ಉಕ್ರೇನ್‌ ಬಿಕ್ಕಟ್ಟು ಇತ್ಯರ್ಥಕ್ಕೆ ಎಲ್ಲಾ ನೆರವು: ಮೋದಿ

KannadaprabhaNewsNetwork |  
Published : Oct 23, 2024, 12:47 AM ISTUpdated : Oct 23, 2024, 12:48 AM IST
ಮೋದಿ-ಪುಟಿನ್‌ | Kannada Prabha

ಸಾರಾಂಶ

‘ರಷ್ಯಾ ಮತ್ತು ಉಕ್ರೇನ್‌ ನಡುವಿನ ವೈಷಮ್ಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಪುನರುಚ್ಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಕ್ರೇನ್‌ ಬಿಕ್ಕಟ್ಟು ಇತ್ಯರ್ಥಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಭಾರತ ಸಿದ್ಧ’ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ರಷ್ಯಾ ನೆಲದಲ್ಲೇ ಶಾಂತಿ ಮಂತ್ರ ಜಪಿಸಿದ್ದಾರೆ.

ಪಿಟಿಐ ಕಝಾನ್‌ (ರಷ್ಯಾ)

‘ರಷ್ಯಾ ಮತ್ತು ಉಕ್ರೇನ್‌ ನಡುವಿನ ವೈಷಮ್ಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು’ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಪುನರುಚ್ಚಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಉಕ್ರೇನ್‌ ಬಿಕ್ಕಟ್ಟು ಇತ್ಯರ್ಥಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡಲು ಭಾರತ ಸಿದ್ಧ’ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ರಷ್ಯಾ ನೆಲದಲ್ಲೇ ಶಾಂತಿ ಮಂತ್ರ ಜಪಿಸಿದ್ದಾರೆ.

16ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ರಷ್ಯಾದ ಕಝಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಈ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ‘ರಷ್ಯಾ- ಉಕ್ರೇನ್‌ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧ’ ಎಂದು ಭರವಸೆ ನೀಡಿದರು.

ಇದಕ್ಕೆ ಮುನ್ನ ಕೂಡಾ ಮಾತನಾಡಿದ ಮೋದಿ, ‘ಇಡೀ ವಲಯದಲ್ಲಿ ಆದಷ್ಟು ಶೀಘ್ರ ಶಾಂತಿ ಮರುಸ್ಥಾಪನೆಯನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ. ರಷ್ಯಾ- ಉಕ್ರೇನ್ ನಡುವಿನ ಸಂಘರ್ಷ ಸಂಬಂಧ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಈ ಮೊದಲೂ ಹೇಳಿದಂತೆ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮ ನಂಬಿಕೆ. ನಮ್ಮೆಲ್ಲಾ ಪ್ರಯತ್ನಗಳೂ ಮಾನವೀಯತೆಗೆ ಆದ್ಯತೆ ನೀಡುತ್ತವೆ. ಈ ಸಂಬಂಧ ಮುಂಬರುವ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರಕ್ಕೂ ಭಾರತ ಸಿದ್ಧ. ಎಲ್ಲಾ ವಿಷಯಗಳನ್ನೂ ಚರ್ಚಿಸಲೂ ನಾವು ಅವಕಾಶ ಹೊಂದಿದ್ದೇವೆ’ ಎಂದು ಹೇಳಿದರು.

3 ತಿಂಗಳಲ್ಲಿ 2ನೇ ಭೇಟಿ:

ಇದೇ ವೇಳೆ ಕಳೆದ 3 ತಿಂಗಳಲ್ಲಿ ರಷ್ಯಾಕ್ಕೆ ಎರಡನೇ ಭೇಟಿ ನೀಡುತ್ತಿರುವುದು, ಎರಡೂ ದೇಶಗಳ ನಡುವೆ ಆಪ್ತ ಸಮನ್ವಯ ಮತ್ತು ಆಳವಾದ ನಂಬಿಕೆಗೆ’ ಸಾಕ್ಷಿ ಎಂದು ಪ್ರಧಾನಿ ಮೋದಿ ಹೇಳಿದರು.

ಭಾಷಾಂತರಕಾರನ ಅಗತ್ಯವಿಲ್ಲ: ಪುಟಿನ್‌

ಕಝಾನ್: ‘ನನ್ನ ಹಾಗೂ ನರೇಂದ್ರ ಮೋದಿ ಸ್ನೇಹ ಸಂಬಂಧ ಎಷ್ಟು ಗಟ್ಟಿ ಆಗಿದೆ ಎಂದರೆ ನನ್ನ ಭಾಷೆಯನ್ನು ಅರ್ಥೈಸಿಕೊಳ್ಳಲು ಮೋದಿ ಅವರಿಗೆ ಭಾಷಾಂತರಕಾರರ ಅಗತ್ಯವೇ ಇಲ್ಲ’ ಎಂದು ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಚಟಾಕಿ ಹಾರಿಸಿರು. ಆಗ ಮೋದಿ ಅವರು ಸಂತಸಗೊಂಡು ನಕ್ಕರು.

==

ಮೋದಿ-ಚೀನಾ ಅಧ್ಯಕ್ಷ ಭೇಟಿ ಇಂದು

ಕಝಾನ್ (ರಷ್ಯಾ): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಬುಧವಾರ ಬ್ರಿಕ್ಸ್‌ ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿ ಮಾಡಲಿದ್ದಾರೆ. ಉಭಯ ನಾಯಕರ ನಡುವೆ 5 ವರ್ಷಗಳ ನಂತರ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಸಭೆ ಇದಾಗಲಿದೆ.2019ರಲ್ಲಿ ಗಲ್ವಾನ್‌ನಲ್ಲಿ ಭಾರತ-ಚೀನಾ ಸೈನಿಕರು ಕಾದಾಡಿಕೊಂಡ ಬಳಿಕ ಉಭಯ ನಾಯಕರ ದ್ವಿಪಕ್ಷೀಯ ಸಭೆ ನಡೆದಿರಲಿಲ್ಲ. ಹೀಗಾಗಿ ಈ ಸಭೆ ಮಹತ್ವ ಪಡೆದಿದೆ.

ಲಡಾಖ್‌ನ ಗಲ್ವಾನ್‌ ಗಡಿಯಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದ್ದ 2 ಗಡಿ ಪ್ರದೇಶಗಳಲ್ಲಿ ಜಂಟಿ ಗಸ್ತು ತಿರುಗಿ ಸಂಘರ್ಷ ಅಂತ್ಯಕ್ಕೆ ಸೋಮವಾರವಷ್ಟೇ ಭಾರತ-ಚೀನಾ ನಿರ್ಧರಿಸಿದ್ದವು. ಅದರ ಬೆನ್ನಲ್ಲೇ ಈ ಭೇಟಿ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.

==

ಕೃಷ್ಣ ಭಜನೆಯೊಂದಿಗೆ ಮೋದಿ ಸ್ವಾಗತಿಸಿದ ರಷ್ಯನ್ನರು

ಕಝಾನ್‌ (ರಷ್ಯಾ): ಬ್ರಿಕ್ಸ್ ಶೃಂಗ ಸಭೆಗೆ ಪಾಲ್ಗೊಳ್ಳಲು ರಷ್ಯಾಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯನ್ನರು ಕೃಷ್ಣ ಭಜನೆಯೊಂದಿಗೆ ಸ್ವಾಗತಿಸಿದರು. ಇಲ್ಲಿನ ಇಸ್ಕಾನ್ ದೇಗುಲದ ಕೃಷ್ಣ ಭಕ್ತರು ಮೋದಿ ಅವರಿಗಾಗಿ ಕೃಷ್ಣ ಭಜನೆ ಮತ್ತು ಸಂಸ್ಕೃತ ಸ್ವಾಗತ ಗೀತೆಯನ್ನು ಹಾಡಿದರು.ರಷ್ಯಾಗೆ ಬಂದ ಮೋದಿಯವರನ್ನು ಹೋಟೆಲ್‌ ಕಾಸ್ಟರ್ನ್‌ನಲ್ಲಿ ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಸ್ವಾಗತಿಸಿದರು. ಬಳಿಕ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಇಸ್ಕಾನ್‌ನ ಕೃಷ್ಣ ಭಕ್ತರು ಕೃಷ್ಣ ಭಜನೆಯನ್ನು ಚಪ್ಪಾಳೆ ತಟ್ಟುತ್ತಾ ಹಾಡಿದರು. ಇದನ್ನು ಮೋದಿ ಕುತೂಹಲದಿಂದ ವೀಕ್ಷಿಸಿದರು.ಇದೇ ವೇಳೆ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಕಲಾವಿದರ ತಂಡವೊಂದು ರಷ್ಯಾದ ನೃತ್ಯ ಪ್ರದರ್ಶಿಸಿದರು. ಇದನ್ನು ಪ್ರಧಾನಿ ಕಣ್ತುಂಬಿಕೊಂಡರು.

==

ಇರಾನ್‌ ಅಧ್ಯಕ್ಷರ ಜತೆ ಮೋದಿ ಭೇಟಿ

ಕಝಾನ್‌: ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿದ್ದಾರೆ.

ಭಾರತದ ಮಿತ್ರರಾಷ್ಟ್ರಗಳಲ್ಲಿ ಒಂದಾದ ಇಸ್ರೇಲ್‌ ಹಾಗೂ ಇರಾನ್‌ ನಡುವೆ ಯುದ್ಧದ ಪರಿಸ್ಥಿತಿ ಇರುವಾಗ ಈ ಭೇಟಿ ನಡೆದಿರುವುದು ಮಹತ್ವ ಪಡೆದುಕೊಂಡಿದೆ.ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಪೆಜೆಶ್ಕಿಯಾನ್ ಇರಾನ್‌ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರೊಂದಿಗೆ ನಡೆದ ಮೊದಲ ಭೇಟಿ ಇದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ