ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ । ಪಾಕಿಸ್ತಾನ ಮೇಲೆ ಭಾರತ ಜಲಯುದ್ಧ

KannadaprabhaNewsNetwork | Updated : May 05 2025, 06:50 AM IST

ಸಾರಾಂಶ

ಪಹಲ್ಗಾಂ ನರಮೇಧದ ಬಳಿಕ ಸಿಂಧು ಜಲ ಒಪ್ಪಂದವನ್ನು ತಡೆ ಹಿಡಿದು ಪಾಕಿಸ್ತಾನಕ್ಕೆ ಶಾಕ್ ನೀಡಿದ್ದ ಭಾರತ ಇದೀಗ ‘ಜಲಯುದ್ಧ’ವನ್ನು ಅಧಿಕೃತವಾಗಿಯೇ ಆರಂಭಿಸಿದೆ.

 ನವದೆಹಲಿ : ಪಹಲ್ಗಾಂ ನರಮೇಧದ ಬಳಿಕ ಸಿಂಧು ಜಲ ಒಪ್ಪಂದವನ್ನು ತಡೆ ಹಿಡಿದು ಪಾಕಿಸ್ತಾನಕ್ಕೆ ಶಾಕ್ ನೀಡಿದ್ದ ಭಾರತ ಇದೀಗ ‘ಜಲಯುದ್ಧ’ವನ್ನು ಅಧಿಕೃತವಾಗಿಯೇ ಆರಂಭಿಸಿದೆ. ಸಿಂಧು ಉಪನದಿಯಾದ ಚಿನಾಬ್‌ ನದಿಯ ಬಗ್ಲಿಹಾರ್‌ ಅಣೆಕಟ್ಟೆಯಿಂದ ಪಾಕ್‌ಗೆ ನೀರನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ, ಇನ್ನೊಂದು ಉಪನದಿಯಾದ ಝೀಲಂಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್‌ಗಂಗಾ ಅಣೆಕಟ್ಟಿನಿಂದ ನೀರು ಹರಿವನ್ನು ನಿಲ್ಲಿಸಲು ಚಿಂತಿಸುತ್ತಿದೆ.

ಕಳೆದ ವಾರವಷ್ಟೇ ಭಾರತವು ಸಿಂಧು ನದಿ ಒಪ್ಪಂದ ಸ್ಥಗಿತಗೊಳಿಸಿತ್ತು. ತರುವಾಯ, ಪಾಕಿಸ್ತಾನಕ್ಕೆ ಕೆಲವು ನದಿಗಳ ಮೂಲಕ ಹೆಚ್ಚು ನೀರು ಬಿಟ್ಟಿತ್ತು. ಈ ಮೂಲಕ, ‘ನಮ್ಮಲ್ಲಿ ಪ್ರವಾಹ ಸೃಷ್ಟಿಗೆ ಭಾರತ ಕಾರಣವಾಗಿದೆ’ ಎಂದು ಅಲ್ಲಿನ ನಿವಾಸಿಗಳು ದೂರಿದ್ದರು. ಅದರ ಬೆನ್ನಲ್ಲೇ ಬಗ್ಲಿಹಾರ್‌ ಅಣೆಕಟ್ಟೆ ಮೂಲಕ ನೀರು ಹರಿವನ್ನು ನಿಲ್ಲಿಸಿ ಈಗ ಮತ್ತೊಂದು ರೀತಿಯ ಏಟು ನೀಡಿದೆ.

ಬಗ್ಲಿಹಾರ್‌ನಿಂದ ನೀರು ಬಂದ್:

ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ಪ್ರದರ್ಶಿಸುತ್ತಿರುವ ಭಾರತವು ಪಹಲ್ಗಾಂ ದಾಳಿ ಬಳಿಕ 1960ರಿಂದ ಅಸ್ತಿತ್ವದಲ್ಲಿರುವ ಸಿಂಧು ಜಲ ಹಂಚಿಕೆ ಒಪ್ಪಂದಕ್ಕೆ ತಡೆ ಒಡ್ಡಿತ್ತು.

‘ಅದರನ್ವಯ ಈಗ ಬಗ್ಲಿಹಾರ್‌ ಅಣೆಕಟ್ಟಿನ ಮೂಲಕ ಪಾಕ್‌ಗೆ ನೀರಿನ ಹರಿವನ್ನು ತಡೆದಿದೆ. ರಾಂಬನ್‌ನಲ್ಲಿರುವ ಬಗ್ಲಿಹಾರ್‌ ಅಣೆಕಟ್ಟು ಮತ್ತು ಉತ್ತರ ಕಾಶ್ಮೀರದಲ್ಲಿರುವ ಕಿಶನ್‌ಗಂಗಾ ಅಣೆಕಟ್ಟುಗಳ ಮೂಲಕ ಭಾರತವು ಪಾಕ್‌ಗೆ ಹರಿಯುವ ನೀರನ್ನು ನಿಯಂತ್ರಿಸಬಹುದಾಗಿದೆ. ಇದು ಪಾಕಿಸ್ತಾನದ ಪಾಲಿಗೆ ಮಾರಕವಾಗಬಹುದು’ ಎಂದು ಮೂಲಗಳು ಹೇಳಿವೆ.

ಬಗ್ಲಿಹಾರ್‌ ಅಣೆಕಟ್ಟು ಕುರಿತ ವಿವಾದ ಎರಡು ದೇಶಗಳ ನಡುವಿನ ದೀರ್ಘಕಾಲದ ವಿಷಯವಾಗಿದ್ದು ಈ ಹಿಂದೆ ಪಾಕಿಸ್ತಾನವು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು. ಕಿಶನ್‌ಗಂಗಾ ಅಣೆಕಟ್ಟೆ ಕುರಿತೂ ಕೆಲ ಕಾಲ ಬಿಕ್ಕಟ್ಟು ಇತ್ತು.

ಪಾಕ್‌ ಬಳಿ ಇರೋದು4 ದಿನಕ್ಕಾಗುವಷ್ಟೇಮದ್ದುಗುಂಡುಗಳು!ಇಸ್ಲಾಮಾಬಾದ್‌: ‘ಒಂದು ವೇಳೆ ಭಾರತದ ಜತೆಗೇನಾದರೂ ಯುದ್ಧ ನಡೆದರೆ 4 ದಿನಗಳಿಗಾಗುವಷ್ಟು ಮದ್ದುಗುಂಡುಗಳ ದಾಸ್ತಾನಷ್ಟೇ ಪಾಕಿಸ್ತಾನದ ಬಳಿ ಇದೆ. ಉಕ್ರೇನ್‌-ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ರಹಸ್ಯವಾಗಿ ಉಕ್ರೇನ್‌ಗೆ ಅದು ಮದ್ದುಗುಂಡುಗಳನ್ನು ಸರಬರಾಜು ಮಾಡಿದ್ದು, ಅದರ ಪರಿಣಾಮ ಇದೀಗ ಅದರ ಮದ್ದುಗುಂಡುಗಳ ಕೋಠಿ ಬರಿದಾಗಿದೆ’ ಎಂದು ಮೂಲಗಳು ತಿಳಿಸಿವೆ.

 ಭಾರತದ ಹಡಗುಗಳಿಗೆ ಪಾಕಿಸ್ತಾನದ ನಿರ್ಬಂಧಇಸ್ಲಾಮಾಬಾದ್‌/ನವದೆಹಲಿ: ಭಾರತವು ಪಾಕಿಸ್ತಾನದ ಹಡಗುಗಳಿಗೆ ತನ್ನ ಬಂದರು ಪ್ರವೇಶಿಸಲು ನಿರ್ಬಂಧ ಹೇರಿದ ಬೆನ್ನಲ್ಲೇ ಇದೀಗ ಪಾಕ್‌ ಕೂಡ ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ. ಭಾರತದ ಹಡಗುಗಳಿಗೆ ತನ್ನ ಬಂದರು ಪ್ರವೇಶ ನಿಷೇಧಿಸಿ ಪಾಕಿಸ್ತಾನ ಆದೇಶ ಹೊರಡಿಸಿದೆ.

Share this article