ಮೆರಿಟ್‌ ಆಧಾರದಲ್ಲಿ ಶಿಕ್ಷಣ, ಉದ್ಯೋಗ ತಪ್ಪು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ !

KannadaprabhaNewsNetwork |  
Published : Mar 22, 2025, 02:05 AM ISTUpdated : Mar 22, 2025, 04:44 AM IST
Lok Sabha LoP Rahul Gandhi (Photo/ANI)

ಸಾರಾಂಶ

ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಅರ್ಹತೆ (ಮೆರಿಟ್‌) ಆಧರಿಸಿ ಪ್ರವೇಶ ನೀಡುವ ಮೆರಿಟ್‌ ವ್ಯವಸ್ಥೆಯೇ ಸರಿ ಇಲ್ಲ. ಇದು ಕೇವಲ ಮೇಲ್ವರ್ಗದವರಿಗೆ ಮಾತ್ರ ಅನುಕೂಲ ಆಗುವಂತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ನವದೆಹಲಿ: ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಅರ್ಹತೆ (ಮೆರಿಟ್‌) ಆಧರಿಸಿ ಪ್ರವೇಶ ನೀಡುವ ಮೆರಿಟ್‌ ವ್ಯವಸ್ಥೆಯೇ ಸರಿ ಇಲ್ಲ. ಇದು ಕೇವಲ ಮೇಲ್ವರ್ಗದವರಿಗೆ ಮಾತ್ರ ಅನುಕೂಲ ಆಗುವಂತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಹುಲ್‌ ಗಾಂಧಿ, ‘ದಲಿತರು, ಹಿಂದುಳಿದವರು ಹಾಗೂ ಆದಿವಾಸಿ ಜನಾಂಗದವರು ನ್ಯಾಯೋಚಿತವಾಗಿ ನಮ್ಮ ಶಿಕ್ಷಣ ಹಾಗೂ ಸರ್ಕಾರಿ ನೌಕರಿಯನ್ನು ಪ್ರವೇಶಿಸುವ ವ್ಯವಸ್ಥೆ ಇದೆ ಎನ್ನುವುದು ಭ್ರಮೆ. ಮೆರಿಟ್‌ ವ್ಯವಸ್ಥೆಯು ಸಂಪೂರ್ಣವಾಗಿ ಮೇಲ್ವರ್ಗದವರ ಪರವಾಗಿದೆ’ ಎಂದರು. ಇದೇ ವೇಳೆ ಜಾತಿ ಗಣತಿಯ ಬಗ್ಗೆ ಮಾತನಾಡಿದ ಅವರು, ‘ಸಮಾಜದಲ್ಲಿನ ಅಸಮಾನತೆ ಹಾಗೂ ತಾರತಮ್ಯವನ್ನು ಬಯಲಿಗೆಳೆಯಲು ಜಾತಿ ಗಣತಿ ಅವಶ್ಯಕ. ಇದನ್ನು ವಿರೋಧಿಸುವವರು ಸತ್ಯವನ್ನು ಮುಚ್ಚಿಡಬಯಸಿದ್ದಾರೆ’ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಅಂತೆಯೇ, ಅಸ್ಪೃಶ್ಯರಿಗೆ ಸಾರ್ವಜನಿಕ ನೀರಿನ ಮೂಲಗಳನ್ನು ಬಳಸಲು ಅವಕಾಶ ಒದಗಿಸಲು ಡಾ। ಬಿ.ಆರ್‌. ಅಂಬೇಡ್ಕರ್‌ ಅವರು 1927ರ ಮಾ.20ರಂದು ಕೈಗೊಂಡ ಮಹದ ಸತ್ಯಾಗ್ರಹವನ್ನು ಉಲ್ಲೇಖಿಸಿದ ರಾಹುಲ್‌, ‘ಅದು ಸಮಾನತೆ ಮತ್ತು ಗೌರವಕ್ಕಾಗಿ ನಡೆದ ಹೋರಾಟವಾಗಿತ್ತು. 98 ವರ್ಚಗಳ ಹಿಂದೆ ಆರಂಭವಾದ ಈ ಸಮರ ಈಗಲೂ ಮುಂದುವರೆಯುತ್ತದೆ’ ಎಂದರು.

ಬಿಜೆಪಿ ಟೀಕೆ:

ರಾಹುಕ್‌ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ‘ತಾನೇನು ಮಾತಾಡುತ್ತಿದ್ದೇನೆಂದು ರಾಹುಲ್‌ಗೆ ತಿಳಿದಿದೆಯೇ? ಬಡ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗದಿಂದ ಬಂದು ಅರ್ಹತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಮೇಲೆಬಂದ ಲಕ್ಷಾಂತರ ಮಂದಿಗೆ ಅವಮಾನ ಮಾಡಿದ್ದಾರೆ. ಆದರೆ ರಾಜವಂಶದವರಿಗೆ ಇದೆಲ್ಲ ಹೇಗೆ ಅರ್ಥವಾದೀತು?’ ಎಂದು ವಾಗ್ದಾಳಿ ನಡೆಸಿದ್ದಾರೆ.

PREV

Recommended Stories

ಎನ್‌ಡಿಎ ಅಂದ್ರೆ ವಿಕಾಸ, ಆರ್‌ಜೆಡಿ ಅಂದ್ರೆ ವಿನಾಶ: ಮೋದಿ
ಇನ್ನೂ ಮಾನಸಿಕ ಹಿಂಸೆ ಆಗುತ್ತಿದೆ: ಏರಿಂಡಿಯಾ ಸಂತ್ರಸ್ತ