ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಅರವಿಂದ್‌ ಶ್ರೀವಾತ್ಸವ

KannadaprabhaNewsNetwork |  
Published : Apr 19, 2025, 12:36 AM ISTUpdated : Apr 19, 2025, 06:18 AM IST
Parliament building. (File Photo/ANI)

ಸಾರಾಂಶ

ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ, ಕರ್ನಾಟಕ ಕೇಡರ್‌ನ ಅರವಿಂದ್‌ ಶ್ರೀವಾತ್ಸವ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ನವದೆಹಲಿ: ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ, ಕರ್ನಾಟಕ ಕೇಡರ್‌ನ ಅರವಿಂದ್‌ ಶ್ರೀವಾತ್ಸವ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಶ್ರೀವಾತ್ಸವ 1994ರ ಕರ್ನಾಟಕ ಕೇಡರ್‌ ಅಧಿಕಾರಿಯಾಗಿದ್ದು, ಈ ಹಿಂದೆ ಮೆಟ್ರೋ, ಏರ್‌ ಇಂಡಿಯಾ ಸೇರಿ ಹಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ.

₹2,000ಕ್ಕಿಂತ ಹೆಚ್ಚಿನ ಯುಪಿಐಗೆ ಜಿಎಸ್‌ಟಿ ಪ್ರಸ್ತಾಪ ಇಲ್ಲ: ಕೇಂದ್ರ

ನವದೆಹಲಿ: ‘ಯುಪಿಐ ಮೂಲಕ ನಡೆಯುವ 2000 ರು.ಗಿಂತ ಅಧಿಕ ಮೊತ್ತದ ವ್ಯವಹಾರಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು’ ಎಂಬ ವರದಿಗಳನ್ನು ತಳ್ಳಿಹಾಕಿರುವ ಕೇಂದ್ರ ಹಣಕಾಸು ಸಚಿವಾಲಯ ‘ಇದು ಸುಳ್ಳು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ‘ವ್ಯಾಪಾರಿ ರಿಯಾಯಿತಿ ದರ(ಎಂಡಿಆರ್‌) ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತಿದೆ. 2020ರ ಜನವರಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ ವ್ಯಕ್ತಿ ಹಾಗೂ ವ್ಯಾಪಾರಿಗಳ ನಡುವೆ ನಡೆಯುವ ವಿನಿಮಯದ ಮೇಲಿನ ತೆರಿಗೆಯನ್ನು ತೆಗೆದುಹಾಕಿತ್ತು’ ಎಂದು ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. 2019-20 ಅವಧಿಯಲ್ಲಿ ಯುಪಿಐ ಮೂಲಕ 21.3 ಲಕ್ಷ ಕೋಟಿ ರು. ವ್ಯವಹಾರ ನಡೆದಿದ್ದು, 2025ರ ಮಾರ್ಚ್‌ ವೇಳೆಗೆ ಇದು 260.56 ಲಕ್ಷ ಕೋಟಿಗೆ ತಲುಪಿದೆ.

ಮಾರ್ಚ್‌ನಲ್ಲಿ ₹38168 ಕೋಟಿಯ ಚಿನ್ನ ಆಮದು: ಶೇ.192ರಷ್ಟು ಏರಿಕೆ

ನವದೆಹಲಿ: ಚಿನ್ನದ ದರ ಗಗನಕ್ಕೇರಿದರೂ ಭಾರತದಲ್ಲಿ ಹಳದಿ ಲೋಹದ ವ್ಯಾಮೋಹ ಕಡಿಮೆಯಾಗಿಲ್ಲ. ಮಾರ್ಚ್‌ ತಿಂಗಳಲ್ಲಿ 38,168 ಕೋಟಿ ರು.ನಷ್ಟು ಚಿನ್ನವನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಂಡಿದೆ. ಇದು ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಶೇ.192.13ರಷ್ಟು ಹೆಚ್ಚಾಗಿದೆ.2024-25ನೇ ಸಾಲಿನ ಏಪ್ರಿಲ್‌-ಮಾರ್ಚ್‌ ನಡುವೆ 4.9 ಲಕ್ಷ ಕೋಟಿಯಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಇದು 2023-24ರ ಇದೇ ಅವಧಿಗೆ ಹೋಲಿಸಿದರೆ (3.8 ಲಕ್ಷ ಕೋಟಿ) ಶೇ.27.27ರಷ್ಟು ಹೆಚ್ಚಾಗಿದೆ. ಆದರೆ ಆಮದು ಪ್ರಮಾಣಕ್ಕೆ ಹೋಲಿಸಿದರೆ ಕಳೆದ ವರ್ಷದ ಅಲ್ಪ ಇಳಿಕೆಯಾಗಿದೆ. 2023-24ರಲ್ಲಿ 795 ಟನ್‌ ಚಿನ್ನ ಆಮದು ಮಾಡಿಕೊಂಡಿದ್ದರೆ, 2024-25ರಲ್ಲಿ 757 ಟನ್‌ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.

ಅಮೆರಿಕದ ತೆರಿಗೆ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮೂಡಿದ್ದು, ಇದರಿಂದ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಾಗಿ ಕಾಣುತ್ತಿದೆ. ಈ ಕಾರಣ ವಿದೇಶದಿಂದ ಚಿನ್ನದ ಆಮದು ಹೆಚ್ಚಾಗುತ್ತಿದೆ.

ವಿಮಾನ ಹೈಜಾಕ್‌ಗೆ ಯತ್ನ ಮಾಡಿದವ ಸಂಚರಿಸುವ ಫ್ಲೈಟಲ್ಲೇ ಗುಂಡಿಗೆ ಬಲಿ

ಮೆಕ್ಸಿಕೋ: ಮಧ್ಯ ಅಮೆರಿಕದ ರಾಷ್ಟ್ರವಾಗಿರುವ ಬಲಿಜ್‌ನಲ್ಲಿ ಸಿನಿಮೀಯ ರೀತಿಯಲ್ಲಿ ವಿಮಾನ ಹೈಜಾಕ್‌ ಘಟನೆಯೊಂದು ನಡೆದಿದೆ. ಮೆಕ್ಸಿಕೋ ಗಡಿಯ ಸಮೀಪವಿರುವ ಕೊರೊಜಲ್‌ನಿಂದ ಸ್ಯಾನ್‌ ಪೆಡ್ರೊಗೆ ತೆರಳುತ್ತಿದ್ದ ಸಣ್ಣ ವಿಮಾನವನ್ನು ಹೈಜಾಕ್‌ ಮಾಡಿದ ವ್ಯಕ್ತಿಯೊಬ್ಬ ಅದನ್ನು ಅಮೆರಿಕದ ಕಡೆ ತಿರುಗಿಸಿವಂತೆ ಆಗ್ರಹಿಸಿ, ಓರ್ವ ಸಿಬ್ಬಂದಿ ಸೇರಿ 2 ಪ್ರಯಾಣಿಕರಿಗೆ ಇರಿದಿದ್ದಾನೆ. ಬಳಿಕ ಇರಿತಕ್ಕೊಳಗಾದ ಪ್ರಯಾಣಿಕನಿಂದಲೇ ಗುಂಡೇಟಿಗೆ ಬಲಿಯಾಗಿದ್ದಾನೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲೇಡಿವಿಲ್ಲೆ ಎಂಬಲ್ಲಿ ಇಳಿಸಲಾಗಿದೆ. ಹೈಜಾಕ್‌ ಮಾಡಿದವನನ್ನು ಅಕಿನ್ಯೆಲಾ ಟೇಲರ್ ಎಂದು ಗುರುತಿಸಲಾಗಿದ್ದು, ಆತ ಅಮೆರಿಕದ ಸೇನೆಯಲ್ಲಿದ್ದವ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ