13 ವರ್ಷದಿಂದ ಕೋಮಾದಲ್ಲಿದ್ದವಗೆ ದಯಾಮರಣ

KannadaprabhaNewsNetwork |  
Published : Mar 12, 2026, 12:45 AM ISTUpdated : Mar 12, 2026, 05:10 AM IST
Rana

ಸಾರಾಂಶ

13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ (32) ಎಂಬ ವ್ಯಕ್ತಿಗೆ ಕೃತಕ ಜೀವನಾಧಾರ ವ್ಯವಸ್ಥೆಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿ ಪರೋಕ್ಷ ದಯಾಮರಣಕ್ಕೆ (ಪ್ಯಾಸಿವ್ ಯೂಥನೇಶಿಯಾ) ಅವಕಾಶ ಕಲ್ಪಿಸಿ, ಐತಿಹಾಸಿಕ ತೀರ್ಪನ್ನಿತ್ತಿದೆ.

  ನವದೆಹಲಿ :  13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ (32) ಎಂಬ ವ್ಯಕ್ತಿಗೆ ಕೃತಕ ಜೀವನಾಧಾರ ವ್ಯವಸ್ಥೆಯನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿ ಪರೋಕ್ಷ ದಯಾಮರಣಕ್ಕೆ (ಪ್ಯಾಸಿವ್ ಯೂಥನೇಶಿಯಾ) ಅವಕಾಶ ಕಲ್ಪಿಸಿ, ಐತಿಹಾಸಿಕ ತೀರ್ಪನ್ನಿತ್ತಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರಕ್ಕೆ ದಯಾಮರಣದ ಕುರಿತು ಸಮಗ್ರ ಕಾನೂನು ತರುವಂತೆ ಸೂಚನೆ ನೀಡಿದೆ. ದೆಹಲಿಯ ಏಮ್ಸ್‌ ಆಸ್ಪತ್ರೆಗೆ, ಗೌರವಯುತವಾಗಿ ರೋಗಿಯ ಜೀವನಾಧಾರ ವ್ಯವಸ್ಥೆಯನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ. ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿನ ಮುಖ್ಯ ವೈದ್ಯಾಧಿಕಾರಿಗಳು ದ್ವಿತೀಯ ಮಂಡಳಿಗಳಿಗೆ ವೈದ್ಯರನ್ನು ಆಯ್ಕೆ ಮಾಡಬೇಕು. ಈ ಎರಡೂ ಮಂಡಳಿಗಳು ಜೀವನಾಧಾರ ತೆಗೆದುಹಾಕಲು ಶಿಫಾರಸು ಮಾಡಿದರೆ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ರಾಣಾ ಅವರ ಪೋಷಕರ ಕುರಿತು ವಿಶೇಷ ಗೌರವ ವ್ಯಕ್ತಪಡಿಸಿದ ಪೀಠ, ‘ಅವರು ಯಾವತ್ತೂ ತಮ್ಮ ಮಗನನ್ನು ಬಿಟ್ಟುಕೊಟ್ಟಿಲ್ಲ. ಆತನಿಗೆ ಇನ್ನಿಲ್ಲದ ಪ್ರೀತಿ ಮತ್ತು ಕಾಳಜಿಯನ್ನು ತೋರಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿತು.

ಏನಿದು ಪ್ರಕರಣ?:

2013ರಲ್ಲಿ ಗಾಜಿಯಾಬಾದ್‌ನ ಹರೀಶ್‌ ರಾಣಾ ಪಂಜಾಬ್‌ ವಿವಿಯಲ್ಲಿ ವಿದ್ಯಾರ್ಥಿಯಾಗಿದ್ದರು. ತಾವು ಉಳಿದುಕೊಂಡಿದ್ದ ಪಿಜಿಯ 4ನೇ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಗಿನಿಂದಲೂ (ಕಳೆದ 13 ವರ್ಷದಿಂದ) ಅವರು ಕೋಮಾದಲ್ಲಿದ್ದಾರೆ. ಕೇವಲ ಕೃತಕ ಜೀವನಾಧಾರ ವ್ಯವಸ್ಥೆಯ ಮೂಲಕ ಅವರನ್ನು ಬದುಕಿಸಲಾಗಿದೆ.

ಆದರೆ ಅವರು ಚೇತರಿಸಿಕೊಳ್ಳುವ ಯಾವ ಸಾಧ್ಯತೆಯೂ ಇಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಬಳಿಕ ರಾಣಾ ಕುಟುಂಬಸ್ಥರು ದಯಾಮರಣಕ್ಕೆ ಅವಕಾಶ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಏಮ್ಸ್‌ನ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಕೋರ್ಟ್, ರಾಣಾ ಪರಿಸ್ಥಿತಿ ತೀರಾ ದುಃಖದಾಯಕ ಎಂದಿತ್ತು. ವೈದ್ಯರು ಸಹ ಚಿಕಿತ್ಸೆಯಿಂದ ರಾಣಾ ಅವರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಚಿಕಿತ್ಸೆಯನ್ನು ನಿಲ್ಲಿಸಿ, ಪ್ರಕೃತಿಗೆ ತನ್ನ ಮಾರ್ಗವನ್ನು ತಾನು ತೆಗೆದುಕೊಳ್ಳಲು ಬಿಡಬೇಕು ಎಂದು ಸೂಚಿಸಿದ್ದರು.

2018ರ ತೀರ್ಪಿನ ಹಿನ್ನೆಲೆ:

2018ರಲ್ಲಿ ಸಾಂವಿಧಾನಿಕ ಪೀಠವು ಗೌರವಯುತ ಸಾವಿನ ಹಕ್ಕನ್ನು ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಮೂಲಭೂತ ಹಕ್ಕಾಗಿ ಘೋಷಿಸಿತು. ಮುಂದುವರಿದ ವೈದ್ಯಕೀಯ ನಿರ್ದೇಶನಗಳ (ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್ಸ್) ಮೂಲಕ ಇದನ್ನು ಅನುಷ್ಠಾನಗೊಳಿಸಬಹುದು ಎಂದು ಸೂಚಿಸಿತು. ನಂತರ 2023ರ ಜ.24ರಂದು ಮತ್ತೊಂದು ಸಾಂವಿಧಾನಿಕ ಪೀಠವು ಈ ಮಾರ್ಗಸೂಚಿಗಳನ್ನು ಇನ್ನಷ್ಟು ಸರಳಗೊಳಿಸಿತು. ಇದರಡಿ ಪ್ರಾಥಮಿಕ ಮತ್ತು ದ್ವಿತೀಯ ವೈದ್ಯಕೀಯ ಮಂಡಳಿಗಳ ಅಭಿಪ್ರಾಯವನ್ನು ಕಡ್ಡಾಯಗೊಳಿಸಿತು.

ಕನ್ನಡತಿ ಅರುಣಾ ಶಾನಭಾಗ್‌ ಪ್ರಕರಣ

1973ರಲ್ಲಿ ಕ್ರೂರ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕನ್ನಡತಿ ಅರುಣಾ ಶಾನಭಾಗ್‌ 38 ವರ್ಷಗಳ ಕಾಲ ಮುಂಬೈ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. ಅವರ ಕೃತಕ ಜೀವನಾಧಾರ ವ್ಯವಸ್ಥೆಯನ್ನು ತೆಗೆದುಹಾಕಿ, ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಅವರ ಪಾಲಕರ ವಿರೋಧದ ಕಾರಣ ಕೋರ್ಟ್ ತಿರಸ್ಕರಿಸಿತ್ತು. ಆದರೆ ಇಂಥ ಸ್ಥಿತಿಯಲ್ಲಿರುವ ರೋಗಿಗಳಿಗೆ ಕುಟುಂಬ ಮತ್ತು ವೈದ್ಯರ ಅನುಮತಿ ಮೇರೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ದಯಾಮರಣ ನೀಡಬಹುದು ಎಂದು ಆದೇಶ ನೀಡಿತ್ತು. ಇದು ಭಾರತದಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.

ದಯಾಮರಣ ಪ್ರಕ್ರಿಯೆ ಹೇಗೆ?

ದಯಾಮರಣದಲ್ಲಿ 2 ವಿಧಗಳಿವೆ. ಒಂದು, ಪ್ಯಾಸಿವ್ ಯೂಥನೇಶಿಯಾ. ಅಂದರೆ ಸಾಯುವ ಸ್ಥಿತಿಯಲ್ಲಿರುವ ಅಥವಾ ಪ್ರಜ್ಞೆಯಿಲ್ಲದೆ ಜೀವಚ್ಛವವಾಗಿರುವ ರೋಗಿಯ ಜೀವನಾಧಾರಕ್ಕೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸುವುದು. ಉದಾಹರಣೆಗೆ ವೆಂಟಿಲೇಟರ್, ಫೀಡಿಂಗ್ ಟ್ಯೂಬ್, ಆಂಟಿಬಯಾಟಿಕ್ಸ್ ಅಥವಾ ಕೃತಕ ಪೋಷಣೆ. ಇದರಿಂದ ರೋಗಿ ಸಹಜವಾಗಿ ಸಾಯಲು ಅವಕಾಶ ನೀಡಿದಂತಾಗುತ್ತದೆ.

2ನೆಯದು ಆ್ಯಕ್ಟಿವ್‌ ಯೂಥನೇಶಿಯಾ (ನೇರ ದಯಾಮರಣ). ಇದರನ್ವಯ ಲೆಥಲ್ ಇಂಜೆಕ್ಷನ್ (ವಿಷದ ಇಂಜೆಕ್ಷನ್‌) ಮೂಲಕ ನೇರವಾಗಿ ಸಾವನ್ನು ತರಲಾಗುತ್ತದೆ. ರಾಣಾ ಪ್ರಕರಣದಲ್ಲಿ ಮೊದಲ ಮಾರ್ಗವನ್ನು ಅನುಸರಿಸಲಾಗುತ್ತದೆ.

 ಆ್ಯಂಬುಲೆನ್ಸ್‌ ಗುಂಡಿ ಹಾರಿದ ಬಳಿಕ ಮಹಿಳೆಗೆ ಪ್ರಜ್ಞೆ ಬಂತು - ಬ್ರೇನ್‌ ಡೆಡ್‌ ಆದವಳು ಕೋಮಾದಿಂದ ಔಟ್‌

ಪಿಲಿಭಿತ್‌: ಬ್ರೇನ್‌ ಡೆಡ್‌ ಆಗಿದ್ದ ಮಹಿಳೆಯೊಬ್ಬರನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಆ್ಯಂಬುಲೆನ್ಸ್‌ ಗುಂಡಿಯೊಂದಕ್ಕೆ ಬಿದ್ದು ಭಾರೀ ಪ್ರಮಾಣದಲ್ಲಿ ಅಲುಗಾಡಿದ ಬಳಿಕ ಆಕೆಗೆ ಪ್ರಜ್ಞೆ ಮರಳಿದ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ಹಫೀಜ್‌ಗಂಜ್‌ನಲ್ಲಿ ನಡೆದಿದೆ. ಹೀಗಾಗಿ ವಿನೀತಾ ಶುಕ್ಲಾ ಎಂಬಾಕೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಮಿಳ್ನಾಡಲ್ಲಿ ದಾಖಲೆಯ ಶೇ.85ರಷ್ಟು ಮತದಾನ
ಗೂಂಡಾಗಿರಿ ನಡುವೆ ಬಂಗಾಳದಲ್ಲಿ ದಾಖಲೆ ಶೇ.90 ಮತ