ಬೆಂಗ್ಳೂರಲ್ಲಿ ಭಾರತ ಮಹಾಪತನ : ನ್ಯೂಜಿಲೆಂಡ್‌ ವಿರುದ್ಧ ಕೇವಲ 46ಕ್ಕೆ ಪ್ಯಾಕಪ್‌ !

Published : Oct 18, 2024, 08:11 AM ISTUpdated : Oct 18, 2024, 08:12 AM IST
 India

ಸಾರಾಂಶ

ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್‌ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್‌ ಆಗಿದ್ದಾರೆ.

ಬೆಂಗಳೂರು : ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್‌ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್‌ ಆಗಿದ್ದಾರೆ. ಎರಡು ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನ ಮಜಾ ಅನುಭವಿಸಲು ಬೆಂಗಳೂರಿನ ಕ್ರೀಡಾಂಗಣಕ್ಕೆ ಆಗಮಿಸಿದ್ದ ಪ್ರೇಕ್ಷಕರು ಮಹಾಪತನವೊಂದಕ್ಕೆ ಸಾಕ್ಷಿಯಾಗಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತೀಯ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದ್ದು, ಕೇವಲ 46 ರನ್‌ಗ ಗಂಟುಮೂಟೆ ಕಟ್ಟಿದ್ದಾರೆ. ಈ ಮೂಲಕ ತನ್ನ ಟೆಸ್ಟ್‌ ಇತಿಹಾಸದಲ್ಲೇ ತವರಿನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾದ ಅಪಖ್ಯಾತಿಗೆ ಭಾರತ ತಂಡ ತುತ್ತಾಗಿದೆ.

ರೋಹಿತ್‌ ಶರ್ಮಾ ಬಳಗದ ಹೀನಾಯ ಪ್ರದರ್ಶನ ಬಳಿಕ ನ್ಯೂಜಿಲೆಂಡ್‌ ಅತ್ಯಾಕರ್ಷಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ಆತಿಥೇಯ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ ಕಿವೀಸ್‌ ಪಡೆ 3 ವಿಕೆಟ್‌ಗೆ 180 ರನ್‌ ಗಳಿಸಿದ್ದು, 134 ರನ್‌ ಮುನ್ನಡೆ ಪಡೆದಿದೆ.

ಪೆವಿಲಿಯನ್‌ ಪರೇಡ್‌: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ರೋಹಿತ್‌ರ ನಿರ್ಧಾರ ತಪ್ಪಾಗಿತ್ತು ಎಂದು ತಿಳಿದುಕೊಳ್ಳಲು ಭಾರತಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಆರಂಭದಲ್ಲೇ ಸ್ವಿಂಗ್‌ ಹಾಗೂ ವೇಗದ ಮೂಲಕ ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಕಿವೀಸ್‌ ವೇಗಿಗಳು, 7ನೇ ಓವರ್‌ನಲ್ಲಿ ಮೊದಲ ಯಶಸ್ಸು ಕಂಡಿತು. 2 ರನ್‌ ಗಳಿಸಿದ್ದ ರೋಹಿತ್‌, ಸೌಥಿ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. ಆ ಬಳಿಕ ನಡೆದಿದ್ದು ಪೆವಿಲಿಯನ್‌ ಪರೇಡ್‌. ಸೌಥಿ ಆರಂಭಿಸಿದ ವಿಕೆಟ್‌ ಬೇಟೆಯನ್ನು ಬಳಿಕ ಮ್ಯಾಟ್‌ ಹೆನ್ರಿ ಹಾಗೂ ವಿಲಿಯಮ್ ರೂರ್ಕೆ ಮುಂದುವರಿಸಿದರು.

ಯಶಸ್ವಿ ಜೈಸ್ವಾಲ್‌ ಹಾಗೂ ರಿಷಭ್‌ ಪಂತ್‌ ಹೊರತುಪಡಿಸಿ ಇತರೆಲ್ಲಾ ಬ್ಯಾಟರ್‌ಗಳು ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ ಸೇರಿದರು. ವಿರಾಟ್‌ ಕೊಹ್ಲಿ, ಸರ್ಫರಾಜ್‌ ಖಾನ್‌, ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ ಹಾಗೂ ಅಶ್ವಿನ್‌ ರನ್‌ ಖಾತೆ ತೆರೆಯಲೂ ವಿಫಲರಾದರು. ಜೈಸ್ವಾಲ್‌(63 ಎಸೆತಗಳಲ್ಲಿ 13), ರಿಷಭ್‌(49 ಎಸೆತಗಳಲ್ಲಿ 20) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ದಾಟಲಿಲ್ಲ. ಕೇವಲ 4 ಬೌಂಡರಿ ಗಳಿಸಿದ್ದು ತಂಡದ ಬ್ಯಾಟಿಂಗ್‌ ವೈಫಲ್ಯಕ್ಕೆ ಹಿಡಿದ ಕೈ ಗನ್ನಡಿ. ಹೆನ್ರಿ 5, ರೂರ್ಕೆ 4 ವಿಕೆಟ್‌ ಕಿತ್ತರು. ಎಲ್ಲಾ 10 ವಿಕೆಟ್‌ ವೇಗಿಗಳ ಪಾಲಾಯಿತು.

 ಕ್ಲಾಸಿಕಲ್‌ ಕಾನ್‌ವೇ: ಕಿವೀಸ್‌ ವೇಗಿಗಳಂತೆಯೇ ಭಾರತೀಯ ಬೌಲರ್‌ಗಳು ಪರಾಕ್ರಮ ಮೆರೆಯಲಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಆರಂಭದಲ್ಲೇ ಹುಸಿಯಾಯಿತು. ನಾಯಕ ಟಾಮ್‌ ಲೇಥಮ್‌ ರಕ್ಷಣಾತ್ಮಕ ಆಟವಾಡಿದರೆ, ಡೆವೋನ್‌ ಕಾನ್‌ವೇ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 13ನೇ ಓವರ್‌ನಲ್ಲೇ ಭಾರತವನ್ನು ಹಿಂದಿಕ್ಕಿ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಕಿವೀಸ್‌, ಮೊದಲ ವಿಕೆಟ್‌ ಕಳೆದುಕೊಂಡಿದ್ದು 17ನೇ ಓವರ್‌ನಲ್ಲಿ. ಲೇಥಮ್‌ 15 ರನ್‌ ಗಳಿಸಿದ್ದಾಗ ಕುಲ್ದೀಪ್‌ಗೆ ವಿಕೆಟ್‌ ಒಪ್ಪಿಸಿದರು.

ವಿಲ್ ಯಂಗ್‌ ಕೂಡಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೂ, 33 ರನ್‌ ಗಳಿಸಿದ್ದಾಗ ಅವರು ಔಟಾದರು. ಬೌಂಡರಿ, ಸಿಕ್ಸರ್‌ ಮೂಲಕವೇ ಭಾರತೀಯ ಬೌಲರ್‌ಗಳನ್ನು ಕಾಡಿದ ಕಾನ್‌ವೇ 105 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ನೊಂದಿಗೆ 91 ರನ್‌ ಗಳಿಸಿದ್ದ ಅಶ್ವಿನ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಅಷ್ಟರಲ್ಲಾಗಲೇ ತಂಡ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಸದ್ಯ ರಚಿನ್‌ ರವೀಂದ್ರ(ಔಟಾಗದೆ 22), ಡ್ಯಾರಿಲ್‌ ಮಿಚೆಲ್‌(ಔಟಾಗದೆ 14) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅಶ್ವಿನ್‌, ಜಡೇಜಾ, ಕುಲ್ದೀಪ್‌ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್: ಭಾರತ 31.2 ಓವರ್‌ಗಳಲ್ಲಿ 46/10 (ರಿಷಭ್‌ 20, ಜೈಸ್ವಾಲ್‌ 13, ಹೆನ್ರಿ 5-15, ರೂರ್ಕೆ 4-22), ನ್ಯೂಜಿಲೆಂಡ್‌ 50 ಓವರ್‌ಗಳಲ್ಲಿ 180/3(2ನೇ ದಿನದಂತ್ಯಕ್ಕೆ) (ಕಾನ್‌ವೇ 91, ಯಂಗ್‌ 33, ರಚಿನ್‌ ಔಟಾಗದೆ 22, ಜಡೇಜಾ 1-28, ಅಶ್ವಿನ್‌ 1-46, ಕುಲ್ದೀಪ್‌ 1-57)

ಇಬ್ಬರಷ್ಟೇ ಎರಡಂಕಿ: 5 ಬ್ಯಾಟರ್ಸ್‌ ಡಕೌಟ್‌

ಭಾರತದ 11 ಮಂದಿ ಪೈಕಿ ಜೈಸ್ವಾಲ್‌, ರಿಷಭ್‌ ಪಂತ್‌ ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಐವರು ಡಕೌಟ್‌ ಆದರು. ವಿರಾಟ್‌ ಕೊಹ್ಲಿ, ಸರ್ಫರಾಜ್‌, ರಾಹುಲ್‌, ಜಡೇಜಾ ಹಾಗೂ ಅಶ್ವಿನ್‌ ಸೊನ್ನೆಗೆ ಔಟಾದರು. 5 ರನ್‌ ಇತರೆ ರೂಪದಲ್ಲಿ ತಂಡದ ಖಾತೆ ಸೇರ್ಪಡೆಗೊಂಡಿತು.

ಕೈಕೊಟ್ಟ ಭಾರತ ಲೆಕ್ಕಾಚಾರ: ಬ್ಯಾಟಿಂಗ್‌ ಆಯ್ದು ಎಡವಟ್ಟು!

ಭಾರತದ ಹಿನ್ನಡೆಗೆ ತಂಡ ನಿರ್ಧಾರಗಳೇ ಕಾರಣ ಎಂದರೆ ತಪ್ಪಾಗದು. ಮೋಡ ಕವಿದ ವಾತಾವರಣ, ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಿದ್ದ ಪಿಚ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿ ಎಡವಟ್ಟು ಮಾಡಿಕೊಂಡ ಭಾರತ, ಕಡಿಮೆ ಮೊತ್ತಕ್ಕೆ ಆಲೌಟಾಯಿತು. ಪಂದ್ಯದ ಆರಂಭದಲ್ಲಿ ಬೌಲರ್‌ಗಳು ಹೆಚ್ಚಿನ ನೆರವು ಪಡೆಯುವ ಸಾಧ್ಯತೆ ಇದ್ದುದರಿಂದ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ ರೋಹಿತ್‌ ತಮ್ಮ ಆಯ್ಕೆ ಮೂಲಕ ಅಚ್ಚರಿ ಮೂಡಿಸಿದರು. ಕೊನೆ 2 ದಿನ ಹೆಚ್ಚಿನ ತಿರುವು ಕಂಡುಬರುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಕಷ್ಟವಾಗಲಿದೆ ಎಂದು ರೋಹಿತ್ ಬ್ಯಾಟಿಂಗ್ ಆಯ್ದುಕೊಂಡರು ಎಂದು ವಿಶ್ಲೇಷಿಸಲಾಗುತ್ತಿದೆ.

38 ಡಕೌಟ್‌: ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38ನೇ ಬಾರಿ ಸೊನ್ನೆಗೆ ಔಟಾದರು. ಇದು ಭಾರತೀಯ ಬ್ಯಾಟರ್‌ಗಳ ಪೈಕಿ 3ನೇ ಗರಿಷ್ಠ. ಜಹೀರ್ ಖಾನ್ 43, ಇಶಾಂತ್ ಶರ್ಮಾ 40 ಬಾರಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.

13ನೇ ಓವರ್‌ನಲ್ಲಿ ಭಾರತ‌ ಮೊದಲ ಬೌಂಡ್ರಿ, ಕಿವೀಸ್‌ಗೆ ಇನ್ನಿಂಗ್ಸ್ ಲೀಡ್

ಭಾರತ ಇನ್ನಿಂಗ್ಸ್‌ನ ಮೊದಲ ಬೌಂಡರಿ ಬಾರಿಸಿದ್ದು 13ನೇ ಓವರ್‌ನಲ್ಲಿ. ರೂರ್ಕೆ ಓವರ್‌ನಲ್ಲಿ ರಿಷಭ್ ಫೋರ್ ಬಾರಿಸಿದರು. ಬಳಿಕ ಭಾರತದ ಕಡಿಮೆ ಮೊತ್ತವನ್ನು ದಾಟಿ ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಕೇವಲ 13 ಓವರ್ ಸಾಕಾಯಿತು. ಸಿರಾಜ್ ಓವರ್‌ನಲ್ಲಿ ಲೇಥಮ್ ಬಾರಿಸಿದ ಬೌಂಡರಿಯಿಂದಾಗಿ ಕಿವೀಸ್ ಮುನ್ನಡೆ ಪಡೆಯಿತು.

ಗಾಯಗೊಂಡು ಮೈದಾನ ತೊರೆದ ರಿಷಭ್ ಪಂತ್

ನ್ಯೂಜಿಲೆಂಡ್ ಇನ್ನಿಂಗ್ಸ್ ವೇಳೆ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡರು. 37ನೇ ಓವರ್ ವೇಳೆ ರಿಷಭ್ ಮಂಡಿಗೆ ಬಾಲ್ ಬಡಿಯಿತು.‌ ಇದರಿಂದಾಗಿ‌ ನೋವಿನಿಂದ ಚೀರಾಡಿದ ಅವರನ್ನು ಫಿಸಿಯೋಗಳು ಉಪಚರಿಸಿದರೂ, ನೋವು ಕಡಿಮೆಯಾಗದ ಕಾರಣ ಮೈದಾನ ತೊರೆಯುವಂತಾಯಿತು. ಬಳಿಕ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!