ನವದೆಹಲಿ: ಸ್ವಚ್ಛ ಇಂಧನ ಕನಸಿನ ಸಾಕಾರಕ್ಕೆ ಶ್ರಮಿಸುತ್ತಿರುವ ಭಾರತವು ಕಳೆದ 10 ವರ್ಷಗಳಲ್ಲಿ ಸೌರವಿದ್ಯುತ್ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ದೇಶವಿಂದು 100 ಗಿ.ವ್ಯಾ.ನಷ್ಟು ಸೌರಶಕ್ತಿ ಉತ್ಪಾದಿಸುವ ಮೂಲಸೌಕರ್ಯ ಸೃಷ್ಟಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ದೇಶದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆತ್ಮನಿರ್ಭರ ಭಾರತದ ಯೋಜನೆ ಅಡಿಯಲ್ಲಿ ಶುದ್ಧ ಇಂಧನ ಅಳವಡಿಕೆಯ ಜಾಗತಿಕ ಗುರಿ ಸಾಧನೆಯತ್ತ ಸಾಗುತ್ತಿರುವ ಪರಿಯನ್ನು ವಿವರಿಸಿರುವ ಜೋಶಿ, ‘ಭಾರತವು ಈಗ 100 ಗಿ.ವ್ಯಾ.ನಷ್ಟು ಸೌರವಿದ್ಯುತ್ ಸಾಮರ್ಥ್ಯದ ಪಿವಿ ಮಾಡ್ಯೂಲ್ ಉತ್ಪಾದಿಸುವ ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿದೆ. 2014ರಲ್ಲಿ 2.3 ಗಿ.ವ್ಯಾ.ನಷ್ಟು ಸೌರಶಕ್ತಿ ಉತ್ಪಾದಿಸುವ ಸಾಮರ್ಥ್ಯದ ಫಲಕಗಳನ್ನು ಮಾತ್ರ ಉತ್ಪಾದಿಸಲಾಗುತ್ತಿತ್ತು. ಈ ಸಾಧನೆಯು ಆತ್ಮನಿರ್ಭರ ಭಾರತದ ಕಡೆಗೆ ನಮ್ಮ ಹಾದಿಯನ್ನು ಬಲಪಡಿಸುತ್ತದೆ ಮತ್ತು 2030 ರ ವೇಳೆಗೆ 500 ಗಿ.ವ್ಯಾ. ಪಳೆಯುಳಿಕೆಯೇತರ ಸಾಮರ್ಥ್ಯದ ಗುರಿಯನ್ನು ತಲುಪುತ್ತದೆ’ ಎಂದು ಹರ್ಷಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ಸ್ವಾವಲಂಬನೆಯತ್ತ ಮತ್ತೊಂದು ಮೈಲಿಗಲ್ಲು. ಭಾರತದ ಉತ್ಪಾದನಾ ಸಾಮರ್ಥ್ಯದ ಯಶಸ್ಸನ್ನು ಮತ್ತು ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ನಮ್ಮ ಪ್ರಯತ್ನಗಳನ್ನು ಈ ಸಾಧನೆ ಚಿತ್ರಿಸುತ್ತದೆ’ ಎಂದು ಹೇಳಿದ್ದಾರೆ.