3 ದಿನದಲ್ಲಿ 19 ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ

KannadaprabhaNewsNetwork |  
Published : Oct 17, 2024, 12:03 AM IST
ಇಂಡಿಗೋ | Kannada Prabha

ಸಾರಾಂಶ

ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕುವ ಪ್ರಕರಣಗಳು ಮುಂದುವರೆದಿದ್ದು, ಸತತ ಮೂರನೇ ದಿನವಾದ ಬುಧವಾರ ಮತ್ತೆ 7 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ ರವಾನಿಸಲಾಗಿದೆ.

ಮುಂಬೈ: ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕುವ ಪ್ರಕರಣಗಳು ಮುಂದುವರೆದಿದ್ದು, ಸತತ ಮೂರನೇ ದಿನವಾದ ಬುಧವಾರ ಮತ್ತೆ 7 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ ರವಾನಿಸಲಾಗಿದೆ. ಇದರೊಂದಿಗೆ ಕೇವಲ 3 ದಿನಗಳ ಅವಧಿಯಲ್ಲಿ ಒಟ್ಟು 19 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ ಮಾಡಿದಂತೆ ಆಗಿದೆ. ಎಲ್ಲಾ ಬೆದರಿಕೆಯನ್ನೂ ಸಾಮಾಜಿಕ ಜಾಲತಾಣಗಳ ಮೂಲಕವೇ ಮೂಲಕವೇ ಮಾಡಲಾಗಿತ್ತು ಎಂಬುದು ಗಮನಾರ್ಹ.

ಅದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಸಭೆ ನಡೆಸಿ ಬೆಳವಣಿಗೆ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.

ಮತ್ತೆ 7 ಕರೆ:

ಬುಧವಾರ ಇಂಡಿಗೋದ 4, ಸ್ಪೈಸ್‌ಜೆಟ್‌ನ 2, ಅಕಾಸದ 1 ವಿಮಾನಕ್ಕೆ ಬೆದರಿಕೆ ಹಾಕಲಾಗಿದೆ. ಕರೆ ಬಂದ ಇಂಡಿಗೋ ವಿಮಾನಗಳು ರಿಯಾದ್‌- ಮುಂಬೈ, ಮುಂಬೈ-ಸಿಂಗಾಪುರ, ಚೆನ್ನೈ-ಲಖನೌ, ದೆಹಲಿ- ಮುಂಬೈ ನಡುವೆ ಸಂಚರಿಸುತ್ತಿದ್ದವು.

ಇನ್ನು ದೆಹಲಿಯಿಂದ ಬೆಂಗಳೂರಿಗೆ 7 ಸಿಬ್ಬಂದಿ ಸೇರಿದಂತೆ 180 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಆಕಾಸಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಕೂಡಲೇ ಅದು ಸಂಚಾರ ರದ್ದುಗೊಳಿಸಿ ದೆಹಲಿಗೆ ಮರಳಿದೆ. ಮತ್ತೊಂದೆಡೆ ಲೇಹ್‌- ದೆಹಲಿ ಮತ್ತು ದರ್ಬಾಂಘ - ಮುಂಬೈ ನಡುವಿನ ಸ್ಪೈಸ್‌ಜೆಟ್‌ ವಿಮಾನಕ್ಕೂ ಬೆದರಿಕೆ ಸಂದೇಶ ರವಾನಿಸಲಾಗಿತ್ತು.

ಹೀಗಾಗಿ ಎಲ್ಲಾ ವಿಮಾನಗಳು ಸಂಚಾರ ರದ್ದುಪಡಿಸಿ ಸ್ವಸ್ಥಾನಕ್ಕೆ ಮರಳಿದವು. ತಪಾಸಣೆ ಬಳಿಕ ಎಲ್ಲವೂ ಹುಸಿ ಕರೆ ಎಂದು ಖಚಿತಪಟ್ಟಿದೆ.

==

ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ನವದೆಹಲಿ: ದೆಹಲಿಯಿಂದ ಹೊರಟ 7 ವಿಮಾನಗಳಿಗೆ ಹುಸಿ ಬಾಂಬ್‌ ಕರೆ ಬಂದಿರುವ ಬಗ್ಗೆ ದೆಹಲಿಯ ವಿಮಾನ ನಿಲ್ದಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಬೆದರಿಕೆ ಸಂದೇಶ ಬಂದಿರುವ ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ನಡೆಸುತ್ತಿರುವವರಿಗೆ ಬಲೆ ಬೀಸಲಾಗಿದೆ. ಶೀಘ್ರವಾಗಿ ಅವರನ್ನು ಹಿಡಿಯಲಾಗುತ್ತದೆ. ಎಫ್‌ಐಆರ್‌ಗಳ ಸಂಖ್ಯೆ ಇನ್ನು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

==

ಸ್ನೇಹಿತನ ವಿರುದ್ಧ ದ್ವೇಷಕ್ಕೆ ನಕಲಿ ಖಾತೆ ಸೃಷ್ಟಿಸಿ ಬಾಂಬ್‌ ಬೆದರಿಕೆ ಹಾಕಿದ್ದ ಬಾಲಕ ವಶರಾಜನಂದಗಾಂವ್: ತನ್ನ ಸ್ನೇಹಿತನ ಹೆಸರಿನಲ್ಲಿ ನಕಲಿ ಎಕ್ಸ್‌ ತೆರೆದು ನಾಲ್ಕು ವಿಮಾನಗಳಿಗೆ ಬಾಂಬ್ ಬೆದರಿಕೆಗಳನ್ನು ಕಳುಹಿಸಿದ್ದ ಛತ್ತೀಸ್‌ಗಢದ ರಾಜನಂದಗಾಂವ್‌ನ ಬಾಲಕನನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಹಣದ ವಿಚಾರವಾಗಿ ತನ್ನ ಸ್ನೇಹಿತನೊಂದಿಗೆ ಜಗಳವಾಡಿದ್ದ. ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ಹೆಸರಲ್ಲಿ ಎಕ್ಸ್‌ನಲ್ಲಿ ನಕಲಿ ಖಾತೆ ತೆರೆದು ಕಳೆದ ಸೋಮವಾರ ಮುಂಬೈನಿಂದ ನ್ಯೂಯಾರ್ಕ್‌ಗೆ ಹೋಗಬೇಕಿದ್ದ ಏರ್‌ ಇಂಡಿಯಾ ವಿಮಾನ, ಮಸ್ಕತ್‌ ಮತ್ತು ಜೆಡ್ಡಾಗೆ ಹೋಗಬೇಕಿದ್ದ ಇಂಡಿಗೋನ ಎರಡು ವಿಮಾನಗಳು ಸೇರಿದಂತೆ 4 ವಿಮಾನಗಳಲ್ಲಿ ಬಾಂಬ್‌ ಇರುವ ಬಗ್ಗೆ ಪೋಸ್ಟ್‌ ಮಾಡಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ