ನವದೆಹಲಿ: ತಿಹಾರ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಹದೆಗೆಡುತ್ತಿದೆ ಎಂಬ ವಿಚಾರವನ್ನಿಟ್ಟುಕೊಂಡು ಇಂಡಿಯಾ ಕೂಟದ ನಾಯಕರು ಜುಲೈ 30ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆಮ್ ಆದ್ಮಿ ಪಕ್ಷ, ‘ಕೇಜ್ರಿವಾಲ್ ಅವರ ಕ್ಷಿಣಿಸುತ್ತಿರುವ ಆರೋಗ್ಯದ ವಿಚಾರವಾಗಿ ಧ್ವನಿ ಎತ್ತಲು, ಇಂಡಿಯಾ ಕೂಟ ಜಂತರ್ ಮಂತರ್‌ನಲ್ಲಿ ಜುಲೈ 30ರಂದು ದೊಡ್ಡ ರ್‍ಯಾಲಿಯನ್ನು ಹಮ್ಮಿಕೊಂಡಿದೆ’ ಎಂದಿದೆ.
ಜೈಲಿನಲ್ಲಿ ದೆಹಲಿ ಸಿಎಂರನ್ನು ಕೊಲ್ಲಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಆಮ್‌ಆದ್ಮಿ ಪಕ್ಷ ಆರೋಪಿಸಿದೆ. ಅಲ್ಲದೇ ಜುಲೈ 3 ರಿಂದ 7 ರವರೆಗಿನ ಅವರ ವೈದ್ಯಕೀಯ ವರದಿಯಲ್ಲಿ ಸಕ್ಕರೆ ಪ್ರಮಾಣ 26 ಸಲ ಇಳಿಕೆಯಾಗಿರುವ ಉಲ್ಲೇಖವಿದೆ ಎಂದು ಆಪ್ ಹೇಳಿದೆ. ಜೊತೆಗೆ ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ದೆಹಲಿಯ ಲೆಫ್ಟಿನೆಂಟ್ ಗರ್ವನರ್ ವಿ.ಕೆ. ಸಕ್ಸೇನಾ ಕೇಜ್ರೀವಾಲ್ ಜೀವನದಲ್ಲಿ ಆಟವಾಡುತ್ತಿದ್ದಾರೆ’ ಎಂದು ಇಂಡಿಯಾ ಕೂಟ ಆರೋಪಿಸಿದೆ.
ಟ್ರಂಪ್ ಮಣಿಸಲು ಕಮಲಾಗೆ ಸಾಧ್ಯವಿಲ್ಲ: ಒಬಾಮಾ ಅಭಿಮತ?
ವಾಷಿಂಗ್ಟನ್: ಡೆಮಾಕ್ರೆಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರನ್ನು ಜೋ ಬೈಡೆನ್ ಪ್ರಸ್ತಾಪಿಸಿದರೂ ಅದನ್ನು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಬೆಂಬಲಿಸದೆ ಇರಲು ಕಾರಣ ಏನು ಎಂಬುದರ ಕುರಿತು ಅಮೆರಿಕದ ನ್ಯೂಯಾರ್ಕ್ ಪೋಸ್ಟ್ ವರದಿಯೊಂದನ್ನು ಪ್ರಕಟಿಸಿದೆ. ಅದರನ್ವಯ, ಟ್ರಂಪ್‌ರನ್ನು ಸೋಲಿಸುವ ಸಾಮರ್ಥ್ಯ ಕಮಲಾಗೆ ಇಲ್ಲ ಎಂಬುದು ಒಬಾಮಾಗೆ ಅರಿವಾಗಿದೆ. ಈ ಕಾರಣಕ್ಕಾಗಿಯೇ ಅವರ ಹೆಸರನ್ನು ಅನುಮೋದಿಸಲು ಒಬಾಮಾ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಬೈಡೆನ್ ಕುಟುಂಬ ಮೂಲಗಳು ತಿಳಿಸಿವೆ ಎಂದು ಮೂಲಗಳನ್ನು ಪತ್ರಿಕೆ ವರದಿ ಮಾಡಿದೆ.
ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಯುಪಿ ಮಾಜಿ ಶಾಸಕಗೆ ಕ್ಷಮಾದಾನ
ಪ್ರಯಾಗ್‌ರಾಜ್: ಸಮಾಜವಾದಿ ಪಕ್ಷದ ಶಾಸಕ ಜವಾಹರ್ ಯಾದವ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಉತ್ತರ ಪ್ರದೇಶದ ಬಿಜೆಪಿಯ ಮಾಜಿ ಶಾಸಕ ಉದಯಭಾನ್ ಕರ್ವಾರಿಯಾರಿಗೆ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಕ್ಷಮಾದಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಲ್ಲಿ ಸನ್ನಡತೆ ತೋರಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಮಾಡಿದ ಶಿಫಾರಸು ಅನ್ವಯ ರಾಜ್ಯಪಾಲರು ತಮ್ಮ ಕಾನೂನುಬದ್ಧ ಅಧಿಕಾರ ಬಳಸಿ ಕಳೆದ ವಾರ ಕ್ಷಮಾದಾನ ನೀಡಿದ್ದರು.