ಕದನ ವಿರಾಮ ಕೋರಿದ್ದ ಭಾರತ: ಪಾಕ್ ಪ್ರಧಾನಿ ಬೊಗಳೆ!
ನಮ್ಮ ದಾಳಿ ತಡೆಯಲಾಗದೇ ಭಾರತದಿಂದ ಕದನವಿರಾಮಕ್ಕೆ ಮೊರೆ: ಸೇನಾ ಮುಖ್ಯಸ್ಥ
ನಮ್ಮ ದಾಳಿ ತಡೆಯದೇ ಭಾರತದಿಂದ ಕದನ ವಿರಾಮ ಕೋರಿಕೆ
ಇಸ್ಲಾಮಾಬಾದ್: ಭಾರತದ ಭೀಕರ ದಾಳಿ ತಡೆಯಲಾಗದೇ ಕದನ ವಿರಾಮಕ್ಕೆ ಅಂಗಲಾಚಿದ್ದ ಪಾಕಿಸ್ತಾನ, ಯುದ್ಧ ನಿಲ್ಲುತ್ತಲೇ ದೇಶದ ಜನರಿಗೆ ಮಂಜುಬೂದಿ ಎರಚುವ ಕೆಲಸ ಮಾಡಿದೆ. ನಮ್ಮ ದಾಳಿಯ ಹೊಡೆತ ತಾಳದೇ ಭಾರತವೇ ಕದನ ವಿರಾಮಕ್ಕೆ ಮೊರೆ ಇಟ್ಟಿತ್ತು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬೊಗಳೆ ಬಿಟ್ಟಿದ್ದಾರೆ.
ಭಾರತದ ವಿರುದ್ಧ ಸೋತರೂ ದೇಶದ ಮುಂದೆ ಗೆದ್ದಿದ್ದೇವೆಂದು ಸುಳ್ಳು ಹೇಳಿದ್ದ ಪಾಕಿಸ್ತಾನ ಇದನ್ನು ಸಂಭ್ರಮಿಸಲು ಶುಕ್ರವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಲ್ಲಿ ಪ್ರಧಾನಿ ಷರೀಫ್ ಸುಳ್ಳಿನ ಸರಮಾಲೆಯನ್ನೇ ಜನರಿಗೆ ಹಾಕಿದ್ದಾರೆ.
ಷರೀಫ್ ಹೇಳಿದ್ದೇನು?:
ಮೇ 6-7ರ ರಾತ್ರಿ ನನಗೆ ತುರ್ತು ಕರೆ ಮಾಡಿದ್ದ ಸೇನಾ ಮುಖ್ಯಸ್ಥ, ಭಾರತ ರಾತ್ರಿ 2.30ರ ವೇಳೆ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ನಾವು ಕೂಡಾ ಪ್ರತಿದಾಳಿ ನಡೆಸಿದ್ದೇವೆ ಎಂದು ಹೇಳಿದರು. ಜೊತೆಗೆ ಪ್ರಧಾನಿಗಳೇ ಭಾರತ ಎಂದೆಂದೂ ಮರೆಯದ ರೀತಿ ದಾಳಿ ನಡೆಸಲು ನನಗೆ ಅನುಮತಿ ಕೊಡಿ ಎಂದರು. ಮುಂದೆ ಇದೇ ರೀತಿ ಮೂರು ದಿನಗಳ ಕಾಲ ಎರಡೂ ದೇಶಗಳ ನಡುವೆ ಭಾರೀ ಸಮರ ನಡೆಯಿತು. ಬಳಿಕ ಸೇನಾ ಮುಖ್ಯಸ್ಥರು ನನ್ನ ಬಳಿ ಬಂದು, ನಾವು ಭಾರೀ ಪ್ರತಿಕ್ರಿಯೆ ನೀಡಿದ ಬಳಿಕ ಭಾರತ ನಮ್ಮ ಮುಂದೆ ಕದನ ವಿರಾಮದ ಪ್ರಸ್ತಾಪ ಇಟ್ಟಿದೆ ಎಂದು ಹೇಳಿದರು.
ಆಗ ನಾನು, ಎದುರಾಳಿಯ ತಲೆ ತಿರುಗುವ ರೀತಿಯಲ್ಲಿ ಪೆಟ್ಟುಕೊಟ್ಟು ಅವರು ಕದನ ವಿರಾಮಕ್ಕೆ ಮೊರೆ ಇಡುವ ಸನ್ನಿವೇಶ ನಿರ್ಮಿಸಿದ್ದಕ್ಕಿಂತ ದೊಡ್ಡ ಸಾಧನೆ ಏನಿದೆ? ಆಯಿತು ಹೋಗಿ ಅವರ ಕದನ ವಿರಾಮ ಪ್ರಸ್ತಾಪ ಒಪ್ಪಿಕೊಳ್ಳಿ ಎಂದು ಹೇಳಿದ್ದೆ’ ಎಂದು ಷರೀಫ್ ಬೊಗಳೆ ಬಿಟ್ಟಿದ್ದಾರೆ.