಚ್ಚರಿಸಲಾಯಿತು. ಅಲ್ಲಿನ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸುವುದಾಗಿ ಯೂನಸ್ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.
ಕಳೆದ ವಾರ ಯೂನಸ್ ಅಧಿಕಾರ ವಹಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿ, ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಾಗುತ್ತಿರುವವರ ಮೇಲಿನ ದಾಳಿಯನ್ನು ಖಂಡಿಸಿ, ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದರು. ಜೊತೆಗೆ ಬುಧವಾರ ಸ್ವಾತಂತ್ರ್ಯ ದಿನದ ಭಾಷಣದಲ್ಲಿಯೂ ಬಾಂಗ್ಲಾದೇಶದ ವಿಷಯ ಪ್ರಸ್ತಾಪಿಸಿ, ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ದಾಳಿಯನ್ನು ಖಂಡಿಸಿದ್ದರು.
ಬಾಂಗ್ಲಾ ಹಿಂದೂಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರಿಗೆ ಕಲ್ಲೇಟು!
ಮುಂಬೈ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಉತ್ತರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನಾ ಮೆರವಣಿಗೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದು ನಗರದಲ್ಲಿ ಶುಕ್ರವಾರ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಸಕಲ ಹಿಂದೂ ಸಮಾಜ ಹಿಂದೂ ಸಂಘಟನೆಯ ನೂರಾರು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಮೆರವಣಿಗೆ ದ್ವಿಚಕ್ರವಾಹನ ಶೋ ರೂಂ ಬಳಿ ಬಂದಾಗ ಕಲ್ಲು ಎಸೆದಿದ್ದಾರೆ. ಈ ಕಲ್ಲು ತೂರಾಟದಲ್ಲಿ ಪ್ರತಿಭಟನಾಕಾರರಿಗೆ ಯಾವುದೇ ರೀತಿಯ ಗಾಯಗಳು ಸಂಭವಿಸಿಲ್ಲ. ಆದರೆ ಶೋ ರೂಂನ ಮುಂಭಾಗದ ಗ್ಲಾಸ್‌ಗಳು ಪುಡಿಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.