ಭಾರತ-ಚೀನಾ ಮತ್ತೆ ಭಾಯಿ ಭಾಯಿ

Published : Sep 13, 2026, 05:03 AM IST
Xi Jinping India Visit China President to Visit India

ಸಾರಾಂಶ

ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶಸ್ವಿಯಾಗಿದೆ. ಗಲ್ವಾನ್ ಸಂಘರ್ಷದ ನಂತರ 7 ವರ್ಷಗಳಿಂದ ಇದ್ದ ಮುನಿಸು ಶಮನವಾದಂತಾಗಿದೆ

ನವದೆಹಲಿ : ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶಸ್ವಿಯಾಗಿದೆ. ಗಲ್ವಾನ್ ಸಂಘರ್ಷದ ನಂತರ 7 ವರ್ಷಗಳಿಂದ ಇದ್ದ ಮುನಿಸು ಶಮನವಾದಂತಾಗಿದ್ದು, ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದ್ದಾರೆ.

ಸುದೀರ್ಘ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿರುವ ಕ್ಸಿ ಜತೆಗಿನ ಸಭೆಯಲ್ಲಿ ಮೋದಿ ಅವರು ವ್ಯಾಪಾರ, ಹೂಡಿಕೆ ವಿಸ್ತರಣೆ ಹಾಗೂ ಶಾಂತಿ ಸ್ಥಾಪನೆಯ ಕುರಿತು ವಿಸ್ತೃತವಾಗಿ ಚರ್ಚಿಸಿದರು. ‘ಬಾಂಧವ್ಯ ವೃದ್ಧಿಗೆ ಗಡಿಯಲ್ಲಿ ಶಾಂತಿ ಅತ್ಯಗತ್ಯ’ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು.

ಸೌಹಾರ್ದತೆಯ ಮಂತ್ರ:

ಸೌಹಾರ್ದ ವಾತಾವರಣದಲ್ಲಿ ಆರಂಭವಾದ ಸಭೆಯಲ್ಲಿ ಮೊದಲಿಗೆ ‘ನಿಮ್ಮನ್ನು ಭಾರತಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇನೆ’ ಎಂದು ಮೋದಿ ಅಭಿನಂದಿಸಿದರು. ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಪ್ರಗತಿಗೆ ಗಡಿ ಪ್ರದೇಶಗಳಲ್ಲಿ ಸಂಪೂರ್ಣ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಮೂಲಭೂತ ಅಗತ್ಯ. ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರತಿಪಾದಿಸಿದರು. ಗಡಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು ಹಾಗೂ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎಂಬ ಬದ್ಧತೆ ವ್ಯಕ್ತಪಡಿಸಿದರು.

2020ರಲ್ಲಿ ಗಲ್ವಾನ್‌ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದರೂ ಅದರ ಹಿಡಿತಕ್ಕೆ ಚೀನಾ ಯತ್ನಿಸುತ್ತಿರುವುದು ಸೇರಿದಂತೆ ಇತರ ಗಡಿ ಸಮಸ್ಯೆಗಳು ತಿಕ್ಕಾಟಕ್ಕೆ ಕಾರಣವಾಗಿದ್ದವು. ಅಲ್ಲದೆ, 2019ರ ನಂತರ ಕ್ಸಿ ಭಾರತಕ್ಕೆ ಭೇಟಿಯನ್ನೂ ನೀಡಿರಲಿಲ್ಲ. ಈ ಎಲ್ಲ ವಿದ್ಯಮಾನಗಳ ಬಳಿಕ ನಡೆದಿರುವ ಈ ಸಭೆ ಉಭಯ ದೇಶಗಳ ಸಂಬಂಧ ವರ್ಧನೆ ಕುರಿತು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

- ಗಡಿ ಒಪ್ಪಂದ ಪಾಲನೆಗೆ ಸಮ್ಮತಿ । ಭಿನ್ನಾಭಿಪ್ರಾಯ ವಿವಾದಕ್ಕೆ ತಿರುಗದಂತೆ ಪಣ

- ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆ ವೇಳೆ ಭಾರತದ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಮಾತುಕತೆ

- ಈ ವೇಳೆ, ಹದಗೆಟ್ಟಿದ್ದ ಸಂಬಂಧ ಪುನಃ ಸರಿದಾರಿಗೆ ತರುವ ಹಾದಿಯಲ್ಲಿ ಸಾಗಲು ಉಭಯ ನಾಯಕರ ಸಮ್ಮತಿ

- ಗಡಿ ನಿರ್ವಹಣೆಗೆ ಸಂಬಂಧಿತ ಅಸ್ತಿತ್ವದಲ್ಲಿರುವ ಒಪ್ಪಂದ ಕಟ್ಟುನಿಟ್ಟಾಗಿ ಪಾಲಿಸಬೇಕು ಎರಡೂ ದೇಶಗಳ ನಿರ್ಧಾರ

- ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ವಿವಾದ ಸ್ವರೂಪ ಪಡೆಯಂತೆ ನೋಡಿಕೊಳ್ಳಲು ಪರಸ್ಪರ ಸಮ್ಮತಿ

- ಇದರೊಂದಿಗೆ 2009ರ ಗಲ್ವಾನ್‌ ಸಂಘರ್ಷದ ಬಳಿಕ ಹದಗೆಟ್ಟಿದ್ದ ಸಂಬಂಧ ಸುಧಾರಣೆಯ ಬಗ್ಗೆ ಆಶಾಭಾವನೆ

- ಮೋದಿ- ಕ್ಸಿ ಮಾತುಕತೆ ವೇಳೆ ವ್ಯಾಪಾರ, ಹೂಡಿಕೆ ವಿಸ್ತರಣೆ ಹಾಗೂ ಶಾಂತಿ ಸ್ಥಾಪನೆಯ ಕುರಿತು ವಿಸ್ತೃತ ಚರ್ಚೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುದ್ಧದ ವಿರುದ್ಧ ಬ್ರಿಕ್ಸ್‌ ಸಮರ
2 ದಿನಗಳ ಬ್ರಿಕ್ಸ್‌ ಶೃಂಗಸಭೆಗೆ ಇಂದು ಚಾಲನೆ