ಭಾರತದ ‘ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಗಳು ‘ಬಾಂಗ್ಲಾದೇಶದ ಭಾಗ’ : ಹೊಸ ಕ್ಯಾತೆ

KannadaprabhaNewsNetwork |  
Published : Dec 21, 2024, 01:15 AM ISTUpdated : Dec 21, 2024, 04:55 AM IST
india - bangladesh flag

ಸಾರಾಂಶ

ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಆಪ್ತ ಸಹಾಯಕ ಮತ್ತು ಮಧ್ಯಂತರ ಸರ್ಕಾರದ ಸಲಹೆಗಾರ ಮಹ್ಫುಜ್ ಆಲಂ ಅವರು ‘ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಗಳು ‘ಬಾಂಗ್ಲಾದೇಶದ ಭಾಗ’ ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದಾರೆ.

ನವದೆಹಲಿ: ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಆಪ್ತ ಸಹಾಯಕ ಮತ್ತು ಮಧ್ಯಂತರ ಸರ್ಕಾರದ ಸಲಹೆಗಾರ ಮಹ್ಫುಜ್ ಆಲಂ ಅವರು ‘ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಗಳು ‘ಬಾಂಗ್ಲಾದೇಶದ ಭಾಗ’ ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಲ್ಲದೆ, ‘ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ ನೀಡಬೇಕು’ ಎಂದೂ ಕರೆ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಅವರು ಇದನ್ನು ಬರೆದು ನಂತರ ಡಿಲೀಟ್‌ ಮಾಡಿದ್ದಾರೆ. ಆದಾಗ್ಯೂ ಅವರ ಈ ಹೇಳಿಕೆ ಭಾರತವನ್ನು ಕೆರಳಿಸಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಬಾಂಗ್ಲಾದೇಶದ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಇಂತಹ ಹೇಳಿಕೆ ಕೊಡುವಾಗ ಗಮನವಿರಲಿ. ಭಾರತವು ಬಾಂಗ್ಲಾದ ಮಧ್ಯಂತರ ಸರ್ಕಾರ ಹಾಗೂ ಅಲ್ಲಿನ ಜನರೊಂದಿಗೆ ಸಂಬಂಧ ವೃದ್ಧಿಗೆ ಮುಂದಾಗುತ್ತಿರುವ ಹೊತ್ತಿನಲ್ಲಿ, ಜವಾಬ್ದಾರಿಯುತ ಹೇಳಿಕೆ ಕೊಡುವುದು ಅಗತ್ಯ’ ಎಂದು ಬುದ್ಧಿವಾದ ಹೇಳಿದ್ದಾರೆ.

ಅಲ್ಲದೆ, ‘ಈ ಕುರಿತ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ’ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಬಾಂಗ್ಲಾ ಹಿಂದೂಗಳ ಮೇಲೆ 2200ಕ್ಕೂ ಅಧಿಕ ದಾಳಿ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತರ ಮೇಲೆ ಈ ವರ್ಷದ ಆರಂಭದಿಂದ ಡಿ.8ರ ವರೆಗೆ 2,200ಕ್ಕೂ ಅಧಿಕ ದಾಳಿಗಳು ನಡೆದಿವೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ. ಜತೆಗೆ, ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದೆ.

ಈ ಕುರಿತು ವಿದೇಶಾಂಗ ಇಲಾಖೆಯ ರಾಜ್ಯಸಚಿವ ಕೀರ್ತಿ ವರ್ಧನ್‌ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, ವಿವಿಧ ದೇಶಗಳಲ್ಲಿನ ಹಿಂದೂಗಳ ದಾಳಿ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.

‘ಈ ವರ್ಷದ ಅಕ್ಟೋಬರ್‌ ವರೆಗೆ ಪಾಕಿಸ್ತಾನದ ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ಮೇಲೆ 122 ದಾಳಿಗಳಾಗಿವೆ. 2022ರಲ್ಲಿ ದಾಳಿಗಳ ಸಂಖ್ಯೆ ಪಾಕ್‌ನಲ್ಲಿ 241 ಹಾಗೂ ಬಾಂಗ್ಲಾದಲ್ಲಿ 47 ಇತ್ತು. 2023ರಲ್ಲಿ ಪಾಕಿಸ್ತಾನದಲ್ಲಿ 103 ಹಾಗೂ ಬಾಂಗ್ಲಾದಲ್ಲಿ 302 ದಾಳಿಗಳು ವರದಿಯಾಗಿವೆ’ ಎಂದು ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕು ಸಂಘಟನೆಯ ಅಂಕಿಅಂಶಗಳನ್ನಾಧರಿಸಿ ಮಾಹಿತಿ ನೀಡಿದ್ದಾರೆ.ಇದೇ ವೇಳೆ, ಇವೆರಡು ದೇಶಗಳನ್ನು ಹೊರತುಪಡಿಸಿ ಅನ್ಯ ನೆರೆರಾಷ್ಟ್ರಗಳಲ್ಲಿ ಹಿಂದೂ ಹಾಗೂ ಅಲ್ಪಸಂಖ್ಯಾತರ ಮೇಲೆ ಶೂನ್ಯ ದಾಳಿಗಳಾಗಿವೆ ಎಂದಿದ್ದಾರೆ.

ಇದೇ ವೇಲೆ, ಬಾಂಗ್ಲಾ ಸರ್ಕಾರದೆದುರು ಕಳವಳ ವ್ಯಕ್ತಪಡಿಸಿರುವ ಭಾರತ, ಹಿಂದೂ ಹಾಗೂ ಅನ್ಯ ಅಲ್ಪಸಂಖ್ಯಾತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ ಎಂದು ಸಚಿವರು ಹೇಳಿದ್ದಾರೆ.

ತೆಲಂಗಾಣ: ಕೆಟಿಆರ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲು

ಹೈದರಾಬಾದ್‌: ತೆಲಂಗಾಣದ ಬಿಆರ್‌ಎಸ್‌ ಪಕ್ಷದ ನಾಯಕ ಕೆ.ಟಿ. ರಾಮ ರಾವ್‌ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆಯ ಕೇಸ್‌ ದಾಖಲಿಸಿದೆ. 2023ರ ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಪಾರ್ಮುಲಾ-ಇ ರೇಸ್‌ ವೇಳೆ ಫಾರ್ಮುಲಾ-ಇ ಕಂಪನಿಗೆ 55 ಕೋಟಿ ರು. ಹಣ ಪಾವತಿಯಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಏನು?:ಕಳೆದ ವರ್ಷ ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿ ಪಾರ್ಮುಲಾ-ಇ (ಕಾರ್‌ ರೇಸ್‌)ರೇಸ್‌ ನಡೆಸುವ ಸಲುವಾಗಿ ಅಕ್ರಮವಾಗಿ 55 ಕೋಟಿ ರು. ಪಾವತಿಸಲಾಗಿತ್ತು. ಈ ಪಾವತಿಯನ್ನು ವಿದೇಶಿ ಕರೆನ್ಸಿಯಲ್ಲೂ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಿಎಂ ಕೆಸಿಆರ್‌ ಪುತ್ರ ಕೆಟಿಆರ್‌ ಅವರನ್ನು ಆರೋಪಿ-1 ಆಗಿದ್ದು, ಹಿರಿಯ ಐಎಎಸ್‌ ಅಧಿಕಾರಿ ಅರವಿಂದ್‌ ಕುಮಾರ್‌ ಹಾಗೂ ನಿವೃತ್ತ ಅಧಿಕಾರಿ ಬಿ.ಎಲ್‌.ಎನ್‌ ರೆಡ್ಡಿ ಅವರನ್ನು 2 ಹಾಗೂ 3ನೇ ಆರೋಪಿ ಮಾಡಲಾಗಿದೆ.ಆದರೆ ತಮ್ಮ ಮೇಲಿನ ಆರೋಪ ತಳ್ಳಿಹಾಕಿರುವ ಕೆಟಿಆರ್‌, ‘ಇದರಲ್ಲಿ ಅಕ್ರಮವೇನಿದೆ? ನಾನು 55 ಕೋಟಿ ಪಾವತಿಸಿದೆ, ಅವರು ಸ್ವೀಕರಿಸಿದರು. ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಖಾತೆಯಿದ್ದು, ಅದರಿಂದಲೇ ಹಣ ವರ್ಗಾಯಿಸಲಾಗಿದೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ